ನಾನು ಇಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲ್ಲ: ಬಸನಗೌಡ ಪಾಟೀಲ್ ಯತ್ನಾಳ್!
ಕರ್ನಾಟಕದಲ್ಲಿ ಹಿಂದೂಗಳು ಜೀವನ ಮಾಡುವುದಕ್ಕೆ ಹುಬ್ಬಳ್ಳಿಯ ಹಿಂದೂ ಶಕ್ತಿ ಕಾರಣ. ನಾನು ಹಿಂದೂಗಳ ವೋಟ್‌ನಿಂದಲೇ ಗೆದ್ದಿದ್ದೇನೆ. ಭಗವಾಕ್ಕಾಗಿ ನಾನು ಪ್ರಾಣ ಕೊಡುವುಕ್ಕೂ ಸಿದ್ಧನಾಗಿದ್ದೇನೆ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇಲ್ಲಿನ ಶಕ್ತಿ ರೋಡ್‌ನ ಬಾನಿ ಓಣಿಯಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿಯಿಂದ ಏರ್ಪಡಿಸಿದ್ದ ಶ್ರೀರಾಮ ಜಯಂತಿ ಹಾಗೂ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಹೊಸ ಪಕ್ಷದ ಸುಳಿವನ್ನೂ ಕೊಟ್ಟಿದ್ದಾರೆ.

ಶ್ರೀರಾಮ ಯಾವುದೇ ಜಾತಿಗೆ ಮೀಸಲಿಲ್ಲ. ದಲಿತರು, ಹಿಂದುಳಿದವರು, ಮೇಲ್ವರ್ಗದವರೆಲ್ಲರ ಮನೆಯಲ್ಲಿ ರಾಮ ಇದ್ದಾನೆ. ರಾಮನ ಬಿಟ್ಟು ಭಾರತವಿಲ್ಲ. ಭಾರತ ಬಿಟ್ಟು ರಾಮ ಇಲ್ಲ. ಇನ್ನು ಮುಸ್ಲಿಮರಿಗಿಂತ ಹರಾಮ್‌ಕೋರರು ಕೆಲ ಹಿಂದೂಗಳಿದ್ದಾರೆ ಎಂದು ತಿವಿದರು. ಜಗತ್ತಿನಲ್ಲಿ ಮೊದಲು ಹುಟ್ಟಿದ್ದು ಸನಾತನ ಧರ್ಮ. ವಕ್ಫ್‌ಗೆ ಹಿಂದೂಗಳು ವಿರೋಧ ಮಾಡುತ್ತಿದ್ದಾರೆ. ದೇಶ ಸುರಕ್ಷಿತವಾಗಿರಬೇಕಾದರೆ ನರೇಂದ್ರ ಮೋದಿ ಕಾರಣ. ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ನನ್ನನ್ನು ಹೊರಗೆ ಹಾಕಿರಬಹುದು. ನನ್ನ ಹೃದಯದಲ್ಲಿ ಬಿಜೆಪಿ ಇದೆ. ನೀವ್ಯಾರು ಏನು ಕಿಸಿಯಲು ಆಗುವುದಿಲ್ಲ ಎಂದರು.
ನಾನು ಇಲ್ಲದೆ ಯಾರೂ ಅಧಿಕಾರಕ್ಕೆ ಬರಲ್ಲ!
ಕೆಲವರು ಲಿಂಗಾಯತ ಧರ್ಮ ಬೇರೆ ಎನ್ನುತ್ತಿದ್ದಾರೆ. ಸನಾತನ ಧರ್ಮ ಉಳಿದರೆ, ವಿಭೂತಿ ಉಳಿಯುತ್ತದೆ. ನನಗೆ ಹೊರಗ ಹಾಕಿದ ಮೇಲೆ ನಾಲ್ಕು ಪಟ್ಟ ಜನರ ಆಶೀರ್ವಾದ ಸಿಕ್ಕಿದೆ. ನಾನು ಇಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಹಿಂದೂಪರ ಕರ್ನಾಟಕದಲ್ಲಿ ಯಾರು ಮಾತನಾಡುತ್ತಾರೆ ಅವರೇ ಮುಂದಿನ ಮುಖ್ಯಮಂತ್ರಿ. 2028ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆ. ನಾನು ಗೃಹ ಮಂತ್ರಿ ಆಗಿದ್ದರೆ, ಹಳೇ ಹುಬ್ಬಳ್ಳಿ ಠಾಣೆ ಹೊಕ್ಕಿದ್ದವರನ್ನು ಜನ್ನತ್‌ಗೆ (ಸ್ವರ್ಗ) ಕಳುಹಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಹೊಸ ಪಕ್ಷ ಪ್ರಾರಂಭವಾಗುವುದು ಖಚಿತ ಎನ್ನುವ ಸುಳಿವನ್ನು ಅವರು ಕೊಟ್ಟಿದ್ದಾರೆ.

