ದಾವಣಗೆರೆ-ಚಿತ್ರದುರ್ಗ-ತುಮಕೂರು ನೂತನ ರೈಲು ಮಾರ್ಗ ಲೋಕಾರ್ಪಣೆ ಬಗ್ಗೆ ಮಹತ್ವದ ಅಪ್ಡೇಟ್
New Railway Line: ದಾವಣಗೆರೆ-ಚಿತ್ರದುರ್ಗ-ತುಮಕೂರು ಹೊಸ ರೈಲು ಮಾರ್ಗ ಯಾವಾಗ ಲೋಕಾರ್ಪಣೆ ಆಗುತ್ತದೆ ಎನ್ನುವ ಪ್ರಶ್ನೆ ತುಂಬಾ ಜನರಲ್ಲಿ ಬಂದಿರುತ್ತದೆ. ಇದೀಗ ಇದಕ್ಕೆ ರೈಲ್ವೆ ಸಚಿವ ವಿ.ಸೋಮಣ್ಣವರು ಉತ್ತರ ನೀಡಿದ್ದಾರೆ. ಹಾಗಾದ್ರೆ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಳೆ ಮಾರ್ಗದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ ಹೊಸ ಮಾರ್ಗ ನಿರ್ಮಾಣ ಆಗುತ್ತಿದ್ದು, ಇದು ಪೂರ್ಣಗೊಂಡರೆ ಸಮಯ ತುಂಬಾ ಕಡಿಮೆಯಾಗಲಿದೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ಹೊಸ ರೈಲು ಮಾರ್ಗ ಯೋಜನೆಯನ್ನು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಈ ನೂತನ ರೈಲು ಮಾರ್ಗದ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಯದುರ್ಗ-ತುಮಕೂರು ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯ ಆಗಿದ್ದು, ಟೆಂಡರ್ ಕರೆಯಲಾಗಿದೆ. ತುಮಕೂರು-ದಾವಣಗೆರೆ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಶೀಘ್ರದಲ್ಲೇ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ನಗರದ ತುರುವನೂರು ರಸ್ತೆ ಹಾಗೂ ಮೆದೆಹಳ್ಳಿ ರಸ್ತೆಯಲ್ಲಿನ ರೈಲ್ವೆ ಕೆಳ ಸೇತುವೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾತನಾಡಿದರು. ಕೆಳ ಸೇತುವೆ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ, ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಕೆ ಮಾಡಬೇಕು. ಪರಿಹಾರ ಕಾರ್ಯಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆಗೆ ಸಲ್ಲಿಸಬೇಕೆಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದಲ್ಲಿ ಈಗಾಗಲೆ ಶೇಕಡ 90ರಷ್ಟು ಭೂಸ್ವಾಧೀನ ಆಗಿದೆ. ಕಾರಣಾಂತರಗಳಿಂದ ಕೆಲವೆಡೆ ಭೂಸ್ವಾಧೀನ ಬಾಕಿ ಇದೆ. ಬಾಕಿಯಿರುವ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.
ಈ ಹೊಸ ರೈಲ್ವೆ ಮಾರ್ಗ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ 549.45 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಈ ಮಾರ್ಗದ ಉದ್ದ ಒಟ್ಟು 191 ಕಿಲೋ ಮೀಟರ್ ಆಗಿದೆ. ಹಳೇ ಮಾರ್ಗದಲ್ಲಿ ತುಮಕೂರು-ದಾವಣಗೆರೆ ಹಾಗೂ ದಾವಣಗೆರೆ-ತುಮಕೂರಿಗೆ ಅರಸಿಕೆರೆ ಜಂಕ್ಷನ್ ಮೇಲೆ ಸುತ್ತುವರಿದುಕೊಂಡು ಹೋಗಬೇಕಿತ್ತು. ಇದರಿಂದ ತುಂಬಾ ಸಮಯ ವ್ಯರ್ಥ ಆಗುತ್ತದೆ ಹಾಗೂ ದೂರವೂ ಆಗಲಿದೆ.
ಆದರೆ, ಹೊಸ ಮಾರ್ಗ ಸಮಯ ಹಾಗೂ ಅಂತರ ಎರಡನ್ನು ಕಡಿಮೆ ಮಾಡಲಿದೆ. ಈ ಹೊಸ ಮಾರ್ಗ ಊರುಕೆರೆ, ತಿರುಮೇನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಸಿರಾ, ತಾವರಕೆರೆ, ಅನಿಸಿದ್ರಿ, ಹಿರಿಯೂರು, ಮೇಟಿಕುರಿಕೆ, ಐಮಂಗಳ, ಪಳವನಹಳ್ಳಿ, ಚಿತ್ರದುರ್ಗ, ಸಿರಿಗೆರೆ, ಹೆಬ್ಬಾಳು, ತೋಳಹುಣುಸೆಲ್ಲಿ ರೈಲ್ವೆ ನಿಲ್ದಾಣಗಳನ್ನು ಒಳಗೊಂಡಿರಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಹೊಸ ರೈಲ್ವೆ ಮಾರ್ಗದಲ್ಲಿ ಐದು ಪ್ರಮುಖ ಬ್ರಿಡ್ಜ್‌ಗಳು, 18 ಚಿಕ್ಕ ಬ್ರಿಡ್ಜ್‌ಗಳು, 23 ರಸ್ತೆ ಅಂಡರ್ ಪಾಸ್ ಬ್ರಿಡ್ಜ್‌ಗಳು, 7 ರೋಡ್ ಓವರ್ ಬ್ರಿಡ್ಜ್, ಒಂದು ಫೂಟ್ ಓವರ್ ಬ್ರಿಡ್ಜ್, ಒಂದು ಪೆಡಿಸ್ಟಲ್ ಬ್ರಿಡ್ಜ್ ಕೂಡ ನಿರ್ಮಾಣ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications