New year 2024: ಹೊಸ ವರ್ಷ ಸ್ವಾಗತಿಸಲು ಸಜ್ಜಾದ ದೇವನಗರಿ ಮಂದಿ, ಪೊಲೀಸರು ತೆಗೆದುಕೊಂಡ ಕ್ರಮಗಳು ಹೀಗಿವೆ
ದಾವಣಗೆರೆ, ಡಿಸೆಂಬರ್, 31: ಇನ್ನೇನು 2023 ಮುಗಿಸಿ 2024ನೇ ವರ್ಷವನ್ನು ಸ್ವಾಗತಿಸಲು ದಾವಣಗೆರೆ ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ. ಈ ಹಿನ್ನೆಲೆ ಸಮಸ್ತ ದಾವಣಗೆರೆಯ ಜನತೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಕೆಲವು ಸೂಚನೆಗಳನ್ನು ನೀಡಿದ್ದು, ಇವುಗನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಆದೇಶಿಸಿದೆ. ಹಾಗಾದರೆ ಆ ಸೂಚನೆಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೊಸ ವರ್ಷಾಚರಣೆ ಪ್ರಯುಕ್ತ ಕುಡಿದು ವಾಹನ ಚಾಲನೆ ಮಾಡುವುದು, ವಾಹನಗಳಲ್ಲಿ ಹೆಚ್ಚಿನ ಜನರು ಸವಾರಿ ಮಾಡುವುದನ್ನು ನಿಷೇಧಿಸಿದೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಆಯಕಟ್ಟಿನ ಸ್ಥಳಗಳಲ್ಲಿ, ಮಹಿಳೆಯರ ಪಿ.ಜಿ., ಮತ್ತು ಹಾಸ್ಟಲ್‌ಗಳ ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್‌ಗಳು ನಿಗದಿಪಡಿಸಿದ ಸಮಯಕ್ಕೆ ಬಂದ್ ಮಾಡಲು ಸೂಚಿಸಲಾಗಿದೆ.

ಆಯಕಟ್ಟಿನ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ಮತ್ತು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಹೊಸ ವರ್ಷಾಚರಣೆಯಲ್ಲಿ ಯುವಕರು ಅಶ್ಲೀಲವಾಗಿ, ಅಸಭ್ಯವಾಗಿ ವರ್ತನೆ ಮಾಡಿದ್ದೇ ಆದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಹೊರ ವಲಯಗಳಾದ ಕೊಂಡಜ್ಜಿ ಕೆರೆ, ದೇವರಬೆಳಕೆರೆ ಚೆಕ್ ಡ್ಯಾಂ ಮತ್ತು ಇತರೆ ಹೊರ ಭಾಗಗಳಲ್ಲೂ ಪೊಲೀಸ್ ನಿಯೋಜನೆ ಮಾಡಲಾಗುವುದು.
ಸಾರ್ವಜನಿಕರು ಮುಖ್ಯವಾಗಿ ಯುವಕರು ಬೇರೆಯವರಿಗೆ ತೊಂದೆರೆಯಾಗದ ರೀತಿಯಲ್ಲಿ ಹೊಸ ವರ್ಷಾಚರಣೆ ಮಾಡಲು ಸೂಚಿಸಿದೆ. ವಾಹನಗಳನ್ನು ಅತೀ ವೇಗವಾಗಿ ಚಾಲನೆ ಮಾಡುತ್ತಾ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಜೋರಾಗಿ ಕೂಗುವುದು, ಕಿರಿಚುವುದಕ್ಕೆ ನಿಷೇಧ ಹೇರಲಾಗಿದೆ. ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಾದ ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು, ನ್ಯಾಮತಿ ಪಟ್ಟಣಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿರುತ್ತದೆ. ನಗರದ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆದಿದ್ದು, ಕುಡಿದು ವಾಹನಗಳನ್ನು ಚಾಲನೆ ಮಾಡುವವರ, ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
ವಿಶೇಷವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೋವಿಡ್ 19 ಉಪ ತಳಿ ಎಓ1 ವೈರಸ್ ವ್ಯಾಪಿಸುತ್ತಿರುವುದರಿಂದ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಕೋವಿಡ್ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ, ಜನ ಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು.
ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸುವುದು, ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಣಿ 112ಗೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೋಮುಪ್ರಚೋದಕ ಹಾಗೂ ಧಾರ್ಮಿಕ ನಿಂದನೆ, ಸುಳ್ಳುಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್‌ಗಳನ್ನು ಹಾಕುವುದಾಗಲೀ ಹಾಗೂ ಶೇರ್ ಮಾಡುವುದಾಗಲೀ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ಉಪಯೋಗಿಸಬಾರದು. ನ್ಯಾಯಾಲಯವು ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತು ಡಿಜೆಗಳನ್ನು ನಿಷೇಧಿಸಿದ್ದು, ಇದನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯಾದ್ಯಂತ ಹೊಸ ವರ್ಷಾಚರಣೆ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications