Madal Virupakshappa case: ಚನ್ನಗಿರಿಯಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆ ಅರ್ಧಕ್ಕೆ ಮೊಟಕುಗೊಂಡಿದ್ದೇಕೆ?- ಇಲ್ಲಿದೆ ವರದಿ
ಚನ್ನಗಿರಿಯಲ್ಲಿಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅರ್ಧಕ್ಕೆ ಮೊಟಕುಗೊಂಡಿದ್ದೇಕೆ ಅನ್ನುವ ವಿವರ ಇಲ್ಲಿದೆ ನೋಡಿ.
ದಾವಣಗೆರೆ, ಮಾರ್ಚ್, 19: ಚನ್ನಗಿರಿಯಲ್ಲಿಏರ್ಪಡಿಸಿದ್ದ ಬಿಜೆಪಿ ಸಂಕಲ್ಪ ಯಾತ್ರೆ ಅರ್ಧಕ್ಕೆ ಮೊಟಕುಗೊಂಡಿದೆ. ಇದಕ್ಕೆ ಕಾರಣ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಹೆಚ್. ಎಸ್. ಶಿವಕುಮಾರ್ ಬಣಗಳ ನಡುವಿನ ಜಟಾಪಟಿ ಆಗಿದೆ.
ಬೆಳಗ್ಗೆ 10 ಗಂಟೆಗೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾಗಬೇಕಿದ್ದ ಯಾತ್ರೆ ಶುರುವಾಗಿದ್ದೇ ಮಧ್ಯಾಹ್ನ 2 ಗಂಟೆಗೆ. ಬಿಜೆಪಿ ಕಚೇರಿಯಿಂದ ಯಾತ್ರೆ ಶುರುವಾಗಿದ್ದು, ಯಾತ್ರೆಯ ಬಸ್‌ಗೆ ಶಿವಕುಮಾರ್ ಹತ್ತಲು ಅವಕಾಶ ನೀಡಲಿಲ್ಲ ಎಂದು ಅವರ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಂಸದ ಜಿ. ಎಂ. ಸಿದ್ದೇಶ್ವರ್ ಸೇರಿದಂತೆ ಬಿಜೆಪಿ ನಾಯಕರು ಅರ್ಧಕ್ಕೆ ಯಾತ್ರೆ ಮೊಟಕುಗೊಳಿಸಿ ಹೊರಟ ಘಟನೆ ಬಸ್ ನಿಲ್ದಾಣದ ಬಳಿ ನಡೆಯಿತು.

ಎರಡು ಬಣಗಳ ನಡುವೆ ಘರ್ಷಣೆ
ಚನ್ನಗಿರಿಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಆಯೋಜಿಸಲಾಗಿತ್ತು. ಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಆಗಮಿಸುತ್ತಿದ್ದರು. ಈ ವೇಳೆ ಐಬಿ ಸರ್ಕಲ್ ಬಳಿ ಇದ್ದ ಶಿವಕುಮಾರ್ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಗ ಶಿವಕುಮಾರ್ ಅವರಿಗೆ ಬಸ್ ಹತ್ತಲು ಹೇಳಿದಾಗ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಫ್ಲೆಕ್ಸ್ ಹರಿದು ಹಾಕಿ ಆಕ್ರೋಶ
ಮಾಡಾಳ್ ವಿರೂಪಾಕ್ಷಪ್ಪನವರ ಫ್ಲೆಕ್ಸ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್ ಬೆಂಬಲಿಗರು, ಕೋಟಿ ಕಳ್ಳ, ಕೋಟಿ ಕಳ್ಳ ಎಂದು ಕೂಗಲು ಶುರು ಮಾಡಿದರು. ಆಗ ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿಗರು ರೊಚ್ಚಿಗೆದ್ದು ಶಿವಕುಮಾರ್ ಫ್ಲೆಕ್ಸ್, ಬ್ಯಾನರ್ ಕಿತ್ತು ಹಾಕಿದರು. ಯಾತ್ರೆ ವೇಳೆ ಇಬ್ಬರು ಆಕಾಂಕ್ಷಿಗಳು, ಬೆಂಬಲಿಗರ ನಡುವೆ ಕಿತ್ತಾಟ, ತಳ್ಳಾಟ, ಕೂಗಾಟ ಜೋರಾಯಿತು.

