ಯಾರದ್ದೋ ಮನೆಗೆ ನುಗ್ಗಿ ನಿಕ್ಕರ್ ಸುಡೋದು ಹೋರಾಟನಾ? ಆರಗ ಜ್ಞಾನೇಂದ್ರ ಕಿಡಿ
ದಾವಣಗೆರೆ, ಜೂ. 8: ಸಚಿವ ಬಿ. ಸಿ. ನಾಗೇಶ್ ಮನೆಗೆ ನುಗ್ಗಲು ಬಂದಿದ್ದವರ ಪೈಕಿ ಬಹಳಷ್ಟು ಮಂದಿ ವಿದ್ಯಾರ್ಥಿಗಳಲ್ಲ. ಬೆಂಗಳೂರು, ಹಾಸನದಿಂದ ಹಾಗೂ ದಾವಣಗೆರೆಯಿಂದಲೂ ಮೂವರು ಬಂದಿದ್ದರು. ಅವರ ಹಿನ್ನೆಲೆ ಏನು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮನೆಯೊಳಗೆ ನುಗ್ಗಿ ಅವರ ನಿಕ್ಕರ್ ನ ತೆಗೆದುಕೊಂಡು ಬಂದು ಹಗಲು ಹೊತ್ತಿನಲ್ಲಿ ಬೆಂಕಿ ಹಚ್ಚಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಹೇಗಿರಬೇಕು ಹೇಳಿ. ನಾವು ಹೋರಾಟ ಮಾಡಿ ಬಂದಿದ್ದೇವೆ. ಯಾರದ್ದೋ ಮನೆಗೆ ನುಗ್ಗೋದು, ಏನೇನೋ ಮಾಡೋದು ಹೋರಾಟ ಅಲ್ಲ. ಕಾನೂನು ಪ್ರಕಾರ ಪೊಲೀಸರು ಬಂಧಿಸಿದ್ದಾರೆ, ಶಿಕ್ಷೆಯೂ ಆಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಗೇಶ್ ರ ಮನೆ ಮುಂದೆ ಹೋರಾಟ ಮಾಡಲು ಅನುಮತಿ ತೆಗೆದುಕೊಂಡಿರಲಿಲ್ಲ. ತಹಸೀಲ್ದಾರ್, ಡಿಸಿ, ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಏಕಾಏಕಿ ಮನೆಗೆ ನುಗ್ಗಿದಾಗ ಪೊಲೀಸರು ತಡೆಯುವ ಕೆಲಸ ಮಾಡಿದ್ದಾರೆ. ತಿಪಟೂರಿನ ಒಬ್ಬರು ಬಿಟ್ಟರೆ ಬೇರೆ ಕಡೆಯಿಂದ ಕಾರಿನಲ್ಲಿ ಬಂದು ಈ ರೀತಿ ವರ್ತಿಸಿದ್ದಾರೆ ಎಂದು ಮಾಹಿತಿ ನೀಡಿದರು. ಮೂರ್ನಾಲ್ಕು ಕಡೆಗಳಲ್ಲಿಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಗಮನಕ್ಕೆ ಬಂದಿದೆ. ಕೇಂದ್ರದ ಏಜೆನ್ಸಿ ಸಹ "ಲ್ಯಾಟಿಟ್ಯೂಡ್ ಲ್ಯಾಂಡ್ ಆಕ್ಟಿವಿಟಿ'' ಗಮನಿಸುತ್ತಿದೆ. ನಮ್ಮ ಪೊಲೀಸರು ಸಹ ಅದರ ಬಗ್ಗೆ ನಿಗಾ ಇಟ್ಟಿದ್ದಾರೆ.
ತೀರ್ಥಹಳ್ಳಿಯಲ್ಲಿಯೂ ಈ ಬಗ್ಗೆ ಕರೆ ಬಂದಿರಬಹುದಾ ಎಂಬುದನ್ನು ಕಂಡು ಹಿಡಿಯಲಾಗುತ್ತಿದೆ. ಇಂಥವರೇ ಮಾಡಿದ್ದಾರೆ, ಇಂಥ ಸ್ಥಳಕ್ಕೆ ಫೋನ್ ಹೋಗಿದೆ ಎಂಬುದನ್ನು ನಾನು ಹೇಳಲು ಆಗಲ್ಲ. ಕೇಂದ್ರದವರು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಗೃಹ ಸಚಿವನಾಗಿ ಕೆಲ ವಿಷಯಗಳನ್ನು ಹೇಳಲು ಬರುವುದಿಲ್ಲ ಎಂದರು.

ಮತಾಂಧ ಶಕ್ತಿಗಳು ಬೇರೆ ರೀತಿಯ ವ್ಯವಸ್ಥಿತ ಷಡ್ಯಂತ್ರ
ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ , ಪ್ರತಿಕ್ರಿಯೆ ನೀಡಿದ ಅರಗ ಜ್ಞಾನೇಂದ್ರ ಅವರು, ಎಲ್ಲೆಲ್ಲಿ ಸಮವಸ್ತ್ರ ಕಡ್ಡಾಯ ಇದೆಯೋ ಅಲ್ಲಿ ಅದನ್ನು ಪಾಲಿಸಲೇಬೇಕು. ಒಂದೆರಡು ಕಡೆ ಸಮಸ್ಯೆ ಇದೆ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರಿಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಿದ್ದರೆ ಪೊಲೀಸರ ಮಧ್ಯಪ್ರವೇಶ ಆಗುತ್ತದೆ ಎಂದು ತಿಳಿಸಿದರು.
