ಸೂಳೆಕೆರೆ ನಿರ್ಮಾಣಕ್ಕೆ ವೇಶ್ಯೆಯರು ಇಟ್ಟಿದ್ದ ಬೇಡಿಕೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ದಾವಣಗೆರೆ, ಸೆಪ್ಟೆಂಬರ್‌, 11: ದಾವಣಗೆರೆ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಚನ್ನಗಿರಿ ಬಳಿ ಭದ್ರಾ ನದಿಯು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಅಲ್ಲದೇ ಹಳ್ಳಕೊಳ್ಳಗಳು ಸಹ ತುಂಬಿ ಹರಿಯುತ್ತಿದ್ದು, ಚನ್ನಗಿರಿ ತಾಲೂಕಿನಲ್ಲಿರುವ ಶಾಂತಿ ಸಾಗರ ಎಲ್ಲರ ಗಮನವನ್ನು ತನ್ನತ್ತ ಸೆಳೆದೇ ಬಿಡುತ್ತದೆ. ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಅಂತಲೇ ಪ್ರಖ್ಯಾತಿ ಪಡೆದಿರುವ ಸೂಳೆಕೆರೆ ತುಂಬಿ ತುಳುಕುತ್ತಿದೆ. ಈ ಬಾರಿ ಕೆರೆ ಕೋಡಿ ಸಹ ಬಿದ್ದಿದ್ದು, ಕೆರೆಯ ಸೊಬಗನ್ನು ನೋಡಲು ಪ್ರತಿನಿತ್ಯವೂ ಜನಸಾಗರವೇ ಹರಿದುಬರುತ್ತಿದೆ.

ಅಕ್ಕಪಕ್ಕದಲ್ಲಿನ ಬೆಟ್ಟ-ಗುಡ್ಡಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಹೊಸ ಹಸಿರಿನ ಲೋಕ ಸೃಷ್ಟಿ ಆದಂತಿದೆ. ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ವೀಕೆಂಡ್‌ನಲ್ಲಿ ಜನಸಾಗರವೇ ಹರಿದುಬರುತ್ತದೆ. ಈ ಮಾರ್ಗದಲ್ಲಿ ಯಾರೇ ಬಂದರೂ ಕೂಡ ಇಲ್ಲಿಗೆ ಭೇಟಿ ನೀಡಿಯೇ ಹೋಗುತ್ತಾರೆ. ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟ-ಗುಡ್ಡದ ಸೌಂದರ್ಯ, ಸೂಳೆಕೆರೆಯ ಎದುರು ನಿಂತು ನೋಡಿದರೆ ಕಾಣುವ ಬ್ರಿಡ್ಜ್ ಪ್ರವಾಸಿಗರನ್ನು ತನ್ನತ್ತ ಸೆಳೆದುಬಿಡುತ್ತದೆ. ರೈತರ ಜೀವನಾಡಿ ಆಗಿರುವ ಸೂಳೆಕೆರೆ ಇದೀಗ ಪ್ರವಾಸಿಗರ ಪ್ರಮುಖ ಪ್ರೇಕ್ಷಣಿಕ ತಾಣವೂ ಆಗಿದೆ.

ವೀಕೆಂಡ್‌ ದಿನಗಳಲ್ಲಿ ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಯುವಕರು, ಯುವತಿಯರು, ಹಿರಿಯರು, ಕುಟುಂಬದೊಂದಿಗೆ ಆಗಮಿಸಿ ಇಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ. ಮಳೆ ಬಂದರೇ ಸಾಕು ಒಂದು ರೀತಿಯ ಸೊಬಗು ಕಂಡು ಬಂದರೆ, ಬಿಸಿಲು ಬಂದಾಗ ಮತ್ತೊಂದು ರೀತಿಯ ಆಕರ್ಷಣೆ ಇಲ್ಲಿ ಕಾಣಸಿಗುತ್ತದೆ. ಸುತ್ತಮುತ್ತಲು ಹಚ್ಚಹಸಿರು ಇರುವುದರಿಂದ ಸುಂದರ ಲೋಕವೇ ಅನಾವರಣಗೊಂಡಂತೆ ಭಾಸವಾಗುತ್ತದೆ.

