SSLC Results 2025: ನಿಗದಿಪಡಿಸಿದ ಕೊಠಡಿ ಹೊರಗಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ
SSLC Results 2025: ರಾಜ್ಯದಲ್ಲಿ ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಇದೀಗ ಪರೀಕ್ಷೆ-1 ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿದ್ದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏಪ್ರಿಲ್ 15ರಿಂದ ಆರಂಭ ಆಗಿದೆ. ಆದರೆ ಇದೀಗ ಮೌಲ್ಯಮಾಪನ ಮಾಡಿದ ರೀತಿ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಟ್ಟುನಿಟ್ಟಾಗಿ ನಡೆಯುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಇದೀದ ದಾವಣಗೆರೆಯಲ್ಲಿ ಸಿಬ್ಬಂದಿಯು ಕಾಲೇಜೊಂದರ ಹೊರಗಡೆ ಕುಳಿತುಕೊಂಡು ಮೌಲ್ಯಮಾಪನ ನಡೆಸಿದ್ದಾರೆ. ಹಾಗಾದ್ರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲೇ ಮಂಗಳವಾರ (ಏಪ್ರಿಲ್ 15) ಆರಂಭ ಮಾಡಿದ್ದಾರೆ. ಗೌಪ್ಯತೆ ಕಾಪಾಡಬೇಕಾಗಿದ್ದ ಮೌಲ್ಯಮಾಪನ ಕಾರ್ಯ ಸಮನ್ವಯತೆಯ ಕೊರತೆ ಹಿನ್ನೆಲೆ ಹೊರಗಡೆ ಕಾರಿಡಾರಿನಲ್ಲಿ ನಡೆಯಿತು.
ರಾಜ್ಯಾದ್ಯಂತ ಇಂದಿನಿಂದ ಸಿಇಟಿ ಪರೀಕ್ಷೆಗಳು ಆರಂಭವಾಗಿವೆ. ಇನ್ನು ಏಪ್ರಿಲ್ 16ರಿಂದ ಇದೇ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿರುವುದೇ ಗೊಂದಲಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಟೇಬಲ್‌ಗಳ ಮೇಲೆ ಬರೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿಬ್ಬಂದಿ ಕೊಠಡಿಗಳಿಗೆ ಬಂದಿದ್ದರಿಂದ ಮೌಲ್ಯಮಾಪನ ನಡೆಸುತ್ತಿದ್ದ ಸಿಬ್ಬಂದಿ ಕಾರಿಡಾರಿಗೆ ತೆರಳಿದ್ಧಾರೆ.
ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿಜ್ಞಾನ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರವಾಗಿ ಮೋತಿ ವೀರಪ್ಪ ಕಾಲೇಜಿನ ಪ್ರೌಢಶಾಲಾ ವಿಭಾಗವನ್ನು ನಿಗದಿ ಮಾಡಲಾಗಿತ್ತು. ಕಾಲೇಜಿನ 5 ಕೊಠಡಿಗಳನ್ನು ಇದಕ್ಕೆಂದೇ ಮೀಸಲಿಡಲಾಗಿತ್ತು. ಮೌಲ್ಯಮಾಪನ ಕಾರ್ಯಕ್ಕೆ ಹಾಜರಾದ ಶಿಕ್ಷಕರಿಗೆ ಉತ್ತರ ಪತ್ರಿಕೆಗಳನ್ನು ವಿತಣೆಯನ್ನೂ ಮಾಡಲಾಗಿತ್ತು. ಆದರೆ ಇದೇ ವೇಳೆ ಸಿಇಟಿ ಸಿದ್ಧತೆ ಕಾರ್ಯವೂ ಆರಂಭವಾಯಿತು.
ಆದ್ದರಿಂದ ಗೊಂದಲಕ್ಕೊಳಗಾದ ಶಿಕ್ಷಕರು ಅಸಮಾಧಾನ ಹೊರಹಾಕಿ ಕೊಠಡಿಯ ಹೊರಬಂದು ಮೌಲ್ಯಮಾಪನ ಕಾರ್ಯವನ್ನು ಮುಂದುವರೆಸಿದರು. ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು ಕೇಂದ್ರಗಳಿಗೆ ಹಾಜರಾಗಿದ್ದರು. ಸಿಇಟಿ ನಡೆಯುವ ಕೇಂದ್ರಗಳಲ್ಲಿ ಏಪ್ರಿಲ್ 16 ಮತ್ತು 17ರಂದು ಮೌಲ್ಯಮಾಪನ ಇರುವುದಿಲ್ಲ. ಮೋತಿ ವೀರಪ್ಪ ಕಾಲೇಜಿನಲ್ಲಿ ಬಯಲಿನಲ್ಲಿ ಮೌಲ್ಯಮಾಪನ ಮಾಡಿರುವುದು ಗಮನಕ್ಕೆ ಬಂದಿಲ್ಲ ಎಂದು ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಬಾರಿ 8,96,447 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 15,881 ಶಾಲೆಗಳ ಈ ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಫಲಿತಾಂಶ ಪ್ರಕಟದ ನಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಮಂಡಳಿಯ ಅರ್ಜಿ ನಮೂನೆಯನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅಗತ್ಯ ಶುಲ್ಕದೊಂದಿಗೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಮೌಲ್ಯಮಾಪನ ಕಾರ್ಯದಲ್ಲಿ ಎಲ್ಲಾ ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಉಪ ಮೌಲ್ಯಮಾಪಕರು ಏಪ್ರಿಲ್ 12ರಂದು ಹಾಜರಾಗಿದ್ದರೆ, ಸಹಾಯಕ ಮೌಲ್ಯಮಾಪಕರು ಏಪ್ರಿಲ್ 15ರಂದು ಕಡ್ಡಾಯವಾಗಿ ಹಾಜರಾಗಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ.
ಇನ್ನು ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದಿರುವವರಿಗೆ ಮತ್ತೆ ಪರೀಕ್ಷೆ-2 ಮಾಡಲಾಗುತ್ತದೆ. ಇದರಲ್ಲಿ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಅವಕಾಶ ಕಲ್ಪಿಸಲಾಗಿದೆ. ಈ ಪರೀಕ್ಷೆಗಳು ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಫಲಿತಾಂಶ ವೀಕ್ಷಿಸುವುದು ಹೇಗೆ?
* ಮೊದಲು ಅಧಿಕೃತ ವೆಬ್‌ಸೈಟ್ sslc.karnataka.gov.in ಮತ್ತು karresults.nic.in ಗೆ ಭೇಟಿ ನೀಡಿ.
* ಕರ್ನಾಟಕ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಫಲಿತಾಂಶಗಳು 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶ ಪಡೆಯಬಹುದಾಗಿದೆ.
* ಬಳಿಕ ಅಂಕಪಟ್ಟಿಯ ಪ್ರತಿಯನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು.












Click it and Unblock the Notifications