ದಾವಣಗೆರೆ: ಖಾಸಗಿ ಕೊಳವೆ ಬಾವಿ ಎಲ್ಲೆಲ್ಲಿ ಕೊರೆಸಬಹುದು? ಜಿಲ್ಲಾಡಳಿತದ ನಿರ್ಧಾರ ಏನು?
ದಾವಣಗೆರೆ, ಮಾರ್ಚ್, 30: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಈ ಹಿನ್ನೆಲೆ ಸೂರ್ಯನ ಶಾಖಕ್ಕೆ ಈಗಾಗಲೇ ಕೆರೆ, ಕಟ್ಟೆಗಳೆಲ್ಲ ಖಾಲಿಯಾಗಿದ್ದು, ನೀರಿಗೆ ಅಭಾವ ಕಾಡುತ್ತಿದೆ. ಅದಕ್ಕಾಗಿ ಜಿಲ್ಲಾಡಳಿತ ಒಂದು ಸೂಕ್ತ ನಿರ್ಧಾರಕ್ಕೆ ಬಂದಿದೆ. ಹಾಗಾದರೆ ಈ ನಿರ್ಧಾರ ಏನು ಎಂದು ಇಲ್ಲಿ ತಿಳಿಯಿರಿ.
ಬೇಸಿಗೆ ತಾಪಮಾನ ಹೆಚ್ಚಳವಾಗಿದ್ದು, ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ನಿರೀಕ್ಷೆ ಇದೆ. ತಕ್ಷಣ ಕುಡಿಯುವ ನೀರಿನ ಪೂರೈಕೆಗಾಗಿ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಂಡು ಸಮಸ್ಯೆಯಾದ ಕಡೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರು ಸರಬರಾಜು ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ತಿಳಿಸಿದರು. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕಾಲುವೆ ಮತ್ತು ನದಿಯಲ್ಲಿನ ನೀರು ಹರಿವು ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ. ಆದರೂ ಸಹ ನದಿಗೆ ಹಾಗೂ ಕಾಲುವೆಗೆ ನೀರು ಹರಿಸುವ ಮೂಲಕ ಮುಂದಿನ 1 ತಿಂಗಳ ಕಾಲ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜೊತೆಗೆ ಕೊಳವೆಬಾವಿಗಳ ಮೂಲಕವೂ ನೀರು ಪೂರೈಕೆ ಮಾಡಲಾಗುತ್ತದೆ. ಕೆಲವು ಕಡೆ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇನ್ನೂ ಕೆಲವು ಕಡೆ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇಳಿಕೆಯಾದ ಕೊಳವೆಬಾವಿಗೆ ಸಿಂಗಲ್‍ಫೇಜ್ ಮೋಟಾರ್ ಪಂಪ್ ಅಳವಡಿಸುವ ಮೂಲಕ ನೀರನ್ನು ಪೂರೈಕೆ ಮಾಡಲು ತಿಳಿಸಿ ಗ್ರಾಮ ಪಂಚಾಯಿತಿಗಳಲ್ಲಿನ 15ನೇ ಹಣಕಾಸು ಯೋಜನೆಯಡಿ ಹೊಸ ಸಿಂಗಲ್‍ಫೇಜ್ ಮೋಟಾರ್ ಖರೀದಿ ಮಾಡಲು ತಿಳಿಸಿದರು.
ಖಾಸಗಿ ಕೊಳಬೆಬಾವಿ ಗುರುತಿಸಲು ಸೂಚನೆ: ಎಲ್ಲೆಲ್ಲಿ ನೀರಿನ ಸಮಸ್ಯೆ ಎದುರಾಗಿದೆಯೋ ಅಂತಹ ಕಡೆಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಬಾಡಿಗೆ ಆಧಾರದ ಮೇಲೆ ಪಡೆಯಲು ಮುಂದಾಗಬೇಕು. ಆದರೆ ಹೆಚ್ಚು ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಬಾರದು ಎಂದು ಸೂಚನೆ ನೀಡಿದರು. ಪ್ರತಿ ದಿನ ಒಬ್ಬರಿಗೆ ಕನಿಷ್ಠ 55 ಲೀಟರ್ ನೀರು ಪೂರೈಕೆ ಮಾಡಬೇಕಾಗಿದೆ. ಜಾನುವಾರುಗಳಿಗೂ ನೀರು ಪೂರೈಕೆ ಮಾಡುವುದರಿಂದ, ಬಾಡಿಗೆ ಕೊಳವೆ ಬಾವಿಗಳಿಂದ ನಿರ್ವಹಣೆ ಸುಲಭ ಆಗಲಿದೆ ಎಂದರು.
