ದೆಹಲಿ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಕಾಲೆಳೆದ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಫೆಬ್ರವರಿ 08: ದೆಹಲಿ ಚುನಾವಣೆ ಫಲಿತಾಂಶ ಬಹುತೇಕ ಅಂತಿಮವಾಗಿದ್ದು, ಬಿಜೆಪಿ ಮೇಲುಗೈ ಸಾಧಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖುಷಿ ವ್ಯಕ್ತಪಡಿಸಿದ್ದು, ದೇಶದಲ್ಲಿ ಪ್ರಜಾಪ್ರಭುತ್ವದ ಯಶಸ್ವಿಗಾಗಿ ಪ್ರಜಾಸತ್ತಾತ್ಮಕ ವಿರೋಧ ಪಕ್ಷ ಇರಬೇಕು ಎನ್ನುವುದು ನಮ್ಮ ಆಸೆ. ಆದರೆ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದಾದ್ಯಂತ ನಶಿಸಿ ಹೋಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿಯ ಪರವಾಗಿ ತೀರ್ಪು ಬರುತ್ತಿದೆ. ಪ್ರಸ್ತುತ ನೋಡುತ್ತಿದ್ದರೆ 46ಕ್ಕಿಂತ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ. ನಮಗೆ ನಿಚ್ಚಳ ಬಹುಮತ ದೆಹಲಿ ಜನ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಪ್ರಧಾನ ಮಂತ್ರಿ ಸೇರಿದಂತೆ ಚುನಾವಣೆಗೆ ಮುಂಚೂಣಿಯಲ್ಲಿ ನಿಂತು ನಡೆಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ನಾಕರಾತ್ಮಕ ರಾಜಕಾರಣಕ್ಕೆ ಜನ ಸರಿಯಾದ ಪೆಟ್ಟು ಕೊಟ್ಟು ಸೋಲಿನ ಹಾದಿ ತೋರಿಸಿದ್ದಾರೆ. ಭ್ರಷ್ಟಚಾರ ವಿರೋಧಿ ಆಂದೋಲನದಲ್ಲಿ ಬಂದು ಭ್ರಷ್ಟತನವನ್ನೇ ಆಧಾರ ಮಾಡಿಕೊಂಡು ಆರಾಜಕತೆ ಸೃಷ್ಟಿಸಿವರಿಗೆ ಜನ ಕಾಪಾಳ ಮೋಕ್ಷ ಮಾಡಿದ್ದಾರೆ ಎಎಪಿ ಪಕ್ಷದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.
ಇನ್ನು ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಇಷ್ಟು ಕೆಟ್ಟದಾಗಿ ಅಸ್ತಿತ್ವ ಕಳೆದುಕೊಳ್ಳಬಾರದಿತ್ತು. ಈ ಚುನಾವಣೆಯಿಂದ ಕಾಂಗ್ರೆಸ್ ಸಂಪೂರ್ಣ ಜೀರೋ ಆಗಿದೆ. ನಾನು ಸೋಲು-ಗೆಲುವಿನ ಬಗ್ಗೆ ಮಾತನಾಡುತ್ತಿಲ್ಲ. ಇಂತಹ ಸ್ಥಿತಿ ಒಂದು ಪಕ್ಷಕ್ಕೆ ಒಳ್ಳೆದಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ದೇಶದಾದ್ಯಂತ ನಶಿಸಿ ಹೋಗುತ್ತಿದೆ. ಇದು ದುರ್ದೈವದ ಸಂಗತಿ ಎಂದು ಹೇಳಿದರು.

ಇನ್ನು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿ ಭರ್ಜರಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಈ ಬಾರಿ ಬಿಜೆಪಿಯ ಅಬ್ಬರದ ಎದುರು ದೆಹಲಿಯಲ್ಲಿ ಎರಡು ಬಾರಿ ಅಧಿಕಾರ ನಡೆಸಿದ ಆಮ್ ಆದ್ಮಿ ಪಕ್ಷ ಸೋಲು ಅನುಭವಿಸಿದೆ. ಈ ಬಾರಿ ಎಎಪಿ ಏಕಾಏಕಿ ಕುಸಿದಿದ್ದು, 27 ವರ್ಷಗಳ ಬಳಿಕ ಬಿಜೆಪಿಗೆ ಅಧಿಕಾರ ಸಿಗುವಂತಾಗಿದೆ.












Click it and Unblock the Notifications