ಯಮನೂರು ಲಾಠಿ ಚಾರ್ಜ್, ಸಿದ್ದರಾಮಯ್ಯ ವಿಷಾದ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 04 : ಯಮನೂರಿನಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್‌ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ಅಮಾಯಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ವೃದ್ಧರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಅವರು ಹೇಳಿದ್ದಾರೆ.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಮಹದಾಯಿ ನ್ಯಾಯ ಮಂಡಳಿ ಆದೇಶ ಹೊರಬಿದ್ದ ಬಳಿಕ ಜುಲೈ 27 ಮತ್ತು 28ರಂದು ಹೋರಾಟಗಾರರು ಪ್ರತಿಭಟನೆ ಮಾಡಿದ್ದಾರೆ' ಎಂದರು.[ಯಮನೂರು ದೌರ್ಜನ್ಯ, ವರದಿ ಕೇಳಿದ ಹೈಕೋರ್ಟ್]

Yamanuru village

'ಈ ಸಂಬಂಧ 187 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 24 ಕೇಸುಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿರುವ, ಧ್ವಂಸ ಮಾಡಿರುವ ಸಂಬಂಧ ಈ ಕೇಸುಗಳು ದಾಖಲಾಗಿವೆ. ಜಾಮೀನು ರಹಿತ ಕೇಸುಗಳೂ ಹೋರಾಟಗಾರರ ವಿರುದ್ಧ ದಾಖಲಾಗಿದೆ' ಎಂದು ಹೇಳಿದರು.[ಮಹಿಳಾ ಆಯೋಗದ ಅಧ್ಯಕ್ಷರಿಗೆ ಯಮನೂರು ಜನರ ತರಾಟೆ]

'ಲಾಠಿ ಪ್ರಹಾರ ಸಂಬಂಧ ಪೊಲೀಸ್ ಇನ್‌ಸ್ಪೆಕ್ಟರ್, ಪಿಎಸ್‍ಐ ಮತ್ತು 8 ಪೇದೆಗಳನ್ನು ಅಮಾನತು ಮಾಡಲಾಗಿದೆ. ಡಿವೈಎಸ್‌ಪಿ ವರ್ಗವಾಗಿದೆ. ಲಾಠಿ ಪ್ರಹಾರ ಸೇರಿದಂತೆ ಇಡೀ ಘಟನೆ ಕುರಿತು ತನಿಖೆ ಮಾಡಿ ವರದಿ ನೀಡಲು ಎಡಿಜಿಪಿ ದರ್ಜೆ ಅಧಿಕಾರಿ ಕಮಲ್‍ಪಂತ್ ಅವರನ್ನು ನೇಮಕ ಮಾಡಲಾಗಿದೆ' ಎಂದು ತಿಳಿಸಿದರು.[ಯಮನೂರು ಸಂತ್ರಸ್ತರಿಗೆ ಶೆಟ್ಟರ್ ಸಾಂತ್ವನ]

'ರೈತರ ವಿರುದ್ಧ ದಾಖಲಾಗಿರುವ ಕೇಸುಗಳ ಮರು ಪರಿಶೀಲನೆಗೆ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಮತ್ತು ಪ್ರಾಸಿಕ್ಯುಷನ್ ನಿರ್ದೇಶಕರನ್ನು ನೇಮಿಸಲಾಗಿದೆ. ಯಾವ ಯಾವ ಸೆಕ್ಷನ್‍ಗಳ ಅಡಿಯಲ್ಲಿ ಕೇಸುಗಳು ದಾಖಲಾಗಿವೆ ಎಂಬುದನ್ನು ಅವರು ಪರಿಶೀಲಿಸಲಿದ್ದಾರೆ' ಎಂದರು.

'ವೃದ್ಧರು, ಮಹಿಳೆಯರು, ಅಮಾಯಕರು ಮತ್ತು ವಿದ್ಯಾರ್ಥಿಗಳ ವಿರುದ್ಧ ಗಂಭೀರವಾದ ಸೆಕ್ಷನ್‍ಗಳನ್ನು ಹಾಕಿದ್ದರೆ ಮರು ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah expressed regret over lathi charge on farmers in Yamanuru village, Dharwad.
Please Wait while comments are loading...