ಹಿಜಾಬ್ ವಿಚಾರದಲ್ಲಿ ಯಾರ್ಯಾರೋ ಏನೇನೋ ಮಾಡಲು ಹೋದರು. ಮತಾಂಧ ಶಕ್ತಿಗಳು ಬೇರೆ ರೀತಿಯ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದರು. ಪೊಲೀಸರು ಕಟ್ಟುನಿಟ್ಟಾಗಿ ಇದ್ದ ಕಾರಣ ಎಲ್ಲಿಯೂ ಕಾನೂನು ಮತ್ತು ಸುವ್ಯವಸ್ಥೆ ಭಂಗ ಬಂದಿಲ್ಲ. ಈ ರೀತಿಯಲ್ಲಿ ಪೊಲೀಸರು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ, ನಿಭಾಯಿಸುತ್ತಲೂ ಇದ್ದಾರೆ. ಬೆಂಗಳೂರಿನಲ್ಲಿ ಈದ್ಗಾ ಮೈದಾನ ಗಲಾಟೆ, ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಸಂಬಂಧಪಟ್ಟವರು ಉತ್ತರ ಕೊಟ್ಟಿದ್ದಾರೆ. ಬೀದಿಗೆ ಬಂದರೆ ಮಾತ್ರ ನಮ್ಮ ಜವಾಬ್ದಾರಿ ಬರುತ್ತದೆ ಎಂದು ಹೇಳಿದರು.

ಭಾಗವಹಿಸಿದ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರಿ ನೇಮಕಾತಿಗಳು ವಿವಾದದಿಂದ ಹೊರತಾಗದೆ ಇರುವುದು, ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬ ಆತಂಕ ಭರಿತ ಪ್ರಶ್ನೆಯನ್ನು ಸೃಷ್ಟಿಸಿದೆ. ಭ್ರಷ್ಟಾಚಾರ, ಅವ್ಯವಹಾರ, ಇತರ ಅಪಸವ್ಯಗಳೇ ಸದ್ದು ಮಾಡುತ್ತಿದ್ದು, ಕಷ್ಟಪಟ್ಟು ಓದಿ ನಿಷ್ಠೆಯಿಂದ ಸಿದ್ಧತೆ ಮಾಡಿಕೊಂಡ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವುದಂತೂ ಸ್ಪಷ್ಟ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ನೇಮಕಾತಿಯಲ್ಲೇ ಈಗ ಅಕ್ರಮದ ಸದ್ದು ಕೇಳಿ ಬಂದಿದೆ.
ಪಿಎಸ್ ಐ ಅಕ್ರಮ ನೇಮಕಾತಿ ಅವ್ಯವಹಾರ ಪ್ರಕರಣವನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇವೆ. ಭಾಗಿಯಾದ ಆರೋಪ ಎದುರಿಸುತ್ತಿರುವ ಡಿವೈಎಸ್ಪಿ ಅವರುಗಳನ್ನೇ ಬಿಟ್ಟಿಲ್ಲ, ಬಂಧಿಸಿದ್ದೇವೆ. ಸಿಐಡಿ ಒಳ್ಳೆ ಟೀಂ ರಚಿಸಿದ್ದೇವೆ. ಬಹಳ ವರ್ಷಗಳಿಂದ ನೇಮಕಾತಿ ನಡೆದುಕೊಂಡು ಬಂದಿದೆ. ಪರೀಕ್ಷೆ ವೇಳೆ ಅಕ್ರಮ ಮಾಡಬಹುದು ಎಂದು ಕೆಲ ವ್ಯಕ್ತಿಗಳು ಅಂದುಕೊಂಡಿದ್ದಾರೆ. ಅವರಿಗೊಂದು ಪಾಠ ಹೇಳಬೇಕಿತ್ತು. ಅದನ್ನು ಹೇಳಿದ್ದೇವೆ. ಪರೀಕ್ಷೆ ವೇಳೆ ಅಕ್ರಮ ನಡೆಸುವವರು ಎದೆಮುಟ್ಟಿಕೊಳ್ಳಬೇಕು. ಆ ರೀತಿ ಕ್ರಮ ಮಾಡಿಯೇ ಮಾಡುತ್ತೇವೆ. ಭಾಗವಹಿಸಿದ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಯಾರು ಬೆಂಬಲ ನೀಡಿದ್ದರು ಎಂಬ ಬಗ್ಗೆ ತನಿಖೆ ಶುರು
ಬೆಂಗಳೂರಿನಿಂದ ಶಂಕಿತ ಉಗ್ರ ತಾಲಿಬ್ ಹುಸೇನ್ ನನ್ನು ಜಮ್ಮು ಕಾಶ್ಮೀರ ಪೊಲೀಸರು ಎತ್ತಿಹಾಕಿಕೊಂಡು ಹೋಗಿದ್ದಾರೆ. ಅಲ್ಲಿನ ಪೊಲೀಸರ ಜೊತೆ ನಮ್ಮ ರಾಜ್ಯದ ಪೊಲೀಸರು ಸಂಪರ್ಕದಲ್ಲಿದ್ದಾರೆ. ಹೇಗೆ ಬಂದು ಇಷ್ಟು ದಿನ ಇಲ್ಲಿದ್ದ, ಇಲ್ಲಿರಲು ಯಾರು ಆಶ್ರಯ ಕೊಟ್ಟಿದ್ದರು, ಯಾರು ಬೆಂಬಲ ನೀಡಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ದೇಶದ ಏಕತೆ, ಸಮಗ್ರತೆ ದೃಷ್ಟಿಯಿಂದ ಇದಕ್ಕಿಂತ ಹೆಚ್ಚು ಹೇಳಲು ಬರುವುದಿಲ್ಲ. ವಿಶೇಷವಾಗಿ ತನಿಖೆ ಶುರು ಮಾಡಿದ್ದೇವೆ ಎಂದು ತಿಳಿಸಿದರು.
