ಯಡಿಯೂರಪ್ಪ ಮುಂದೆ ಹೊಸ ಬೇಡಿಕೆ ಇಟ್ಟ ಮರಾಠ ಸಮುದಾಯ
ದಾವಣಗೆರೆ, ಜನವರಿ 20: ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಆದರೆ, ಅದು ಕಾರ್ಯಗತಗೊಂಡಿಲ್ಲ. ಕೂಡಲೇ ಅದನ್ನು ಜಾರಿಗೊಳಿಸಬೇಕು. '3ಬಿ'ಯಲ್ಲಿರುವ ಸಮುದಾಯವನ್ನು '2ಎ'ಗೆ ಸೇರಿಸಬೇಕು ಎಂದು ಕ್ಷತ್ರೀಯ ಮರಾಠ ಮೀಸಲಾತಿ ಅಭಿಯಾನ ಸಂಘಟನೆ ಆಗ್ರಹಿಸಿದೆ.
ಬುಧವಾರ ದಾವಣಗೆರೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಯಶವಂತ ರಾವ್ ಜಾಧವ್ ಪತ್ರಿಕಾಗೋಷ್ಠಿ ನಡೆಸಿದರು. ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. "ಅಭಿವೃದ್ಧಿ ಪ್ರಾಧಿಕಾರಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿವೆ. ನಾವು ವಲಸಿಗರಲ್ಲ. ನಾವು ಕನ್ನಡಿಗರು. ನೂರಾರು ವರ್ಷಗಳಿಂದ ಇಲ್ಲಿನ ನೆಲ, ಜಲ, ಸಂಸ್ಕೃತಿಗೆ ಹೊಂದಿಕೊಂಡು ಬದುಕುತ್ತಿದ್ದೇವೆ" ಎಂದರು.
"ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಬಾಳಠಾಕ್ರೆ ಅವರು ನಮ್ಮ ರಾಜ್ಯದ ಮರಾಠಿಗರಿಗೆ ನಾವು ಉದ್ಯೋಗ, ಆಹಾರ ಕೊಟ್ಟರೆ ಸಾಕು. ಕರ್ನಾಟಕದಲ್ಲಿ ಇರುವವರು ಇಲ್ಲಿಗೆ ಬರುವುದು ಬೇಡ. ನೀವು ಎಲ್ಲಿದ್ದೀರೋ ಅಲ್ಲಿಯೇ ಇದ್ದುಬಿಡಿ ಎಂದಿದ್ದರು. ಎಂದಿಗೂ ಮಹಾರಾಷ್ಟ್ರಕ್ಕೆ ಹೋಗಿ ನೆಲೆಸಬೇಕೆಂಬ ಯೋಚನೆಯೂ ನಮಗಿಲ್ಲ. ನಾವು ಹುಟ್ಟಿದ್ದು ಮತ್ತು ಸಾಯುವುದು ಕನ್ನಡದ ನೆಲದಲ್ಲಿಯೇ" ಎಂದು ಸ್ಪಷ್ಟಪಡಿಸಿದರು.

"ಮರಾಠಿಗರಿಗೆ ಯಾರೂ ಕನ್ನಡದ ಪಾಠ ಮಾಡುವ ಅಗತ್ಯವೇನಿಲ್ಲ. ನಾವು ಕನ್ನಡಿಗರು. ಕನ್ನಡಪರ ಹೋರಾಟಗಾರನೆಂದು ಹೇಳುವ ವಾಟಾಳ್ ನಾಗರಾಜ್ ಅವರಿಗೆ ಅರಳು ಮರಳು ಆದಂತೆ ಕಾಣುತ್ತದೆ. ಸರ್ವಾಧಿಕಾರಿಗಳಂತೆ ವಾಟಾಳ್ ನಡೆದುಕೊಳ್ಳುತ್ತಿದ್ದು, ಮರಾಠ ಸಮಾಜದ ಅಭಿವೃದ್ಧಿ ನಿಗಮಕ್ಕೆ ಅಡ್ಡಿಪಡಿಸುತ್ತಿದ್ದಾರೆ" ಎಂದು ಆರೋಪಿಸಿದರು.
"ಮರಾಠರ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕರಪ್ಪ ಅವರು ಮರಾಠ ಸಮಾಜವನ್ನು 2ಎ ಗೆ ಸೇರಿಸುವಂತೆ ಶಿಫಾರಸ್ಸು ಮಾಡಿದ್ದರು. ಆದರೆ, ಇದುವರೆಗೂ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
"ಮರಾಠ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಹಿಂದುಳಿದಿದ್ದು, ಈಗಾಗಲೇ ಹಲವು ಸಮಾಜದವರು ಎಸ್ಟಿ ಮೀಸಲಿಗೆ ಮತ್ತು 2ಎ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ ಅದಕ್ಕೆ ಅಧ್ಯಕ್ಷರನ್ನು ನೇಮಿಸಲಾಗಿದೆ. ಆದರಂತೆ ಮರಾಠ ಅಭಿವೃದ್ಧಿ ನಿಗಮಕ್ಕೂ ಆಗಬೇಕು" ಎಂದರು ಒತ್ತಾಯಿಸಿದರು.












Click it and Unblock the Notifications