ಕೊಳಬೆವಾವಿ ಪುನಃಶ್ಚೇತನಕ್ಕೆ ಅನುದಾನ: ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಇದನ್ನು ಫ್ಲೆಶಿಂಗ್ ಮತ್ತು ಆಳಕ್ಕೆ ಕೊರತೆಯಲು ಯೋಜನೆ ರೂಪಿಸಬೇಕು. ಕೊಳವೆ ಬಾವಿಗಳನ್ನು ಕೊರೆಯಲು ಜಿಲ್ಲೆಯಲ್ಲಿ 7 ರಿಗ್‍ಗಳನ್ನು ವಶಕ್ಕೆ ಪಡೆದು ನೀಡಲು ಸಾರಿಗೆ ಅಧಿಕಾರಿಗೆ ಆದೇಶ ನೀಡಲಾಗಿದೆ. ಎಲ್ಲೆಲ್ಲಿ ಅಗತ್ಯವಿದೆಯೋ, ಅಂತಹ ಕಡೆ ಮಾತ್ರ ಹಾಲಿ ಇದ್ದ ಕೊಳವೆಬಾವಿ ಆಳ ಮತ್ತು ಫ್ಲೆಶಿಂಗ್ ಮಾಡುವ ಕೆಲಸ ಮಾಡಬೇಕು ಎಂದರು.
ಬೋರ್ ಪಕ್ಕ ಕೊಳವೆಬಾವಿ ಕೊರೆಸುವಂತಿಲ್ಲ: ಸಾರ್ವಜನಿಕ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಯಿಸಿದ್ದಲ್ಲಿ ಖಾಸಗಿಯವರು ಪಕ್ಕದಲ್ಲಿಯೇ ಬಂದು ಕೊಳವೆಬಾವಿ ಕೊರೆಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ಸಾರ್ವಜನಿಕರು ಕೊರೆಸಿದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯಡಿ ವಶಕ್ಕೆ ಪಡೆದುಕೊಳ್ಳಲು ಅವಕಾಶ ಇದ್ದು, ತಹಶೀಲ್ದಾರರು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 31 ಗ್ರಾಮ ಪಂಚಾಯಿತಿ ವ್ಯಾಪ್ತಿಯ 47 ಗ್ರಾಮಗಳಲ್ಲಿ 52 ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ 17 ಬೋರ್‍ವೆಲ್ ಬಾಡಿಗೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ದಾವಣಗೆರೆ ತಾಲೂಕು 4 ಕೊಳವೆಬಾವಿ ಬಾಡಿಗೆ, ಜಗಳೂರು ತಾಲೂಕು 11 ಖಾಸಗಿ ಬಾಡಿಗೆ, ಉಚ್ಚಂಗಿ ದುರ್ಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಖಾಸಗಿ ಬೋರ್‌ವೆಲ್ ಪಡೆಯಲು ನಿರ್ದೇಶನ ನೀಡಲಾಯಿತು.
ಚನ್ನಗಿರಿ ತಾಲೂಕಿನಲ್ಲಿ 12 ಖಾಸಗಿ ಬೋರ್‌ವೆಲ್ ಪಡೆದು ಇನ್ನೂ 54 ಗುರುತಿಸಲಾಗಿದೆ. ಸೂಳೆಕೆರೆಗೆ ಭದ್ರಾ ನೀರು ಬಿಟ್ಟರೆ, ಶೇಕಡಾ 50ರಷ್ಟು ಸಮಸ್ಯೆ ಬಗೆಹರಿಯಲಿದೆ. ಹರಿಹರ ತಾಲೂಕಿನಲ್ಲಿ 20 ಬಾಡಿಗೆ ಬೋರ್‌ವೆಲ್ ಪಡೆದಿದ್ದು, ಬಾನಳ್ಳಿಯಲ್ಲಿನ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲು ಸೂಚನೆ, ತಾಲ್ಲೂಕಿನಲ್ಲಿ 28 ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದೆ. ಇನ್ನು ಹೊನ್ನಾಳಿ ತಾಲೂಕಿನಲ್ಲಿ 6 ಖಾಸಗಿ ಬೋರ್‌ವೆಲ್ ಪಡೆದಿದ್ದು, ಹೊನ್ನಾಳಿ 12, ನ್ಯಾಮತಿ ತಾಲ್ಲೂಕಿನ 7 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.












Click it and Unblock the Notifications