• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಮನೆ ನಿವೇಶನ ವಿವಾದ: ಮಹಿಳೆಯರ ಪ್ರತಿಭಟನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ.13: ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರು ಹೊನ್ನಾಳಿ ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಮನೆ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ಜಾಗದ ವಿಚಾರವಾಗಿ ಕಂಟಕ ಎದುರಾಗಿದ್ದು, ತಮಗೆ ಸೇರಿದ ಆಸ್ತಿಯಲ್ಲಿ ರೇಣುಕಾಚಾರ್ಯ ಅವರು ಮನೆ ಕಟ್ಟುತಿದ್ದಾರೆ ಎಂದು ಐವರು ಮಹಿಳೆಯರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ನೊಂದ ಮಹಿಳೆಯರು, ಹೊನ್ನಾಳಿ ತಾಲೂಕು ಕಚೇರಿ ಎದುರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ತಾಲೂಕು ಕಚೇರಿ ಮುಂದೆ ಮಹಿಳೆಯರು ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಹೊರವಲಯದಲ್ಲಿರುವ ನ್ಯಾಮತಿ ರಸ್ತೆ ಬಳಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮನೆ ನಿರ್ಮಾಣ ಮಾಡುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಮುಗಿಯುವ ಹಂತಕ್ಕೂ ಬಂದಿದ್ದು, ದೊಡ್ಡದಾದ ಕಟ್ಟಡ ನಿರ್ಮಾಣ ಆಗುತ್ತಿದೆ. ಆದರೆ ಈ ಜಾಗ ಹೊನ್ನಾಳಿ ಪಟ್ಟಣದ ನಿವಾಸಿ ನಿಂಗಪ್ಪ ಎಂಬುವರಿಗೆ ಸೇರಿದ ಜಮೀನಾಗಿದೆ. ನಿಂಗಪ್ಪನಿಗೆ ಮೂವರು ಪತ್ನಿಯರು.‌ ಮೂರನೇ ಪತ್ನಿಯ ಪುತ್ರನಾದ ರಾಘವೇಂದ್ರ ಎಂಬುವರ ಹೆಸರಿಗೆ ಜಮೀನು‌ ಮಾಡಿ ನಂತರ ತಮ್ಮ ಹೆಸರಿಗೆ ರೇಣುಕಾಚಾರ್ಯ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

"ನಿಂಗಪ್ಪ ಮೊದಲ ಹೆಂಡತಿಗೆ ಮಕ್ಕಳಿಲ್ಲ. ಉಳಿದ ಇಬ್ಬರು ಹೆಂಡತಿಯರಿಗೆ ಒಟ್ಟು ಐವರು ಮಕ್ಕಳು. ಇಡೀ ಆಸ್ತಿಯಲ್ಲಿ ನಿಂಗಪ್ಪನ ಮಕ್ಕಳಿಗೆ 1/6 ಐದು ಭಾಗವಾಗಿತ್ತು. ಆದರೆ ಸ್ಥಳೀಯ ಅಧಿಕಾರಿಗಳನ್ನ ಬುಟ್ಟಿಗೆ ಹಾಕಿ ಕೊಂಡ ರೇಣುಕಾಚಾರ್ಯ ಜಮೀನು ಕಬಳಿಸಿದ್ದಾರೆ," ಎಂದು ಪ್ರತಿಭಟನಾ ನಿರತ ಮಹಿಳೆಯರು ಆರೋಪಿಸಿದ್ದಾರೆ. ಸದ್ಯ ಕೋರ್ಟ್ ಮೊರೆ ಹೋಗಿರುವ ನಿಂಗಪ್ಪನ ಮಕ್ಕಳು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾ ನಿರತ ಮಹಿಳೆಯರಲ್ಲಿ ನಿಂಗಪ್ಪ ಎರಡನೇ ಪತ್ನಿ ದೊಡ್ಡ ಕೆಂಚಮ್ಮನ ಪುತ್ರಿ ವನಜಾಕ್ಷಿ ನೇತೃತ್ವದಲ್ಲಿ ರೇಣುಕಾಚಾರ್ಯ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಮಹಿಳೆಯರಿಗೆ ಸೇರಿದ 38 ಗುಂಟೆಯಲ್ಲಿ ಶಾಸಕರು ಮನೆ ನಿರ್ಮಿಸುತ್ತಿದ್ದಾರೆ. 38 ಗುಂಟೆ ಜಮೀನು ಜೊತೆ ಇನ್ನೂ ಐದು ಎಕರೆ ಐದು ಗುಂಟೆ ಜಮೀನು‌ ಪಡೆದಿದ್ದಾರೆ. ಸದ್ಯಕ್ಕೆ ಯಾವುದೇ ಕಟ್ಟಡ ಕಾಮಗಾರಿ ಆರಂಭಿಸದಂತೆ ಕೋರ್ಟ್ ಮೊರೆ ಹೋಗಿ ಇಂಜೆಕ್ಷನ್ ಆರ್ಡರ್ ತಂದರೂ ಮನೆ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ ಎಂದು ನೊಂದ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.

 Women protest against MLA Renukacharya is build a house in illegal land

ಎಂ.ಪಿ ರೇಣುಕಾಚಾರ್ಯ: ಕಾನೂನಿನ ಪ್ರಕಾರವೇ ಜಾಗ ಖರೀದಿಸಿದ್ದೇನೆ..!

ಇನ್ನು ಮಹಿಳೆಯರು ಮಾಡಿರುವ ಆರೋಪವನ್ನು ಸಾರಸಗಟಾಗಿ ತಳ್ಳಿ ಹಾಕಿರುವ ಎಂ. ಪಿ. ರೇಣುಕಾಚಾರ್ಯ, "ನಾನು ಕಾ‌ನೂನಿನ ಪ್ರಕಾರವೇ ಜಾಗ ಖರೀದಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ದಾಖಲಾತಿಗಳು ನಮ್ಮ ಬಳಿ ಇವೆ. ಕೋರ್ಟ್ ನಲ್ಲಿ 60 ಲಕ್ಷ ರೂಪಾಯಿ ಕೊಟ್ಟು ಜಾಗ ಖರೀದಿಸಿದ ಬಗ್ಗೆ ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ. ಸುಮ್ಮನೆ ಆರೋಪ‌ ಮಾಡಿದರೆ ಹೇಗೆ..? ರಾಜಕೀಯವಾಗಿ ನನಗೆ ಆಗದವರು ಎತ್ತಿ ಕಟ್ಟುತ್ತಿದ್ದಾರೆ," ಎಂದು ಹೇಳಿದ್ದಾರೆ.

"ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು, ಮನೆ ಕಟ್ಟಬಾರದು ಎಂದು ಕೋರ್ಟ್ ಆದೇಶ ಮಾಡಿಲ್ಲ. ಕೋರ್ಟ್ ನಲ್ಲಿ ಇರುವುದರಿಂದ ಹೆಚ್ಚು ಮಾತನಾಡಿಲ್ಲ. ರಾಘವೇಂದ್ರ ಅವರಿಂದ ಸರಸ್ವತಿ ರಮೇಶ್ ಅವರಿಗೆ ಮಾರಾಟ ಮಾಡಲಾಗಿದೆ. ಅವರಿಂದ ನಾನು ಕ್ರಯ ಪಡೆದಿದ್ದೇನೆ. ಹಣ ಕಟ್ಟಿದ್ದು ಸೇರಿದಂತೆ ಎಲ್ಲವೂ ದಾಖಲೆ ಇದೆ. ಯಾರಿಗೂ ಮೋಸ ಮಾಡಿಲ್ಲ, ಅನ್ಯಾಯ ಮಾಡಿಲ್ಲ. ದಲಿತರನ್ನು ಎತ್ತಿ ಕಟ್ಟುವ ಷಡ್ಯಂತ್ರ ಮಾಡಿದರೂ ಪ್ರಯೋಜನವಾಗಲಿಲ್ಲ. ನನ್ನ ಹೆಸರಿಗೆ ಖಾತೆ ಆಗಿದೆ, ಪಾಣಿಯೂ ಇದೆ," ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು.

   ಮೇ 14 ರಂದು ಶನಿ ದೇವನ ಪೂಜೆ‌ ಮಾಡ್ಬಿಟ್ರೆ ನಿಮ್ಮೆಲ್ಲಾ‌ ಸಂಕಟಗಳು‌ ಮಾಯ | Oneindia Kannada
   English summary
   Five women are continuously protesting in front of the Taluk office they claiming that MLA Renukacharya build house in belongs to them land.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X