ದಾವಣಗೆರೆಯಲ್ಲಿ ಜನರ ಪ್ರತಿಭಟನೆ: ಲಘು ಲಾಠಿ ಪ್ರಹಾರ
ದಾವಣಗೆರೆ. ಮೇ 1: ಆಶಾ ಕಾರ್ಯಕರ್ತೆಯರಿಗಾಗಿ ಉಪಾಹಾರ ತಯಾರಿಸುತ್ತಿದ್ದ ಕೇಂದ್ರದ ಬಳಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ದಾವಣಗೆರೆಯ ಯಲ್ಲಮ್ಮ ನಗರದಲ್ಲಿ ನಡೆದಿದೆ.
ಇಲ್ಲಿನ ಸಪ್ತಗಿರಿ ಸ್ಕೂಲ್ ಬಳಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಗುಂಪುಗೂಡಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪು ಚದುರಿಸಲು ಮುಂದಾದ ವೇಳೆ ಸಾರ್ವಜನಿಕರು ಇನ್ನಷ್ಟು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ಸಾರ್ವಜನಿಕರ ಮನವೊಲಿಕೆಗೆ ಮುಂದಾಗಿ, ಆಶಾ ಕಾರ್ಯಕರ್ತೆಯರಿಗೆ ಊಟ ತಯಾರಿಸಲಾಗುತ್ತಿದೆ, ಯಾರನ್ನೂ ಕ್ವಾರಂಟೈನ್ ಮಾಡುತ್ತಿಲ್ಲ ಎಂದು ತಿಳಿ ಹೇಳಿದರು.
ಆದರೂ ಜನರು ಮಾತು ಕೇಳದ ಪರಿಣಾಮ ಅನಿವಾರ್ಯವಾಗಿ, ಪೊಲೀಸರು ಲಾಠಿ ಪ್ರಹಾರ ಮಾಡಿದ ನಂತರವೇ ಸಾರ್ವಜನಿಕರು ಸ್ಥಳದಿಂದ ತೆರಳಿದರು. ಈ ವೇಳೆ ಅನೇಕರು ಗಾಯಗೊಂಡಿದ್ದಾರೆ. ಘಟನೆಯಿಂದಾಗಿ ಸಾರ್ವಜನಿಕರು ತೀವ್ರ ಆಕ್ರೋಶಗೊಂಡಿದ್ದಾರೆ.