ಸುಳ್ಳಾದ ಬ್ರಿಟೀಷ್‌ ಇಂಜಿನಿಯರ್‌ ನಿಲುವು

ಸುಳ್ಳಾದ ಬ್ರಿಟೀಷ್‌ ಇಂಜಿನಿಯರ್‌ ನಿಲುವು

ಹಿರೇಹಳ್ಳಕ್ಕೆ ಎರಡು ಗುಡ್ಡಗಳ ಮಧ್ಯೆ ಬೃಹತ್ ಒಡ್ಡು ಹಾಕಿ ನೀರು ನಿಲ್ಲಿಸಿರುವ ಈ ಕೆರೆಯ ಸುತ್ತಳತೆ 65 ಕಿಲೋ ಮೀಟರ್ ಆಗಿದೆ. ಅಚ್ಚುಕಟ್ಟು ಪ್ರದೇಶ ಎರಡು ಸಾವಿರ ಹೆಕ್ಟೇರ್ ಆಗಿದ್ದು, ಈ ವಿಸ್ತಾರವಾದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿಯನ್ನು ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗಿದೆ. ಏರಿಯ ಅಗಲ ಒಂದೆಡೆ 60 ಅಡಿ ಇದ್ದರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ. ವಿಸ್ತಾರವಾದ ಬೆಟ್ಟದ ಸಾಲುಗಳ ಪ್ರದೇಶದಲ್ಲಿ ಕೆರೆ ಇದ್ದು, ಸುತ್ತಮುತ್ತಲಿನ ನೂರಾರು ಹಳ್ಳಿಗಳಿಂದ ಹರಿದು ಬರುವ ಮಳೆ ನೀರು ಈ ಕೆರೆಗೆ ಬಂದು ಸೇರುತ್ತದೆ.

ಹಳೇ ಮೈಸೂರು ರಾಜ್ಯದ ಬ್ರಿಟೀಷ್ ಇಂಜಿನಿಯರ್ ಸ್ಯಾಂಕಿ ಎನ್ನುವವರು ಈ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ಹೇಳಿದ್ದರು. ನಂತರ ಹಿಂದಿನ ಕಾಲದ ನೀರಾವರಿ ತಂತ್ರಜ್ಞರ ಚಾಣಾಕ್ಷತೆಯಿಂದ ಈ ಕೆರೆ ನಿರ್ಮಾಣ ಮಾಡಲಾಗಿತ್ತು. ಬಳಿಕ ಸ್ಯಾಂಕಿ ಅವರು ಪವಾಡವೆನ್ನುವಂತೆ ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು. ಕೆರೆಯ ಉತ್ತರದಲ್ಲಿ ಸಿದ್ಧನ ತೂಬು ಹಾಗೂ ಬಸವ ತೂಬು ಎಂಬ ಎರಡು ನಾಲೆಗಳಿವೆ. ಈ ನಾಲೆಗಳ ಮೂಲಕ ನೀರು ಹರಿಸಲಾಗುತ್ತದೆ.

ಶಾಂತಮ್ಮ ತೆಗೆದುಕೊಂಡ ಸಂಕಲ್ಪ ಏನಾಗಿತ್ತು?

ಶಾಂತಮ್ಮ ತೆಗೆದುಕೊಂಡ ಸಂಕಲ್ಪ ಏನಾಗಿತ್ತು?

