Dharwad Mango: ಸಪ್ತ ಸಾಗರದಾಚೆಗೆ ರಫ್ತಾಗಲು ಸಿದ್ಧ: ಪೇಡಾ ಜೊತೆ 'ಆಫೋಸಾ' ಮಾವಿಗೆ ಭಾರೀ ಡಿಮ್ಯಾಂಡ್
ಧಾರವಾಡ, ಮೇ 13: ಉತ್ತರ ಕರ್ನಾಟಕದಲ್ಲಿರುವ ಧಾರವಾಡಕ್ಕೆ ಪೇಡಾ ನಗರಿ, ವಿದ್ಯಾಕಾಶಿ ಎಂದೆಲ್ಲ ಹೆಸರಿದೆ. ಮುಂದಿನ ದಿನಗಳಲ್ಲಿ ವಿಶೇಷ 'ಮಾವು' ನಗರ ಎಂದು ಹೆಸರು ಬಂದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಧಾರವಾಡದ ಮಾವು ಈ ಬಾರಿ ಅಮೆರಿಕಾದಲ್ಲೂ ಸದ್ದು ಮಾಡುತ್ತಿದೆ.
ಹೌದು, ಸೌದಿ ರಾಷ್ಟ್ರಗಳಲ್ಲಿ ಅತ್ಯಧಿಕ ಬೇಡಿಕೆ ಇರುವ ಮಾವೊಂದು ಧಾರವಾಡದಲ್ಲಿ ಉತ್ಕೃಷ್ಟವಾಗಿ ಬೆಳೆದಿರುವ ಮಾಹಿತಿ ಪಡೆದು ಅಮೆರಿಕಾದಿಂದಲೂ ಈ ಮಾವಿಗೆ ಬೇಡಿಕೆ ಬಂದಿದೆ. ಕೆಲವೇ ದಿನಗಳಲ್ಲಿ ಧಾರವಾಡದ ರೈತರೊಬ್ಬರು ಬೆಳೆದ ಮಾವು ಟನ್‌ಗಟ್ಟಲೆ ಸಪ್ತಸಾಗರಾದಾಚೆಯ ದೇಶಗಳಿಗೆ ಮಾರಾಟವಾಗಲಿದೆ.

ಸದ್ಯ ಮಾವಿನ ಸೀಸನ್ ಶುರುವಾಗಿದೆ. ಧಾರವಾಡದಲ್ಲಿ "ಆಫೋಸಾ" (ಆಲ್ಫ್ಯಾನ್ಸೋ) ಎನ್ನುವ ಹೆಸರು ಕೂಡ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಬೇರೆಲ್ಲ ಕಡೆಗೂ ಮಾವು ಸಿಗುತ್ತದೆ. ಆದರೂ ಸಹಿತ ಧಾರವಾಡದಲ್ಲಿ ಬೆಳೆದಿರುವ ಈ 'ಆಫೋಸಾ' ಮಾವಿನ ಹಣ್ಣು (Alphonso) ತನ್ನದೇ ಆದ ರುಚಿಯ ಮೂಲಕ ಇದೀಗ ಸೌದಿ ರಾಷ್ಟ್ರಗಳ ಜೊತೆಗೆ ಸಪ್ತಸಾಗರದಾಚೆಯ ವಿಶ್ವದ ದೊಡ್ಡಣ್ಣ ದೇಶ ಅಮೆರಿಕಾದಲ್ಲೂ ಬೇಡಿಕೆ ಕಂಡುಕೊಂಡಿದೆ.
ಅಮೆರಿಕಾಗೆ ಧಾರವಾಡ ಮಾವು ರಫ್ತು: ತಯಾರಿ
ಧಾರವಾಡ ಭಾಗದ ಮಾವು ಭಾರತದ ವಿವಿಧ ರಾಜ್ಯಗಳಲ್ಲಿ ಮಾರಾಟವಾಗುತ್ತಿದ್ದವು. ಇದೇ ಮೊದಲ ಬಾರಿಗೆ ಈ ಆಫೋಸಾ ಮಾವು ದೇಶದ ವಿವಿಧ ರಾಜ್ಯಗಳಿಗೆ ರವಾನೆ ಆಗಲಿವೆ. ಅಮೆರಿಕಾಗೆ ಟನ್‌ಗಟ್ಟಲೇ ಮಾವು ರಫ್ತಾಗಲು ತಯಾರಿ ನಡೆದಿದೆ. ಈ ಹಿಂದಿನ ಎರಡು ವರ್ಷಗಳಿಂದ ಸೌದಿ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು.

ಧಾರವಾಡಕ್ಕೆ ಭೇಟಿ ಕೊಟ್ಟಿದ್ದ ಅಮೆರಿಕಾದ ಐವರು
ಈ ಹಣ್ಣಿನ ಜಾಡು ಪತ್ತೆ ಮಾಡಿರುವ ಅಮೆರಿಕಾದ ಐವರು ಕಳೆದ ತಿಂಗಳು ಧಾರವಾಡ ತಾಲೂಕಿನ ಕಲಿಕೇರಿ ಗ್ರಾಮದ ಬಳಿ ಇರುವ ಪ್ರಮೋದ್ ಗಾಂವ್ಕರ್ ಎಂಬ ಮಾವು ಬೆಳೆಗಾರ ರೈತನನ್ನು ಭೇಟಿ ಮಾಡಿದ್ದಾರೆ. ಅವರ ತೋಟದಲ್ಲಿ ಬೆಳೆದ ಆಫೋಸಾ ಮಾವಿನ ಕಾಯಿ ಪರೀಕ್ಷಿಸಿದ್ದಾರೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ಮಾವು ಸಿಗುವುದು ಅವರಿಗೆ ಖಚಿತವಾಗುತ್ತಿದ್ದಂತೆ ತಮ್ಮ ದೇಶಕ್ಕೆ ಐದು ಟನ್ ಮಾವು ಕಳುಹಿಸುವಂತೆ ಅವರು ಆರ್ಡರ್ ಮಾಡಿದ್ದಾರೆ.
