ದಾವಣಗೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ತಲೆನೋವಾದ್ರಾ ವಿನಯ್ ಕುಮಾರ್?

ದಾವಣಗೆರೆ, ಏಪ್ರಿಲ್‌, 14: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆ ರಾಷ್ಟ್ರೀಯ ಪಕ್ಷಗಳಿಗೆ ತಲೆನೋವು ತಂದಿಟ್ಟಂತಾಗಿದೆ. ಹಾಗೆಯೇ ದಾವಣಗೆರೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಿ.ಬಿ.ವಿನಯ್ ಕುಮಾರ್ ಸ್ಪರ್ಧೆ ಮಾಡುತ್ತಿರುವುದು ಕಾಂಗ್ರೆಸ್‌ಗೆ ತಲೆನೋವು ತಂದಿದೆ.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ವಿನಯ್ ಕುಮಾರ್ ಸ್ಪರ್ಧೆಯಿಂದ ಅಹಿಂದ ಮತಗಳು ವಿಭಜನೆ ಆಗುವ ಆತಂಕ ಎದುರಾಗಿದೆ.

Vinay Kumar contest as independent candidate in Davanagere Worried to Congress candidate

ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಶ್ರೀಗಳ ಜೊತೆ ವಿನಯ್ ಕುಮಾರ್ ಸಂಧಾನ ನಡೆಸಲು ಯತ್ನಿಸಲಾಯಿತಾದರೂ ಫಲಿಸಿಲ್ಲ. ಬಳಿಕ ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು. ದಿನಕಳೆದಂತೆ ಚುನಾವಣಾ ಕಾವು ಏರತೊಡಗಿದೆ. ಬಿಜೆಪಿಯು ಒಳಬೇಗುದಿಯಲ್ಲಿ ಬೇಯುತ್ತಿದೆ. ಇದರ ಲಾಭ ಪಡೆಯಲು ಹವಣಿಸುತ್ತಿದ್ದ ಕಾಂಗ್ರೆಸ್‌ಗೆ ವಿನಯ್ ಕುಮಾರ್ ಅಡ್ಡಗಾಲು ಹಾಕಿರುವುದಂತೂ ನಿಜ.

ಕುರುಬ ಸಮುದಾಯದ ವಿನಯ್ ಕುಮಾರ್ ಅವರು ಹಳ್ಳಿ ಹಳ್ಳಿಗಳಲ್ಲಿಯೂ ಪಾದಯಾತ್ರೆ ಮಾಡಿದ್ದಾರೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಜನರ ವಿಶ್ವಾಸ ಗಳಿಸಿದ್ದಾರೆ. ವಿನಯ್ ಕುಮಾರ್ ಸ್ಪರ್ಧೆ ಮಾಡಿದರೆ ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚು ನಷ್ಟವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಈ ಕಾರಣಕ್ಕೆ ವಿನಯ್ ಕುಮಾರ್ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವ ಪ್ರಯತ್ನಗಳು ತೆರೆಮರೆಯಲ್ಲಿ ಮುಂದುವರೆದಿದೆ.

ಈ ಬೆಳವಣಿಗೆ ನಡುವೆ ಮಾಜಿ ಸಚಿವ ಹೆಚ್.ಎಂ.ರೇವಣ್ಣ ನೇತೃತ್ವದ ಕಾಂಗ್ರೆಸ್ ನಿಯೋಗ ವಿನಯ್ ಕುಮಾರ್ ಅವರ ದಾವಣಗೆರೆಯ ಎಸ್.ಎಸ್. ಬಡಾವಣೆಯಲ್ಲಿನ ನಿವಾಸಕ್ಕೆ ಭೇಟಿ ನೀಡಿತ್ತು. ಆದರೂ ಸಂಧಾನ ಫಲ ಕೊಡಲಿಲ್ಲ.

ಆಹ್ವಾನ ತಿರಸ್ಕಾರ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಜಿ.ಬಿ.ವಿನಯ್ ಕುಮಾರ್ ಅವರನ್ನು ಮಾಜಿ ಸಚಿವ ಹೆಚ್.ಎಂ.ರೇವಣ್ಣ ನೇತೃತ್ವದ ಕಾಂಗ್ರೆಸ್ ನಿಯೋಗವು ಭೇಟಿ ಮಾಡಿದ್ದು, ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿತ್ತು. ಆದರೂ ಕೂಡ ವಿನಯ್ ಕುಮಾರ್ ಅವರು ನಯವಾಗಿ ತಿರಸ್ಕರಿಸಿದರು.

ಒಮ್ಮೆ ಮಾಡಿರುವ ನಿರ್ಧಾರ ವಾಪಸ್ ಪಡೆಯಲು ಸಾಧ್ಯವೇ ಇಲ್ಲ. ನಾನು ಸ್ಪರ್ಧೆ ಮಾಡುತ್ತಿದ್ದು, ಲೋಕಸಭಾ ಕ್ಷೇತ್ರದಲ್ಲಿ ನಾನು ಗೆಲ್ಲುವ ಎಲ್ಲಾ ಅವಕಾಶಗಳಿವೆ. ಕಳೆದ 30 ವರ್ಷಗಳಿಂದ ಎರಡು ಕುಟುಂಬಗಳದ್ದೇ ಪಾಳೇಗಾರಿಕೆ ಸಂಸ್ಕೃತಿ ಇದೆ. ಇದರ ವಿರುದ್ಧ ಜನರು ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ವರ್ಗದವರು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರೂ ಸಹ ಕಣದಿಂದ ಹಿಂದೆ ಸರಿಯುವಂತೆ ವಿನಯ್ ಕುಮಾರ್ ಅವರಿಗೆ ಹೇಳುವಂತೆ ಹೇಳಿದ್ದಾರೆ. ಹಾಗಾಗಿ, ಬಂದಿದ್ದೇನೆ. ಮುಂದೆ ಉತ್ತಮ ಅವಕಾಶಗಳಿವೆ. ಹಾಗಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಹೆಚ್. ಎಂ. ರೇವಣ್ಣ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಮಾರ್, ದಾವಣಗೆರೆಯಲ್ಲಿ ಆಗುತ್ತಿರುವ ಬೆಳವಣಿಗೆ ಎಲ್ಲವೂ ಗೊತ್ತಿದೆ. ಜನರ ಮನದಲ್ಲಿ ವಿನಯ್ ಕುಮಾರ್ ಹೆಸರು ಅಚ್ಚಳಿಯದೇ ಉಳಿದಿದೆ. ಜನರ ಅಪೇಕ್ಷೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.

ಸ್ಪರ್ಧೆ ಘೋಷಣೆ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ನಡುಕ ಶುರುವಾಗಿದೆ. ಎರಡೂ ಕುಟುಂಬಗಳಿಗೆ ಟಿಕೆಟ್ ನೀಡಲಾಗಿದೆ. ಸ್ವಾಭಿಮಾನದ ಸ್ಪರ್ಧೆ ಇದು. ಜನರು ಕೈಹಿಡಿಯುತ್ತಾರೆ ಎಂಬ ಭರವಸೆ ಇದೆ. ಅಹಿಂದ
ವರ್ಗ ಮಾತ್ರವಲ್ಲ, ಲಿಂಗಾಯತ ಸಮುದಾಯವೂ ಸೇರಿದಂತೆ ಎಲ್ಲಾ ಜಾತಿ, ಧರ್ಮದವರು ನನಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಜನರು ಗೆಲ್ಲಿಸಿಕೊಂಡು ಬರುತ್ತಾರೆ. ಅಚ್ಚರಿ ಫಲಿತಾಂಶ ಬಂದೇ ಬರುತ್ತದೆ ಎಂದು ಹೆಚ್. ಎಂ. ರೇವಣ್ಣ ನೇತೃತ್ವದ ನಿಯೋಗಕ್ಕೆ ವಿನಯ್ ಕುಮಾರ್ ಅವರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಸಂಧಾನಕ್ಕೆ ಬಂದ ರೇವಣ್ಣ ನೇತೃತ್ವದ ನಿಯೋಗವು ಬರಿಗೈಯಲ್ಲಿ ವಾಪಸ್ ಆಯಿತು.

ಇಂದು ಬೆಳಿಗ್ಗೆ ಹೆಚ್. ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಸುಭಾಶ್ ಚಂದ್ರ, ಕಾಂಗ್ರೆಸ್ ಮುಖಂಡರಾದ ಬಿ. ವೀರಣ್ಣ, ಹೊನ್ನಾಳಿ ಸ್ವಾಮಿ, ಹೊನ್ನಾಳಿ ಯೋಗೇಶ್ ಸೇರಿದಂತೆ ಹಲವರು ವಿನಯ್ ಕುಮಾರ್ ಅವರ ಜೊತೆ ಚರ್ಚೆ ನಡೆಸಿದರು. ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದರೂ ವಿನಯ್ ಕುಮಾರ್ ಅವರು ನೀವು ನನ್ನನ್ನು ಮಾತನಾಡಿಸಲು ಬಂದಿದ್ದು ಖುಷಿ ಸಂಗತಿ ಎಂದರು.

ಜಿಲ್ಲೆಯಾದ್ಯಂತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ. ಜನರಿಗೆ ಕೊಟ್ಟಿರುವ ಮಾತು ತಪ್ಪಲು ಇಷ್ಟವಿಲ್ಲ. ನಿಮ್ಮ ಸಲಹೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹೆಚ್. ಎಂ. ರೇವಣ್ಣರು ವಿನಯ್ ಕುಮಾರ್ ಮನೆಗೆ ಆಗಮಿಸುತ್ತಿದ್ದಂತೆ ನಗುಮೊಗದಿಂದಲೇ ಸ್ವಾಗತಿಸಿದ ವಿನಯ್ ಕುಮಾರ್ ಜೊತೆ ಕಾಂಗ್ರೆಸ್ ನಿಯೋಗವು ಮಾತುಕತೆ ನಡೆಸಿತು. ಈ ವೇಳೆ ಮಾತನಾಡಿದ ಹೆಚ್.ಎಂ.ರೇವಣ್ಣ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿದೆ. ನೀವು ಸ್ಪರ್ಧೆ ಮಾಡಿದರೆ ತೊಂದರೆ ಆಗುತ್ತದೆ. ಯೋಚನೆ ಮಾಡಿ ಎಂದು ಸಲಹೆ ನೀಡಿದರು. ಕಾಂಗ್ರೆಸ್ ಮುಖಂಡರು ಸಹ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಮಾರ್ ಅವರು, ಈಗಾಗಲೇ ನಾನು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಏಪ್ರಿಲ್ 18ಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದೇನೆ. ದಾವಣಗೆರೆ ಜಿಲ್ಲೆಯ ಎಲ್ಲಾ ಹಳ್ಳಿಗಳು, ದಾವಣಗೆರೆ ನಗರದಲ್ಲಿಯೂ ನಾನು ಸ್ಪರ್ಧೆ ಮಾಡಬೇಕೆಂಬ ಬಯಕೆ, ಆಸೆ ಜನರಲ್ಲಿದೆ. ಜನರ ಒತ್ತಡ ಇನ್ನೂ ಕಡಿಮೆ ಆಗಿಲ್ಲ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+