ಶ್ರೀರಾಮ ಜಯಂತಿ, ಗಣೇಶೋತ್ಸವಕ್ಕೆ ಮೆರವಣಿಗೆ ನಡೆಸಿದ ಹಿಂದುಗಳ ಮೇಲೆ ಕಲ್ಲು ಹೊಗೆದರೆ ಅವರೆಲ್ಲರನ್ನೂ ಜನ್ನತ್‌ಗೆ ಸಿದ್ಧರಾಗಿರಿ. ಗಣಪತಿಯನ್ನೂ ಜೈಲಿಗೆ ಹಾಕುವಂತಹ ಕೆಟ್ಟ ಸರ್ಕಾರ ಬಂದಿದೆ. ಈಗ ನನ್ನನ್ನು ಕಟ್ಟಿ ಹಾಕಿರಬಹುದು, ಲೋಕಸಭೆ ಚುನಾವಣೆ ಬಂದರೆ ಮತ್ತೆ ಎಲ್ಲರೂ ನನ್ನ ಮನೆ ಬಾಗಿಲಿಗೆ ಬರುತ್ತಾರೆ. ಆರು ವರ್ಷ ಅಲ್ಲ, ಆರು ತಿಂಗಳು ತಡೆಯುವುದಿಲ್ಲ ಎಂದು ಬಿಜೆಪಿಗೆ ಟಕ್ಕರ್ ಕೊಟ್ಟಿದ್ದಾರೆ.
ವಿಶ್ವ ಹಿಂದೂ ಪರಿಷತ್‌ನ ಜಯತೀರ್ಥ ಕಟ್ಟಿ ಮಾತನಾಡಿ, ರಾಮ ಜೋಡಿಸುವ ವ್ಯಕ್ತಿ, ವಿಘಟಿಸುವುದಿಲ್ಲ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ಕಳೆದು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಭಾರತದಲ್ಲಿ ಬದುಕು ಗಟ್ಟಿಗೊಳಿಸುವ ಕೆಲಸ ಮಾಡೋಣ. ವಿಶ್ವಗುರು ಮಾಡಲು ಸಂಕಲ್ಪ ತೊಡೋಣ ಎಂದರು.

ಹಂಪಿ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷಸಿಂಗ್ ಜಮಾದಾರ ಮಾತನಾಡಿದರು. ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಜ್ಜಿ - ಹುಂಜ ಕಥೆ ಎಂದ ಜನ!
ಇನ್ನು ಯತ್ನಾಳ್ ಅವರ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಯತ್ನಾಳ್ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳಬೇಕು ಅಂತ ಹೇಳಿದರೆ, ಇನ್ನೂ ಕೆಲವರು ಇದು ಅಜ್ಜಿ - ಹುಂಜ ಕಥೆ ಇರುವಂತೆ ಇದೆ ಅಂದಿದ್ದಾರೆ. ಒಂದೂರಲ್ಲಿ ಒಂದು ಅಜ್ಜಿ ಕೋಳಿ ಹುಂಜ ಇತ್ತು. ಬೆಳಿಗ್ಗೆ ಅದು ಕೂಗಿದರೆ ಮಾತ್ರ ಬೆಳಗಾಗುತ್ತದೆ ಎಂದು ಅಜ್ಜಿ ನಂಬಿದ್ದಳಂತೆ. ಒಂದು ದಿವಸ ತನ್ನ ಕೋಳಿ ಹುಂಜ ಒಂದನ್ನು ತೆಗೆದು ಕೊಂಡು ಪಕ್ಕೂರಿಗೆ ಹೋದರಂತೆ. ತಾನಿಲ್ಲದೆ ಈ ಊರಲ್ಲಿ ಬೆಳಗಾಗುವುದಿಲ್ಲ ಎಂದು ಅದರಂತೆಯೇ ಇದೆ ಯತ್ನಾಳ್ ಅವರ ಮಾತು ಅಂತ ಕೆಲವರು ಹೇಳಿದ್ದಾರೆ.












Click it and Unblock the Notifications