ಪ್ರಲ್ಹಾದ್ ಜೋಶಿ ಹಾಗೂ ಧಾರವಾಡವನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಹುಬ್ಬಳ್ಳಿ, ಅಕ್ಟೋಬರ್ 11 : ಸವಾಯಿ ಗಂಧರ್ವ ಎಂದೇ ಖ್ಯಾತರಾಗಿದ್ದ ಪಂಡಿತ್ ರಾಮಭಾವು ಕುಂದಗೋಳಕರ ಅವರ ಸ್ಮರಣಾರ್ಥ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ಪಂಡಿತ್ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಅಶ್ವಿನಿ ವೈಷ್ಣವ್ ಅವರು, "ಧಾರವಾಡ ಜಿಲ್ಲೆಯು ಸಾಹಿತ್ಯದ ತವರೂರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಮಾತನಾಡುವುದು ನಮ್ಮ ಸೌಭಾಗ್ಯ. ಧಾರವಾಡ ಜಿಲ್ಲೆಯಲ್ಲಿ ಇಬ್ಬರೂ ಗಂಧರ್ವರು ಹುಟ್ಟಿರುವುದು ನಿಜಕ್ಕೂ ವಿಶೇಷ. ಅಂತವರನ್ನು ಗುರುತಿಸುವ ಹಾಗೂ ಅವರ ಸಾಧನೆಯನ್ನು ಸ್ಮರಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ," ಎಂದರು.
"ಇನ್ನು ದೇಶದಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅನೇಕ ಸರ್ಕಾರದ ಶಿಷ್ಟಾಚಾರಕ್ಕೆ ಬ್ರೇಕ್ ಹಾಕಿದ್ದಾರೆ. ನಮ್ಮ ಗುಲಾಮ ಸಂಸ್ಕೃತಿಯಿಂದ ಹೊರ ಬರಬೇಕೆಂದು ಪ್ರಧಾನಿ ಹೇಳಿದ್ದರು. ಅದೇ ತರನಾಗಿ ಪ್ರಧಾನಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ದೇಶಕ್ಕೆ ಸಮಾಜ, ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆ ಇದೆ. ಅಂಥವರನ್ನು ಗುರುತಿಸುವ ಕೆಲಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದಾರೆ," ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನನ್ನ ಗುರು ಎಂದ ಕೇಂದ್ರ ಸಚಿವ
ಈ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಲ್ಹಾದ್ ಜೋಶಿ ಅವರ ಬಗ್ಗೆ ಮಾತನಾಡಿದ ಅಶ್ವಿನಿ ವೈಷ್ಣವ್, "ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನನ್ನ ಗುರು. ಪಾರ್ಲಿಮೆಂಟ್ ನಡಾವಳಿ ಬಗ್ಗೆ ಜೋಶಿ ನನಗೆ ಕಲಿಸಿಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಪ್ರತಿಯೊಂದು ಹೆಜ್ಜೆ, ಭಾಷಣ ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ. ಅಧಿಕಾರ, ಸ್ಥಾನ ಬಂದ ನಂತರ ಮನುಷ್ಯ ಬದಲಾಗುತ್ತಾನೆ. ಆದರೆ ಪ್ರಲ್ಹಾದ್ ಜೋಶಿ ಅವರು ಹಾಗಲ್ಲ. ವಿರೋಧ ಪಕ್ಷದ ನಾಯಕರೂ ಅವರನ್ನು ಗೌರವಿಸುತ್ತಾರೆ," ಎಂದರು.

