ಶಿವನೇ ಸಿದ್ದಾರೂಢ! ಪೊಲೀಸರ ಬೆಂಡೆತ್ತಿದ್ದ ಆಟೋ ಚಾಲಕ
ಹುಬ್ಬಳ್ಳಿ, ಮೇ 9: ಪರ್ಮಿಟ್, ಲೈಸೆನ್ಸ್ ಇಲ್ಲದೆ ಚಲಾಯಿಸುವ ಆಟೋಗಳನ್ನು 'ಸೈಡಿಗೆ ಹಾಕಪ್ಪಾ' ಎಂದು ಪೊಲೀಸರು ಹೇಳುವುದನ್ನು ಕೇಳಿದ್ದೇವೆ. ಆದರೆ ಹುಬ್ಬಳ್ಳಿಯಲ್ಲಿ ವರದಿಯಾದ ಘಟನೆ ಇದಕ್ಕೆ ತದ್ವಿರುದ್ದವಾಗಿದ್ದು.
ನಗರದ ಜನನಿಬಿಡ ರಾಣಿ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕನೊಬ್ಬ ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ ನಾಲ್ಕು ಜನ ಪೊಲೀಸರನ್ನು ಬೆಂಡೆತ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಖಾದ್ರಿ ಎನ್ನುವ ಆಟೋ ಚಾಲಕ ಚೆನ್ನಮ್ಮ ವೃತ್ತದಲ್ಲಿ ಅತಿವೇಗದಂತೆ ಆಟೋ ಚಲಾಯಿಸುತ್ತಿದ್ದ. ಇವನ ಹಿಂಬಾಲಿಸಿದ ಪೊಲೀಸಪ್ಪ ಅವನನ್ನು ತಡೆದು ಗಾಡಿಗೆ ಸೈಡಿಗೆ ಹಾಕುವಂತೆ ಹೇಳಿದ್ದಾರೆ.
ಇದರಿಂದ ರೊಚ್ಚಿಗೆದ್ದ ಆಟೋ ಚಾಲಕ ಪೊಲೀಸ್ ಎನ್ನುವ ಮುಲಾಜು ನೋಡದೇ ಕಾಲರ್ ಪಟ್ಟಿ ಹಿಡಿದು ಪಂಚ್ ಕೊಟ್ಟಿದ್ದಾನೆ.
ಕೂಡಲೇ ಅಲರ್ಟ್ ಆದ ಮತ್ತು ಅಲ್ಲೇ ರೌಂಡಿಂಗ್ ನಲ್ಲಿದ್ದ ಇತರ ಮೂವರು ಪೊಲೀಸರು ಜಗಳ ಬಿಡಿಸಲು ಮುಂದಾಗಿದ್ದಾರೆ.

ಆಟೋ ಚಾಲಕ ಖಾದ್ರಿ, ಜಗಳ ಬಿಡಿಸಲು ಬಂದ ಇತರ ಮೂವರು ಪೊಲೀಸರಿಗೂ ಥಳಿಸಿದ್ದಾನೆ. ಸಾರ್ವಜನಿಕರ ಮುಂದೆ ನಡೆದ ಈ ಘಟನೆಯಲ್ಲಿ, ಹೇಗೋ ಆಟೋ ಚಾಲಕನನ್ನು ಠಾಣೆಗೆ ಎಳೆದು ತರುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಗಾಗಿದ್ದಾರೆ.
ಈತನಿಂದ ಹಲ್ಲೆಗೊಳಾದ ನಾಲ್ವರು ಪೊಲೀಸರಲ್ಲಿ ಇಬ್ಬರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದರೆ ಆಟೋ ಚಾಲಕ ನೀಡಿದ್ದ ಪಂಚ್ ಹೇಗಿತ್ತು ಎಂದು ಅರ್ಥ ಮಾಡಿಕೊಳ್ಳಬಹುದಾಗಿದೆ.
ಒಟ್ಟಿನಲ್ಲಿ ಸಾರ್ವಜನಿಕವಾಗಿ ಪೊಲೀಸ್ ಇಲಾಖೆಯ ಮರ್ಯಾದೆಯನ್ನು ತೆಗೆದ, ಪೊಲೀಸರ ಮೇಲೆ ಕೈಮಾಡಿದ ಖಾದ್ರಿಗೆ ಪೊಲೀಸರು ಠಾಣೆಯಲ್ಲಿ ಏರೋಪ್ಲೇನ್ ಹತ್ತಿಸುತ್ತಿದ್ದಾರೋ, ಇಲ್ಲವೋ ಎಂದು ಸದ್ಯಕ್ಕೆ ತಿಳಿದುಬಂದಿಲ್ಲ.












Click it and Unblock the Notifications