ಸೂಳೆಕೆರೆ ನಿರ್ಮಾಣದ ಹಿಂದೆ ಒಂದು ಅಚ್ಚರಿಯ ಸಂಗತಿಯೂ ಇದೆ. ಈ ಪ್ರದೇಶದಲ್ಲಿ ಹಿಂದೆ ಸ್ವರ್ಗವತಿ ಎಂಬ ಪಟ್ಟಣ ಇತ್ತೆಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದಾರೆ. ಈ ಪಟ್ಟಣದಲ್ಲಿ ಆಳ್ವಿಕೆ ನಡೆಸುತ್ತಿದ್ದ ವಿಕ್ರಮರಾಯ ಮತ್ತು ಆತನ ಪತ್ನಿ ನೂತನಾ ದೇವಿಗೆ ಶಾಂತಲಾದೇವಿ ಎನ್ನುವ ಒಬ್ಬಳೇ ಮಗಳು ಇದ್ದಳು. ಈಕೆಯನ್ನು ಶಾಂತಮ್ಮ ಎಂದು ಕರೆಯುತ್ತಿದ್ದರು. ಈಕೆ ಯೌವ್ವನಾವಸ್ಥೆಗೆ ಬಂದಾಗ ತಂದೆ ಅನುಮತಿ ಪಡೆಯದೇ ಪಕ್ಕದ ಊರಿಗೆ ಯಾವುದೋ ಕೆಲಸಕ್ಕೆ ಹೋಗಿದ್ದಳು. ಕೆಲಸ ಮುಗಿಸಿಕೊಂಡು ಮತ್ತೆ ಅರಮನೆಗೆ ಬರುವಾಗ ಆಕೆ ನಡವಳಿಕೆಯಲ್ಲಿ ಬದಲಾವಣೆ ಆಗಿತ್ತಂತೆ. ಇದಕ್ಕೆ ತಂದೆ ವಿಕ್ರಮರಾಯ ಆಕ್ಷೇಪಿಸಿ ಶಾಂತಮ್ಮಳನ್ನು ನಿಂದಿಸಿ, ನಡತೆಗೆಟ್ಟ ನೀನು ಸೂಳೆ ಎಂದು ಬೈಯುತ್ತಾನಂತೆ. ತಂದೆ ಹೀಗೆ ಕೆಟ್ಟ ಪದಗಳಿಂದ ನಿಂದಿಸಿದ್ದರಿಂದ ಬೇಸತ್ತ ಶಾಂತಮ್ಮ ಆರೋಪದಿಂದ ಮುಕ್ತಳಾಗಲು ಕೆರೆ ನಿರ್ಮಾಣಕ್ಕೆ ಸಂಕಲ್ಪ ಮಾಡುತ್ತಾಳೆ.

ಸ್ವರ್ಗವತಿ ಪಟ್ಟಣದ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಬಂದು, ಅಲ್ಲಿನ ಜಾಗ ಬಿಟ್ಟುಕೊಡುವಂತೆ ವೇಶ್ಯೆಯರಲ್ಲಿ ಮನವಿ ಮಾಡುತ್ತಾಳೆ. ಆಗ ವೇಶ್ಯೆಯರು ಒಂದು ಷರತ್ತು ಹಾಕುವ ಮೂಲಕ ಜಾಗವನ್ನು ಬಿಟ್ಟುಕೊಡಲು ಒಪ್ಪಿದ್ದರು. ವೇಶ್ಯೆಯರು ಈ ಕೆರೆಗೆ ಸೂಳೆಕೆರೆ ಎಂಬ ಹೆಸರಿಟ್ಟರೆ ಜಾಗ ಬಿಟ್ಟುಕೊಡುವುದಾಗಿ ಷರತ್ತನ್ನು ಹಾಕಿದ್ದರು. ಇದಕ್ಕೆ ಒಪ್ಪಿದ ರಾಜಪುತ್ರಿ ಇಲ್ಲಿ ಕೆರೆ ನಿರ್ಮಾಣವನ್ನು ಮಾಡಿದ್ದರು. ಆಗಿನಿಂದಲೂ ಇದಕ್ಕೆ ಸೂಳೆಕೆರೆ ಎಂಬ ಹೆಸರು ಬಂದಿದೆ ಎಂದು ಪೂರ್ವಜರು ಹೇಳುತ್ತಿದ್ದಾರೆ. ಈ ಬಗ್ಗೆ ಏನೇ ಇದ್ದರೂ ಕೂಡ ಇಲ್ಲಿನ ಜನರು ಮಾತ್ರ ವೇಶ್ಯೆ ಒಬ್ಬ ಶುಭ್ರ ಮನಸ್ಸಿನ ಶ್ರೇಷ್ಠಳು. ತ್ಯಾಗದ ಸಂಕೇತದ ಸಮಾನಳು ಎಂಬ ಪೂಜ್ಯ ಭಾವನೆ ಈ ಭಾಗದ ಜನರಲ್ಲಿ ಈಗಲೂ ಇದೆ.

ಸೂಳೆಕೆರೆ ನೀರಿನ ಆಶ್ರಯದಲ್ಲಿ ಚಿತ್ರದುರ್ಗ

ಸೂಳೆಕೆರೆ ನೀರಿನ ಆಶ್ರಯದಲ್ಲಿ ಚಿತ್ರದುರ್ಗ

ಆಂಧ್ರ ಪ್ರದೇಶದ ಕಂಭಕೆರೆ ಹೊರತುಪಡಿಸಿದರೆ, ದಕ್ಷಿಣ ಭಾರತದ ಎರಡನೆಯ ಅತಿದೊಡ್ಡ ಕೆರೆ ಎಂಬ ಪ್ರಖ್ಯಾತಿ ಹೊಂದಿರುವ ಸೂಳೆಕೆರೆ, ಇದಕ್ಕೆ ಕರ್ನಾಟಕದ ಪ್ರಾಚೀನ ತಂತ್ರಜ್ಞಾನ ಬಳಸಿ ರೂಪಿಸಿರುವುದು ವಿಶೇಷವಾಗಿದೆ. ಅಲ್ಲದೇ ಸೂಳೆ ಕೆರೆಯು ಸುಮಾರು15 ರಿಂದ 20 ಹಳ್ಳಿಗಳ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಈ ಕೆರೆಯಿಂದಲೇ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನು ಪೂರೈಸಲಾಗುವುದು. ಲಕ್ಷಾಂತರ ಜನರು ಸೂಳೆ ಕೆರೆಯನ್ನು ನಂಬಿಕೊಂಡೇ ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. ಚನ್ನಗಿರಿ ತಾಲೂಕಿನ ರೈತರ ಪಾಲಿಗೂ ಇದು ಆಧಾರ ಆಗಿದೆ. ಅಲ್ಲದೇ ಪ್ರಮುಖ ಪ್ರವಾಸಿ ತಾಣ ಎಂಬ ಪ್ರಖ್ಯಾತಿ ಹೊಂದಿದೆ.

ಮಾಜಿ ಸಿಎಂ ಜೆ.ಹೆಚ್. ಪಟೇಲ್ ನಿಲುವೇನು?

ಮಾಜಿ ಸಿಎಂ ಜೆ.ಹೆಚ್. ಪಟೇಲ್ ನಿಲುವೇನು?

ಸೂಳೆಕೆರೆ ಎಂಬ ಹೆಸರಿನ ಈ ಕೆರೆಯನ್ನು ಶಾಂತಿಸಾಗರ ಎಂದು ನಾಮಕರಣ ಮಾಡಲು ಮಾಜಿ ಸಿಎಂ ಜೆ.ಹೆಚ್. ಪಟೇಲ್ ಅವರು ಒಪ್ಪಿರಲಿಲ್ಲ. ಇದಕ್ಕೆ ಕಾರಣ ಶಾಂತಮ್ಮ ಓರ್ವ ಹೆಣ್ಣು. ಆಕೆ ಕಟ್ಟಿಸಿದ ಕೆರೆ ಲಕ್ಷಾಂತರ ಮಂದಿಗೆ ಉಪಯೋಗ ಆಗಿದೆ. ಆ ಹೆಸರು ಹಾಗೆಯೇ ಇರಬೇಕು. ಸರ್ಕಾರಿ ದಾಖಲೆಗಳಲ್ಲಿ ಶಾಂತಿಸಾಗರ ಎಂದೂ ಹೆಸರಿದ್ದರೂ, ಜನ ಸಾಮಾನ್ಯರ ಪ್ರಕಾರ ಇಂದಿಗೂ ಸೂಳೆಕೆರೆ ಅಂತಲೇ ಹೆಸರುವಾಸಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+