ಕಲೆ, ಶಿಕ್ಷಣದಿಂದ ಸವಾಯಿ ಗಂಧರ್ವರು ಪರಿಪೂರ್ಣರು
ಸವಾಯಿ ಗಂಧರ್ವರ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ, "ಪಂಡಿತ್ ಕುಮಾರ ಗಂಧರ್ವರ ಅವರ ಸಂಗೀತವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಷ್ಟಪಡುತ್ತಿದ್ದರು. ಬ್ರಿಟೀಷ್ ಗವರ್ನರ್ ಎದುರು ಸವಾಯಿ ಗಂಧರ್ವರು ಸತತ ಮೂರು ಗಂಟೆ ಸಂಗೀತ ಕಚೇರಿ ನೀಡಿದ್ದರು. ಸಂಗೀತ ಕೇಳಿದ ಎಲ್ಲ ಜನ ಮಂತ್ರ ಮುಗ್ಧರಾಗಿದ್ದರು. ಮೂರು ಗಂಟೆಗಳ ಬಳಿಕ ಗವರ್ನರ್ ಎದ್ದು ಗೌರವ ಸಲ್ಲಿಸಿದ್ದರು. ಸಂಗೀತಕ್ಕಿರುವ ಶಕ್ತಿಯನ್ನು ಸವಾಯಿ ಗಂಧರ್ವರು ಬ್ರಿಟೀಷರಿಗೆ ಪರಿಚಯಿಸಿದ್ದರು. ಕಲೆ, ಸಂಸ್ಕೃತಿ, ಶಿಕ್ಷಣದಿಂದ ಸವಾಯಿ ಗಂಧರ್ವರು ಪರಿಪೂರ್ಣರು. ಡಾ.ಗಂಗೂಬಾಯಿ ಹಾನಗಲ್ ಹಾಗೂ ಪಂಡಿತ್ ಭೀಮಸೇನ ಜೋಶಿಯಂತಹ ಶಿಷ್ಯರನ್ನು ನಾಡಿಗೆ ಕೊಟ್ಟಿದ್ದೇ ಸವಾಯಿ ಗಂಧರ್ವರು," ಎಂದು ಹೇಳಿದರು.

ಸವಾಯಿ ಗಂಧರ್ವರು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದವರು
ಕಾರ್ಯಕ್ರಮದದಲ್ಲಿ ಉಪಸ್ಥಿತರಿದ್ದ ಕೇಂದ್ರ ಸರ್ಕಾರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದ್ದು, ಸವಾಯಿ ಗಂಧರ್ವರು ಹಿಂದೂಸ್ತಾನಿ ಸಂಗೀತದ ಕಂಪನ್ನು ಹರಡಿಸುವಲ್ಲಿ ಬಹಳಷ್ಟು ಪರಿಶ್ರಮ ಪಟ್ಟವರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಅವರನ್ನು ಸಂಗೀತಕ್ಕಾಗಿ ಸಿದ್ದಪಡಿಸಿದವರು. ಸಂಗೀತಕ್ಕೆ ಭದ್ರ ಬುನಾದಿಯನ್ನು ಹಾಕಿದವರು ಸವಾಯಿ ಗಂಧರ್ವರು. ಹಲವು ಪ್ರಖ್ಯಾತ ಶಿಷ್ಯರನ್ನು ಹೊಂದಿದ್ದ ಸವಾಯಿ ಗಂಧರ್ವರು ಧಾರವಾಡ ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದವರು. ಅಸಂಖ್ಯಾತ ಅಭಿಮಾನಿಗಳ ಮನಸಿನಲ್ಲಿ ಇಂದಿಗೂ ಹಸಿರಾಗಿರುವ ಪಂಡಿತ್ ಜೀ ನಮ್ಮ ಹೆಮ್ಮೆಯಾಗಿದ್ದಾರೆ ಎಂದರು.

ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದು ನಮ್ಮ ಹೆಮ್ಮೆ
ಇನ್ನು ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಮಾತ್ರವಲ್ಲದೇ, ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಯನ್ನು ಸವಾಯಿ ಗಂಧರ್ವರು ನೀಡಿದ್ದಾರೆ. ಬಹಳಷ್ಟು ಜನ ಈಗ ಜಾತಿ ಜಾತಿಯಲ್ಲಿ ಬಡದಾಡುತ್ತಿದ್ದಾರೆ. ಆದರೆ ಸವಾಯಿ ಗಂಧರ್ವರನ್ನು ಮೈಸೂರು ಆಸ್ಥಾನದ ಪಂಡಿತರಾದ ಅಬ್ದುಲ್ ಕರೀಮ್ ಖಾನ್ ಕರೆದುಕೊಂಡು ಹೋಗಿ ಸಂಗೀತ ಕಲಿಸಿದ್ದರು. ಅಬ್ದುಲ್ ಕರೀಮ್ ಖಾನ್ ಅವರ ಗರಡಿ ಮನೆಯಲ್ಲಿ ಬೆಳೆದವರು ಸವಾಯಿ ಗಂಧರ್ವರು. ಈ ಮಣ್ಣು ಸಂಗೀತಕ್ಕಾಗಿ ಬಹಳಷ್ಟು ಮಹಾಪುರುಷರನ್ನು ನೀಡಿದೆ. ಇವತ್ತು ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದು ನಮ್ಮ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.












Click it and Unblock the Notifications