ಮಳೆ ಕೊರತೆ ಇನ್ನಿತರ ಕಾರಣಗಳಿಂದ ಈ ಬಾರಿ ಮಾವು ಇಳುವರಿ ಕಡಿಮೆ ಇದೆ ಎಂದು ತಿಳಿಸಿರುವ ಪ್ರಮೋದ್ ಗಾಂವ್ಕರ್ ಅವರು 3 ಟನ್ ಮಾವು ರಫ್ತು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಅಮೇರಿಕಾದ ಸ್ಯಾನ್ಫ್ರಾನ್ಸಿಸ್ಕೋ ಹಾಗೂ ಚಿಕಾಗೋದಿಂದ ಈ ಬಾರಿ ಧಾರವಾಡ ಮಾವಿಗೆ ಬೇಡಿಕೆ (ಆರ್ಡರ್) ಬಂದಿದೆ.
ಮೂರು ಟನ್ ಮಾವು ರವಾನೆಗೆ ಒಪ್ಪಿಗೆ
ಮುಂದಿನ ದಿನಗಳಲ್ಲಿ ಮೂರು ಟನ್ ಮಾವು ಮುಂಬೈಗೆ ರವಾನೆಯಾಗಿ ಅಲ್ಲಿಂದ ವಿದೇಶಕ್ಕೆ ಹೋಗಲಿದೆ. ಮುಂಬೈವರೆಗೆ ಸಾಗಿಸಲು ವಿಶೇಷವಾದ ವಾಹನ ಕಳುಹಿಸಿದ್ದಾರೆ. ಮುಂಬೈ ತಲುಪಿದ ಬಳಿಕ ಅಲ್ಲಿ ಮತ್ತೊಮ್ಮೆ ಗುಣಮಟ್ಟವನ್ನು ಪರೀಕ್ಷಿಸಿ, ಅಲ್ಲಿಂದ ನೇರವಾಗಿ ಅಮೆರಿಕಾಕ್ಕೆ ರಫ್ತು ಮಾಡಲಾಗುತ್ತದೆ ಎಂದು ಮಾಹಿತಿ ಇದೆ.
ಮಾವು ಬೆಳೆಗಾರ ರೈತ ಪ್ರಮೋದ್ ಅವರು ಒಟ್ಟು 50 ಎಕರೆ ಪ್ರದೇಶದಲ್ಲಿ ಮಾವು ಬೆಳೆದಿದ್ದಾರೆ. ಇಲ್ಲಿ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಈ ಮೂಲಕ ಕರ್ನಾಟಕದಾದ್ಯಂತ ಮಾವು ಬೆಳೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಗುರುತಿಸಿಕೊಂಡಿದ್ದಾರೆ. ತೋಟಗಾರಿಕೆ ಹಾಗೂ ಹೊಸ ಪ್ರಯೋಗಗಳ ಮೇಲಿನ ಅವರ ಆಸಕ್ತಿ ಇಂದು ಅಮೆರಿಕಾದಿಂದ ಬೇಡಿಕೆ ಬರಲು ಕಾರಣವಾಗಿದೆ.
ಪ್ರತಿ ಕೆಜಿ ಮಾವು ಬೆಲೆ ಎಷ್ಟಿದೆ?
ಈ ಮಾವಿಗೆ ಪ್ರತಿ ಕೆಜೆ 175 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಇದೇ ವೇಳೆ ಸ್ಥಳೀಯವಾಗಿಯೂ ಈ ತೋಟದ ಹಣ್ಣಿಗೆ ಭಾರೀ ಡಿಮ್ಯಾಂಡ್ ಬಂದಿದೆ. ನಿತ್ಯವೂ ಹತ್ತಾರು ಕ್ವಿಂಟಾಲ್ ಹಣ್ಣು ಮಾರುಕಟ್ಟೆಗೆ ಹೋಗುತ್ತಲೇ ಇವೆ. ಕಳೆದ ನಾಲ್ಕಾರು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಮಾವು ಬಂದಿರಲೇ ಇಲ್ಲ. ಪ್ರಮೋದ್ ಅವರ ತೋಟದ ಹಣ್ಣಗಳು ವಿದೇಶಕ್ಕೆ ಹೋಗುತ್ತಿರುವುದು ಧಾರವಾಡ ರೈತರಿಗೆ ಮಾತ್ರವಲ್ಲದೇ ನಾಡಿಗೆ ಹೆಮ್ಮ ಮತ್ತು ಖುಷಿಯ ಸಂಗತಿಯಾಗಿದೆ.
ಮಾವು ಬೆಳೆಯಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಕೈಗೊಳ್ಳುತ್ತಿದ್ದೆ. 50 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಹಣ್ಣಿನ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಯಾವುದೇ ರಾಸಾಯನಿಕ ಬಳಕೆ ಮಾಡದೆ ನೈಸರ್ಗಿಕವಾಗಿ ಮಾವಿನ ಕಾಯಿಗಳನ್ನು ಹಣ್ಣು ಮಾಡುತ್ತೇವೆ. ಇದರಿಂದಾಗಿ ಅಮೇರಿಕಾದ ಮಾರಾಟಗಾರರು ಪ್ರಭಾವಿತರಾಗಿ ಹಣ್ಣು ಖರೀದಿಸಲು ಮುಂದೆ ಬಂದಿದ್ದಾರೆ ಎಂದು ಪ್ರಮೋದ ಗಾಂವ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications