ಬೆಣ್ಣೆನಗರಿಯಲ್ಲಿ ಜಲಸಿರಿ ಯೋಜನೆಗಳ ಪೈಪ್ ಕದಿಯುತ್ತಿರುವ ಕಳ್ಳರು!
ದಾವಣಗೆರೆ, ಅಕ್ಟೋಬರ್ 19: ನಗರದಲ್ಲಿ ಜಲಸಿರಿ ಸೇರಿದಂತೆ ಕುಡಿಯುವ ನೀರು ಪೂರೈಕೆ ಮಾಡಲು ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೈಪ್‌ಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಜೊತೆಗೆ ಪೈಪ್‌ಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆ ಕಳ್ಳರು ಕೈಚಳಕ ತೋರಿಸುತ್ತಿದ್ದು, ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಲೆನೋವು ತಂದಿದೆ.
ನಗರದ ಚಾಮರಾಜಪೇಟೆ ವೃತ್ತದ ಬಳಿ ಕಳ್ಳರು ದಿನದ 24 ಗಂಟೆ ನೀರು ಪೂರೈಸುವ ಯೋಜನೆಗೆ ಪೈಪ್ ಅಳವಡಿಸುವ ಸಲುವಾಗಿ ದಾಸ್ತಾನು ಮಾಡಲಾಗಿತ್ತು. ಕೆಲವೆಡೆ ಪೈಪ್ ಅಳವಡಿಸುವ ಕೆಲಸ ಸಹ ಆಗುತ್ತಿದೆ. ಆದರೆ ಕಳ್ಳರು ಪೈಪ್ ಕಳ್ಳತನ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾರೂ ಇಲ್ಲದನ್ನು ಗಮನಿಸುವ ಕಳ್ಳರು ಆಚೀಚೆ ನೋಡಿ, ಯಾರಾದರೂ ಬಂದರೆ ಎಂದು ಗಮನಿಸುತ್ತಾರೆ. ಒಬ್ಬ ಈ ಕೆಲಸ ಮಾಡಿದರೆ ಮತ್ತೊಬ್ಬನು ಪೈಪ್ ಕಟ್ ಮಾಡಲು ಮುಂದಾಗುತ್ತಾನೆ. ನೋಡನೋಡುತ್ತಿದ್ದಂತೆ ಪೈಪ್ ಕಟ್ ಮಾಡುತ್ತಾರೆ. ಬಳಿಕ ಅಲ್ಲಿಂದ ಪರಾರಿಯಾಗುತ್ತಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದಲ್ಲಿ ಸರಕಳ್ಳತನ, ಮನೆ ಕಳ್ಳತನ ಪ್ರಕರಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಾ ಬಂದಿದ್ದರೂ ಅಲ್ಲಲ್ಲಿ ಕಳವು ಪ್ರಕರಣಗಳು ವರದಿ ಆಗುತ್ತಲೇ ಇವೆ. ಈಗ ಕಳ್ಳರ ವಕ್ರದೃಷ್ಟಿ ಪೈಪ್‌ಗಳ ಮೇಲೆ ಬಿದ್ದಿದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಹಾಗೂ ಜಲಸಿರಿ ಯೋಜನೆಯಡಿ ನೀರು ಪೂರೈಸುವ ಉದ್ದೇಶದಿಂದ ಗುಂಡಿಗಳನ್ನು ಅಗೆಯಲಾಗುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಪೈಪ್‌ಗಳನ್ನು ಖರೀದಿಸಲಾಗಿದೆ.

ಜನನಿಬಿಡ ಪ್ರದೇಶಗಳಲ್ಲಿ ತಲೆಹಾಕದ ಕಳ್ಳರು ಜನರ ಓಡಾಟ ಕಡಿಮೆ ಇರುವ, ಕಿರಿದಾದ ಓಣಿಗಳು, ಯಾರೂ ಬಾರದ ಜಾಗಗಳನ್ನು ಮೊದಲು ನೋಡಿಕೊಳ್ಳುತ್ತಾರೆ. ಪಕ್ಕಾ ಯೋಜನೆ ರೂಪಿಸಿಕೊಂಡು ಪೈಪ್‌ಗಳನ್ನು ಕಳುವು ಮಾಡುತ್ತಿದ್ದಾರೆ. ಈಗ ಚಾಮರಾಜಪೇಟೆಯಲ್ಲಿ ಕಳವು ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಗುತ್ತಿಗೆದಾರರು ಮತ್ತು ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದೆ. ಜೊತೆಗೆ ಸ್ಥಳೀಯರೇ ಈ ಕೃತ್ಯ ಎಸಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.
ಕಬ್ಬಿಣದ ಪೈಪ್ ಅಳವಡಿಸಲಾಗಿದೆ. ಗುಣಮಟ್ಟದಿಂದ ಕೂಡಿದೆ. ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿರುವ ಸಾಧ್ಯತೆ ಇದೆ. ಸೂಯಜ್ ಕಂಪೆನಿಯವರ ಗಮನಕ್ಕೆ ತಂದಿದ್ದೇವೆ. ಪೂರ್ತಿ ನೀರಿನ ಸಂಪರ್ಕ ಆಗಿಲ್ಲ. ಜಲಸಿರಿ ಯೋಜನೆಯಡಿ ಪೂರ್ತಿ ಕಾಮಗಾರಿ ಆದ ಬಳಿಕ ನೀರು ಸರಿಯಾಗಿ ಪೂರೈಕೆ ಆಗದಿದ್ದರೆ ಸಮಸ್ಯೆ ಆಗುತ್ತದೆ. ಅಲ್ಲಲ್ಲಿ ಕೊರೆದು ಪೈಪ್ ಕಳ್ಳತನ ಮಾಡಿರುವುದು ಗೊತ್ತಾಗಬಹುದು. ಅಲ್ಲಿಯವರೆಗೆ ಕಾಯದೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಈಗಲೇ ಗಂಭೀರವಾಗಿ ಪರಿಗಣಿಸಿದರೆ ಮುಂದೆ ಸಮಸ್ಯೆ ಆಗದಂತೆ ನೋಡಿಕೊಳ್ಳಬಹುದು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಹೇಳಿದ್ದಾರೆ.












Click it and Unblock the Notifications