ಲಿಂಗಾಯತ ಪ್ರತ್ಯೇಕ ಧರ್ಮ : ಯಡಿಯೂರಪ್ಪ ಹೇಳಿದ್ದೇನು?
ದಾವಣಗೆರೆ, ಜನವರಿ 04 : 'ಪತ್ಯೇಕ ಧರ್ಮ ವಿಚಾರವಾಗಿ ಅಖಿಲ ಭಾರತ ವೀರಶೈವ ಮಹಾಸಭಾ, ಸಿದ್ಧಗಂಗಾ ಶ್ರೀಗಳು ಮತ್ತು ವೀರಶೈವ ಜಗದ್ಗುರುಗಳ ನಿಲುವಿಗೆ ಬದ್ಧವಾಗಿರುವುದಾಗಿ' ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಯಡಿಯೂರಪ್ಪ, 'ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಬಿಜೆಪಿಯ ಶಾಸಕರ ಬೆಂಬಲ ಇದೆ ಇದೆ ಬಸವರಾಜ ಹೊರಟ್ಟಿ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

'ಸಮಾಜ ಒಡೆಯುವ, ಜಾತಿ ಪಡೆಯುವ ಕೆಲಸ ಕಾಂಗ್ರೆಸ್ ಪಕ್ಷದ್ದು. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿ ಶಾಸಕರು ಒಗ್ಗಟ್ಟಾಗಿದ್ದಾರೆ. ಹೊರಟ್ಟಿ ಅನಗತ್ಯವಾಗಿ ಗೊಂದಲ ಮೂಡಿಸುತ್ತಿದ್ದಾರೆ' ಎಂದು ಯಡಿಯೂರಪ್ಪ ದೂರಿದರು.
ಷರತ್ತು ಬದ್ಧ ಒಪ್ಪಿಗೆ : ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಬಹಿರಂಗ ಚರ್ಚೆ ನಡೆಸಲು ವೀರಶೈವ ಮಠಾಧೀಶರು ಷರತ್ತು ಬದ್ಧ ಒಪ್ಪಿಗೆ ನೀಡಿದ್ದಾರೆ. ಜನವರಿ 28 ಅಥವ 29ರಂದು ಬೆಳಗಾವಿಯ ರುದ್ರಾಕ್ಷಿ ಮಠದಲ್ಲಿ ಬಹಿರಂಗ ಚರ್ಚೆಗೆ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ದಿನಾಂಕ ನಿಗದಿ ಮಾಡಿದ್ದಾರೆ.
ಸಭೆಯಲ್ಲಿ ಎರಡೂ ಬಣದಿಂದ 7 ಮಂದಿ ಭಾಗವಹಿಸಬೇಕು. ತಲಾ ಒಬ್ಬರು ಮುಖ್ಯಸ್ಥರು ಶಾಂತಿಯುತವಾಗಿ ಚರ್ಚೆ ನಡೆಸಬೇಕು. ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ನಡೆಸಬೇಕು. ವೀರಶೈವ ಮತ್ತು ಲಿಂಗಾಯತ ವಿಷಯದ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ.
ಸರ್ಕಾರಕ್ಕೆ ಎಚ್ಚರಿಕೆ : 'ಸರ್ಕಾರ ಸಮಾಜದ ಮೇಲೆ ದಬ್ಬಾಳಿಕ ನಡೆಸುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಸಮಾಜವನ್ನು ಕೆರಳಿಸುವ, ಒಡೆಯುವ ಯತ್ನ ಸಿದ್ದಗಂಗಾ ಶ್ರೀಗಳಿಗೆ ನೋವು ತಂದಿದೆ. ಇಂತಹ ಯತ್ನ ಮುಂದುವರೆದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ' ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications