SSLC Result: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯ ಅಂಧ ವಿದ್ಯಾರ್ಥಿನಿಯ ಅದ್ಭುತ ಸಾಧನೆ
ದಾವಣಗೆರೆ, ಮೇ, 09: ಇಂದು (ಮೇ 09) 24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ನಗರದ ಶ್ರೀ ಸಿದ್ಧಗಂಗಾ ಪ್ರೌಢಶಾಲೆಗೆ 100ಕ್ಕೆ 100ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 306 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಹಾಗಾದರೆ ಯಾವ್ಯಾವ ಶಾಲೆಯ ವಿದ್ಯಾರ್ಥಿಗಳು ಎಷ್ಟು ಅಂಕಗಳನ್ನು ಗಳಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
625ಕ್ಕೆ 620 ಅಂಕಗಳನ್ನು ಪಡೆದ ಗಾನವಿ ಹೆಚ್.ಜಿ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಗಳಿಸಿದ್ದಾಳೆ. ಗಿರೀಶ್ ಹೆಚ್.ಎನ್. ಮತ್ತು ಜ್ಯೋತಿ ಡಿ.ಎಸ್. ಇವರ ಪುತ್ರಿ ಗಾನವಿ ಹೆಚ್.ಜಿ. ಕನ್ನಡ 124, ಇಂಗ್ಲೀಷ್ 98, ಹಿಂದಿ 100, ಗಣಿತ 100, ವಿಜ್ಞಾನ 98, ಸಮಾಜ 100, ಒಟ್ಟು 99.20% ಗಳಿಸಿದ್ದಾಳೆ.

ಇನ್ನು ವರುಣ್ ಆರ್-611, ಸನಾ ಅಜೀಂ-610, ಉಮ್ಮೆ ಹಫ್ಸಾ-607, ಚಂದನ್ ಎಂ.ಡಿ. ಮತ್ತು ಚೇತನ್ ಎಂ-606, ದೀಪಾ ಬಿ.ಜೆ., ಸನತ್ ಟಿ., ಸಿಂಚನ ಕೆ., ಸಿರಿ ಆರ್.ಎಂ. ಮತ್ತು ಯಜ್ಞಶ್ರೀ 604 ಅಂಕಗಳನ್ನು ಗಳಿಸಿದ್ದಾರೆ. 11 ಮಕ್ಕಳು 600ಕ್ಕಿಂತ ಹೆಚ್ಚು, 47 ಮಕ್ಕಳು 90%ಗಿಂತ ಹೆಚ್ಚು, 83 ಮಕ್ಕಳು 85%ಗಿಂತ ಹೆಚ್ಚು, 190 ಮಕ್ಕಳು 60%ಕ್ಕಿಂತ ಹೆಚ್ಚು, 33 ಮಕ್ಕಳು 50%ಗಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಕನ್ನಡ 125ಕ್ಕೆ 125 ಅಂಕಗಳನ್ನು 12 ಮಕ್ಕಳು, ಹಿಂದಿಯಲ್ಲಿ 28 ಮಕ್ಕಳು, ಗಣಿತದಲ್ಲಿ 1, ಸಮಾಜದಲ್ಲಿ 4 ಮಕ್ಕಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಪೂರ್ಣ ಅಂಧ ವಿದ್ಯಾರ್ಥಿನಿ ಯುಕ್ತಿ ಪಿ.593 ಅಂಕಗಳನ್ನು, ಕೈಕಾಲುಗಳ ಬೆಳವಣಿಗೆ ಇಲ್ಲದ ಗೋವರ್ಧನ ನಾಯ್ಕ ಎಂಬ ವಿದ್ಯಾರ್ಥಿ 372 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವುದು ಈ ಬಾರಿಯ ವಿಶೇಷ.
100ಕ್ಕೆ 100 ಫಲಿತಾಂಶ ನೀಡಿರುವ ಎಲ್ಲ 306 ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಮಕ್ಕಳ ಪಾಲಕರಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.
ಇನ್ನು ಜಿಲ್ಲೆಗೆ ಟಾಪರ್ ಆಗಿರುವ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ವಿದ್ಯಾರ್ಥಿನಿ ಹೆಚ್.ಗಾನವಿ ಮಾತನಾಡಿದ್ದು, ತುಂಬಾ ಖುಷಿಯಾಗಿದೆ. ಇನ್ನು ಹೆಚ್ಚಿನ ಅಂಕ ನಿರೀಕ್ಷಿಸಿದ್ದೆ. ಆದ್ರೆ, ಅಷ್ಟು ಬಂದಿಲ್ಲ ಎಂದು ಅಸಮಾಧನ ಹೊರಹಾಕಿದರು.
ಆದರೆ ಜಿಲ್ಲೆಗೆ ಟಾಪರ್ ಆಗಿರುವುದು ಸಂತಸ ತಂದಿದೆ. ಕಷ್ಟಪಟ್ಟು ಓದಿದ್ದೆ. ಪೋಷಕರು, ಶಾಲೆಯ ಶಿಕ್ಷಕರು, ಸಹಪಾಠಿಗಳು ಸಹಕಾರದಿಂದ ಈ ಸಾಧನೆ ಮಾಡಿದ್ದೇನೆ. ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಓದುತ್ತಿದ್ದೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದೆ. ಕಠಿಣ ಪರಿಶ್ರಮ, ಸತತ ಓದಿನಿಂದ ಈ ಫಲಿತಾಂಶ ಬಂದಿದೆ ಎಂದು ಹೇಳಿದರು.
ಅಂಧತ್ವ ವಿದ್ಯಾರ್ಥಿನಿಯ ಸಾಧನೆ: ಇನ್ನು ಯುಕ್ತಿ ಪಿ. ಅಂಧ ವಿದ್ಯಾರ್ಥಿನಿ. ಕಣ್ಣು ಸಹ ಕಾಣಿಸುವುದಿಲ್ಲ. ಬೇರೆಯೊಬ್ಬರ ಸಹಕಾರದಿಂದ ಪರೀಕ್ಷೆ ಬರೆದಿದ್ದ ಈಕೆ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. 625ಕ್ಕೆ 593 ಅಂಕಗಳನ್ನು ಪಡೆಯುವ ಮೂಲಕ ಇತರರಿಗೂ ಮಾದರಿಯಾಗಿದ್ದಾಳೆ. ಅಷ್ಟೇ ಅಲ್ಲದೆ, ಇದು ಅಂಧ ವಿದ್ಯಾರ್ಥಿಗಳಿಗೆ ಓದಲು ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತದೆ ಎಂದು ಶಾಲೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.












Click it and Unblock the Notifications