ಬಹಳ ಚಿಕ್ಕ ಚಿಕ್ಕ ಜಿಲ್ಲೆಗಳಲ್ಲಿ ಕಮೀಷನರೇಟ್ ಮಾಡೋದರಲ್ಲಿ ಅರ್ಥ ಇಲ್ಲ. ಕಮೀಷನರ್ ಸೀನಿಯರ್ ಇರುತ್ತಾರೆ. ಅವರಿಗೆ ಕಡಿಮೆ ಪ್ರದೇಶ ಇರುತ್ತದೆ. ಎಸ್ಪಿ ಜ್ಯೂನಿಯರ್ ಇರುತ್ತಾರೆ. ಅವರಿಗೆ ಹೆಚ್ಚಿನ ಪ್ರದೇಶ ಬರುತ್ತದೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ತಲೆ ಕಡಿಯುತ್ತೇವೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವಿಚಾರದ ಬಗ್ಗೆಯೂ ಚರ್ಚೆ ನಡೆಸಿದ್ದೇನೆ
ಆರೋಪಿಗಳಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣ ಕಡಿಮೆ ಆಗಿದೆ. ಈ ವಿಚಾರದ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ಎಫ್ ಎಸ್ ಎಲ್ ವರದಿ ಕೆಲವೊಂದು ಪ್ರಕರಣಗಳಲ್ಲಿ ಬರೋದು ತಡವಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ತಡೆಯಾಜ್ಞೆ ಇದೆ. ಎಫ್ ಐಆರ್ ಮತ್ತು ದೋಷಾರೋಪಪಟ್ಟಿ ಸಲ್ಲಿಸುವುದರಲ್ಲಿ ವಿಳಂಬ ಆಗುತ್ತಿದೆ. ಈ ಕಾರಣದಿಂದ ಶಿಕ್ಷೆ ಬೇಗ ಆಗುತ್ತಿಲ್ಲ. ಹೈಕೋರ್ಟ್ ಸಹ ಈ ಬಗ್ಗೆ ಗಮನಿಸಿದೆ. ಕಾನೂನು ಪ್ರಕಾರ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದ ಅವರು, ಔರಾದ್ಕರ್ ವರದಿ ಜಾರಿಯಾಗಿದೆ. ಸ್ವಲ್ಪ ಪರ್ಸಂಟೇಸ್ ಮಾತ್ರ ನಮ್ಮ ಪೊಲೀಸರಿಗೆ ಲಾಭ ಸಿಗುತ್ತಿದೆ. ಅನ್ಯಾಯ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಒಟ್ಟುದಿನದಿಂದ ಜಾರಿಯಾಗಿದೆ. ಕೆಲವರಿಗೆ ತೊಂದರೆಯಾಗಿದೆ ಎಂಬ ಮಾತು ಕೇಳಿ ಬಂದಿದ್ದು, ಹಣಕಾಸು ಇಲಾಖೆಯೊಂದಿಗೆ ಮಾತನಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಸರಿಪಡಿಸುತ್ತೇವೆ. ಒಂದೇ ಇಲಾಖೆ ಬರುವುದಿಲ್ಲ. ಎಲ್ಲಾ ಇಲಾಖೆಯೂ ಬರುವುದರಿಂದ ಸಾವಿರಾರು ಕೋಟಿ ರೂಪಾಯಿ ಬೇಕಾಗುತ್ತದೆ ಎಂದರು.
ಮರಳು ದಂಧೆ ಕುರಿತಂತೆ ಕೆಲವರು ಭಾಗವಹಿಸಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರಿಗೆ ಈ ವಿಚಾರ ಸಂಬಂಧ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಈ ಬಗ್ಗೆ ಕ್ರಮ ವಹಿಸುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications