ದಾವಣಗೆರೆ ಹಸಿರು ವಲಯವೆಂದು ಶೀಘ್ರ ಘೋಷಣೆ: ಸಚಿವ
ದಾವಣಗೆರೆ. ಏಪ್ರಿಲ್ 27: ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆದರೆ ದಾವಣಗೆರೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಜಗಳೂರಿನಲ್ಲಿಂದು ನಡೆದ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ದೇಶದ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಮಾತನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಹ ರಾಜ್ಯದ ಪರಿಸ್ಥಿತಿ ವಿವರಿಸಿದ್ದಾರೆ ಎಂದರು.
ಲಾಕ್ ಡೌನ್ ಮುಂದುವರೆಯುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ಒಂದು ವೇಳೆ ಮುಂದುವರೆದರೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಕೃಷಿ, ಎಪಿಎಂಸಿ ವಲಯವನ್ನು ಸಡಿಲ ಮಾಡಲಾಗುವುದು. ದಾವಣಗೆರೆಯಲ್ಲಿ ಯಾವುದೇ ಕೋವಿಡ್ ಪ್ರಕರಣ ಇಲ್ಲದ ಹಿನ್ನಲೆಯಲ್ಲಿ ಗ್ರೀನ್ ಝೋನ್ ಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

ಕೃಷಿ, ತರಕಾರಿ ಸೇರಿ ಹಲವು ಅಗತ್ಯತೆಗಳಿಗೆ ರಿಯಾಯತಿ ನೀಡಲಾಗಿದೆ. ಕಳಪೆ ಬಿತ್ತನೆ ಬೀಜದ ಬಗ್ಗೆ ಪರಿಶೀಲನೆ ನಡೆಸಲಾಗುವುದು, ಉಳಿದಂತೆ ಜಿಲ್ಲೆಯ ಪ್ರಮುಖ ಬೆಳೆ ಮೆಕ್ಕಜೋಳ ಖರೀದಿ ಕೇಂದ್ರದ ಬಗ್ಗೆ ಚಿಂತನೆ ಇದೆ. ಆದರೆ ಲಾಕ್ ಡೌನ್ ನಂತರ ಮೆಕ್ಕೆಜೋಳ ಕೇಂದ್ರ ಆರಂಭಿಸಲಾಗುವುದು ಜೊತೆಗೆ ಅಪ್ಪರ್ ಭದ್ರಾ ಯೋಜನೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು.
ರಾಮನಗರ ಗೊಂದಲಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಮನಗರದ ಕಾರಾಗೃಹದಲ್ಲಿ ಜಾಗ ಖಾಲಿ ಇತ್ತು. ಆದ ಕಾರಣ ಕೈದಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆದರೆ ವಿರೋಧ ಪಕ್ಷದವರು ಸುಮ್ಮನೆ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications