• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ: ದಸರಾ, ಈದ್ ಮಿಲಾದ್ ವೇಳೆ ಸಾಮೂಹಿಕ ಮೆರವಣಿಗೆಗೆ ರೆಡ್ ಸಿಗ್ನಲ್!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 13: ಬೆಣ್ಣೆನಗರಿಯಲ್ಲಿ ಕೊರೊನಾ ಆರ್ಭಟ ಕಡಿಮೆಯಾಗಿದ್ದರೂ ಭೀತಿ ಇನ್ನು ದೂರವಾಗಿಲ್ಲ. ದಸರಾ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರುವ ಜಿಲ್ಲಾಡಳಿತ, ಯಾವುದೇ ಕಾರಣಕ್ಕೂ ಸಾರ್ವಜನಿಕ ಮೆರವಣಿಗೆ ನಡೆಸುವಂತಿಲ್ಲ ಖಡಾಖಂಡಿತವಾಗಿ ಹೇಳಿದೆ.

"ದಾವಣಗೆರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಈಗಾಗಲೇ ವಿವಿಧ ಧರ್ಮದವರ ಮುಖಂಡರ ಸೌಹಾರ್ದ ಸಭೆ ನಡೆಸಿದ್ದೇವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಮುಖಂಡನೊಬ್ಬ ಆಡಿಯೋ ಹರಿಬಿಟ್ಟು ನಾವು ಜುಲುಸ್ ಮಾಡ್ತೇವೆ ಎಂಬುದಾಗಿ ಹೇಳಿರುವುದು ತಪ್ಪು. ಜುಲುಸ್‌ಗೆ ಅವಕಾಶ ಇಲ್ಲ. ಇದನ್ನು ಮೀರಿ ಸಾರ್ವಜನಿಕ ಮೆರವಣಿಗೆ ನಡೆಸಿದರೆ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ. ವಾಯ್ಸ್ ಮೆಸೇಜ್ ಮಾಡಿ ಹರಿಬಿಟ್ಟಿದ್ದ ವ್ಯಕ್ತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕರೆಯಿಸಿ, ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು," ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದ್ದಾರೆ.

"ಕೊರೊನಾ ವಿರುದ್ಧದ ಹೋರಾಟಕ್ಕೆ ಮೊದಲ ದಿನದಿಂದಲೂ ಸಹಕಾರ ನೀಡಿದ್ದೀರಾ. ಮುಂಬರುವ ದಿನಗಳಲ್ಲಿಯೂ ನೀಡಿ. ನಿಮ್ಮ ಸಹಕಾರ ಅಗತ್ಯ. ಜನರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ," ಎಂದು ಹೇಳಿದ್ದಾರೆ.

   ಬಿಬಿಎಂಪಿಯಿಂದ ಕುಸಿತದ ಹಂತದಲ್ಲಿರುವ ಕಟ್ಟಡ ತೆರವು ಕಾರ್ಯಾಚರಣೆ | Oneindia Kannada
    ಕೊರೊನಾ ಮಾರ್ಗಸೂಚಿಯನ್ನು ಪಾಲಿಸಲೇಬೇಕು

   ಕೊರೊನಾ ಮಾರ್ಗಸೂಚಿಯನ್ನು ಪಾಲಿಸಲೇಬೇಕು

   "ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ದಸರಾ ಹಾಗೂ ಈದ್‌ ಮಿಲಾದ್ ಹಬ್ಬಗಳ ಆಚರಣೆಗಾಗಿ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಲೇಬೇಕು. ಸೌಹಾರ್ದಯುತವಾಗಿ ದಸರಾ ಹಾಗೂ ಈದ್‌ ಮಿಲಾದ್ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಸಾಮೂಹಿಕ ಮೆರವಣಿಗೆಗೆ ಅವಕಾಶವಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಕಟ್ಟಿಟ್ಟ ಬುತ್ತಿ," ಎಂದು ಹೇಳಿದ್ದಾರೆ.

   "ಕೊರೊನಾ ಸೋಂಕಿನ ವಿರುದ್ಧ ನಾವು ಸಾರಿದ ಯುದ್ಧ ಮುಗಿದಿಲ್ಲ. ಪ್ರಕರಣಗಳು ದಿನೇ ದಿನೇ ಬರುತ್ತಲೇ ಇದೆ. ಅಲ್ಲೊಂದು ಇಲ್ಲೊಂದು ಸಾವು ಆಗುತ್ತಿದೆ. ದಸರಾ ಹಬ್ಬದ ಜೊತೆ ಈದ್ ಮಿಲಾದ್ ಬಂದಿದೆ. ಪ್ರತ್ಯೇಕವಾಗಿ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಸಾರ್ವಜನಿಕ ಮೆರವಣಿಗೆಗೆ ಅವಕಾಶ ಇಲ್ಲ. ಮೈಸೂರು ದಸರಾ ನಾಡಹಬ್ಬ, ನಮ್ಮ ಸಂಸ್ಕೃತಿಯ ಸಂಕೇತ ಎಂಬ ದೃಷ್ಟಿಯಿಂದ ಅನೇಕ ನಿರ್ಬಂಧಗಳನ್ನು ಹೇರಿ ಸಾಂಕೇತಿಕ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಉಳಿದ ಎಲ್ಲಿಯೂ ಮೆರವಣಿಗೆ ನಡೆಸುವಂತಿಲ್ಲ," ಎಂದು ತಿಳಿಸಿದ್ದಾರೆ.

    ವಿಜೃಂಭಣೆಯ ಆಚರಣೆಗಳಿಗೆ ಕೊರೊನಾ ತಡೆಹಾಕಿದೆ

   ವಿಜೃಂಭಣೆಯ ಆಚರಣೆಗಳಿಗೆ ಕೊರೊನಾ ತಡೆಹಾಕಿದೆ

   "ಕೊರೊನಾದಂತ ಮಾರಕ ಸೋಂಕು ರೋಗ ಇಲ್ಲದ ಸಂದರ್ಭಗಳಲ್ಲಿ ನಾವು ಎಲ್ಲ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ವಿಜೃಂಭಣೆಯ ಮೆರವಣಿಗೆ ಸಹಿತ ಆಚರಿಸಿದ್ದೇವೆ. ಆದರೆ ಕೋವಿಡ್ ಸೋಂಕು ಕಳೆದೆರಡು ವರ್ಷಗಳಿಂದ ಇಂತಹ ವಿಜೃಂಭಣೆಯ ಆಚರಣೆಗಳಿಗೆ ತಡೆಹಾಕಿದ್ದು, ಎಲ್ಲರ ಆರೋಗ್ಯ ದೃಷ್ಟಿಯಿಂದ, ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸುವುದು ಅನಿವಾರ್ಯವಾಗಿದೆ. ಈ ಹಿಂದೆಯೂ ಕೂಡ ಎಲ್ಲ ಸಮಾಜದವರೂ, ಸರ್ಕಾರದ ಆದೇಶಗಳಂತೆ ಹಬ್ಬಗಳನ್ನು ಸರಳವಾಗಿ ಆಚರಿಸಿ, ಸಹಕರಿಸಿದ್ದರ ಫಲವಾಗಿ ಇದೀಗ ಕೋವಿಡ್ ಸದ್ಯ ನಿಯಂತ್ರಣದಲ್ಲಿದೆ. ಆದಾಗ್ಯೂ ತಜ್ಞರ ಎಚ್ಚರಿಕೆ ಮೇರೆಗೆ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ," ಎಂದರು.

   "ಈ ಬಾರಿಯ ದಸರಾ ಹಾಗೂ ಈದ್‌ ಮಿಲಾದ್ ಹಬ್ಬದ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ಹಾಕಿದ್ದು, ನಿರ್ಬಂಧ ಸಡಿಲಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿಲ್ಲ. ಆದರೆ ಅಗತ್ಯ ಬಿದ್ದರೆ ಇನ್ನಷ್ಟು ನಿರ್ಬಂಧ ವಿಧಿಸಲು ಅವಕಾಶ ನೀಡಿದೆ," ಎಂದು ಮಾಹಿತಿ ನೀಡಿದ್ದಾರೆ.

    ಸೌಹಾರ್ದಯುತವಾಗಿ ಹಬ್ಬ ಆಚರಿಸೋಣ ಎಂದ ಜಿಲ್ಲಾಧಿಕಾರಿ

   ಸೌಹಾರ್ದಯುತವಾಗಿ ಹಬ್ಬ ಆಚರಿಸೋಣ ಎಂದ ಜಿಲ್ಲಾಧಿಕಾರಿ

   "ಅ.15ರ ವರೆಗಿನ ದಸರಾ ಹಾಗೂ ಅ.20ರಂದು ಈದ್‌ ಮಿಲಾದ್ ಎರಡೂ ಹಬ್ಬಗಳ ಆಚರಣೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಿಸೋಣ. ಸರ್ಕಾರದ ಮಾರ್ಗಸೂಚಿಯಂತೆ ಎರಡೂ ಹಬ್ಬಗಳ ಸಂದರ್ಭದಲ್ಲಿ ಯಾವುದೇ ಬಗೆಯ ಸಾಮೂಹಿಕ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಈ ಆದೇಶವನ್ನು ಎಲ್ಲರೂ ಪಾಲಿಸಿ, ಸೌಹಾರ್ದಯುತವಾಗಿ ಹಬ್ಬ ಆಚರಿಸೋಣ. ಎಲ್ಲರೂ ಇದಕ್ಕೆ ಸಹಕರಿಸಬೇಕು," ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದರು.

   ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, "ದಸರಾ ಹಾಗೂ ಈದ್‌ ಮಿಲಾದ್ ಹಬ್ಬಗಳ ಆಚರಣೆಯನ್ನು ಭಕ್ತಿಪೂರ್ವಕ ಹಾಗೂ ಸೌಹಾರ್ದಯುತವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಆಚರಿಸೋಣ. ಹಬ್ಬಗಳ ಆಚರಣೆ ನಮಗೂ ಸಹ ಖುಷಿ ತರುವ ವಿಷಯವೇ ಆಗಿದ್ದು, ವಿಜೃಂಭಣೆಯ ಮೆರವಣಿಗೆಗಳನ್ನು ನಿರ್ಬಂಧಿಸುವುದರಿಂದ ನಮಗೂ ಕೂಡ ಖುಷಿ ದೊರೆಯುವುದಿಲ್ಲ. ಆದರೆ ಅನಿವಾರ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಿದೆ. ಕಳೆದೆರಡು ವರ್ಷಗಳಿಂದ ಎಲ್ಲರೂ ಸಹಕರಿಸಿದ್ದಾರೆ. ಈ ಬಾರಿಯೂ ಎಲ್ಲರೂ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಮಾರಕ ರೋಗ ನಿಯಂತ್ರಣಗೊಂಡಲ್ಲಿ, ಎಲ್ಲರೂ ವಿಜೃಂಭಣೆಯಿಂದ ಮೆರವಣಿಗೆ ಸಹಿತ ಆಚರಿಸಬಹುದು," ಎಂದು ಹೇಳಿದರು.

    ಈದ್‌ ಮಿಲಾದ್ ಹಬ್ಬ ಆಚರಣೆಗೆ ಮಾರ್ಗಸೂಚಿಗಳು

   ಈದ್‌ ಮಿಲಾದ್ ಹಬ್ಬ ಆಚರಣೆಗೆ ಮಾರ್ಗಸೂಚಿಗಳು

   ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಈ ವರ್ಷದ ಈದ್‌ ಮಿಲಾದ್ ಹಬ್ಬವನ್ನು ಸರಳ ಮತ್ತು ಭಕ್ತಿಪೂರ್ವಕವಾಗಿ ಆಚರಿಸಬೇಕು. ಅ.20ರಂದು ಆಚರಿಸಲಾಗುವ ಈದ್‌ ಮಿಲಾದ್ ಹಬ್ಬ ಆಚರಣೆಯಲ್ಲಿ ಸಾಮೂಹಿಕ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಿ 100ಕ್ಕಿಂತ ಹೆಚ್ಚು ಜನ ಒಮ್ಮೆಲೆ ಸೇರುವಂತಿಲ್ಲ. ಸಾಮೂಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು.

   ಮಸೀದಿಗಳಲ್ಲಿ ಮತ್ತು ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್ ಶಿಷ್ಟಾಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ಹಬ್ಬ ಆಚರಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್ ಸೌಂಡ್ (ಡಿಜೆ) ಬಳಕೆ ನಿಷೇಧಿಸಲಾಗಿದೆ.

    60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಭಾಗವಹಿಸುವಂತಿಲ್ಲ

   60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಭಾಗವಹಿಸುವಂತಿಲ್ಲ

   ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ತಪ್ಪಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು.

   ಕೋವಿಡ್ ಸಮುಚಿತ ವರ್ತನೆಗಳೊಂದಿಗೆ ಸಾಮೂಹಿಕ ಪ್ರಾರ್ಥನೆ ನಡೆಸಬೇಕು, ಒಂದು ವೇಳೆ ಹೆಚ್ಚು ಜನರು ಆಗಮಿಸಿದ್ದಲ್ಲಿ, ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕು.

   ನಮಾಜ್ ನಿರ್ವಹಿಸುವವರ ಮಧ್ಯೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಂಡು, ಆಗಾಗ ಸೋಪು, ಸ್ಯಾನಿಟೈಸರ್ ಬಳಸಬೇಕು, ಮಸೀದಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

   English summary
   The Covid-19 guidelines should be followed in Davanagere during the Dasara and Eid Milad festival, DC Mahantesh R Beelagi said. Procession not allowed for dasara and eid milad festival in davanagere.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X