ಜಿ.ಎಂ. ಸಿದ್ದೇಶ್ವರ್ ಕಾರಿಗೆ ಮುತ್ತಿಗೆ
ಸಂಸದ ಜಿ. ಎಂ. ಸಿದ್ದೇಶ್ವರ್ ಕಾರಿಗೆ ಮುತ್ತಿಗೆ ಹಾಕಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿ ಚನ್ನಗಿರಿ ಕ್ಷೇತ್ರಕ್ಕೆ ಕಳಂಕ ತಂದೊಡ್ಡಿದವರನ್ನು ಯಾಕೆ ಸೇರಿಸಿಕೊಂಡಿದ್ದೀರಾ. ಇದು ಚನ್ನಗಿರಿಗೆ ಮಾತ್ರವಲ್ಲ, ದಾವಣಗೆರೆ ಜಿಲ್ಲೆಯೇ ತಲೆತಗ್ಗಿಸುವ ಕೆಲಸವಾಗಿದೆ. ಇಂತಹವರಿಂದ ಪಕ್ಷಕ್ಕೆ ಮುನ್ನಡೆಯಾಗುವುದಕ್ಕಿಂತ ಅವಮಾನ ಆಗಿದೆ. ಇಂತಹವರನ್ನು ಹತ್ತಿರಕ್ಕೂ ಸೇರಿಸಬಾರದು ಎಂದು ಎಚ್ಚರಿಸಿದರು.
ಈ ಎಲ್ಲಾ ಬೆಳವಣಿಗೆ ಗಮನಿಸಿದ ಬಿಜೆಪಿ ನಾಯಕರು ಸಹವಾಸವೇ ಬೇಡ ಎಂಬಂತೆ ಯಾತ್ರೆ ಅರ್ಧಕ್ಕೆ ನಿಲ್ಲಿಸಿ ಹೊರಟರು. ಬಿಜೆಪಿಯಲ್ಲಿ ಬಂಡಾಯ ದಿನ ಕಳೆದಂತೆ ಜೋರಾಗುತ್ತಿದೆ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಗೆ ಬಂದರೂ ಯಾತ್ರೆಗೆ ಬರಲಿಲ್ಲ. ಆದರೆ ಅವರ ಪುತ್ರ ಮಲ್ಲಿಕಾರ್ಜುನ್ ಬಂದಿದ್ದು ಮಾತ್ರ ಶಿವಕುಮಾರ್ ಬೆಂಬಲಿಗರು ಹಾಗೂ ಅಭಿಮಾನಿಗಳ ಕಣ್ಣುಗಳನ್ನು ಕೆಂಪಾಗುವಂತೆ ಮಾಡಿತು.
ಕ್ಷೇತ್ರದಲ್ಲಿ ಈಗಾಗಲೇ ಬಣ ರಾಜಕೀಯ ಜೋರಾಗಿದೆ. ಶಿವಕುಮಾರ್ ಹಾಗೂ ಮಾಡಾಳ್ ವಿರೂಪಾಕ್ಷಪ್ಪನವರ ಬೆಂಬಲಿಗರ ಒಂದು ಹಂತದ ಜಟಾಪಟಿ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಕುಮಾರ್‌ಗೆ ಟಿಕೆಟ್ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಅವರು ತಾವಿನ್ನೂ ಬಿಜೆಪಿಯಲ್ಲಿದ್ದೇನೆ. ನಾನೇ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.
ಮತ್ತೊದೆಡೆ ಜಿಲ್ಲೆಯ ಮುಖಂಡರು ಹಾಗೂ ರಾಜ್ಯ ನಾಯಕರು ಮಾಡಾಳ್ ವಿರೂಪಾಕ್ಷಪ್ಪನವರ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. ಬಂಡಾಯದ ಬಿಸಿ ಹೆಚ್ಚಾಗಿರುವ ಚನ್ನಗಿರಿಯಲ್ಲಿ ಹೇಗೆ ನಿಯಂತ್ರಿಸಬೇಕು ಎಂಬುದು ಬಿಜೆಪಿ ನಾಯಕರ ತಲೆಬಿಸಿಗೂ ಕಾರಣವಾಗಿದೆ. ಆದ್ದರಿಂದ ಯಾವ ಹೇಳಿಕೆಯನ್ನೂ ನೀಡುತ್ತಿಲ್ಲ. ಒಟ್ಟಿನಲ್ಲಿ ಚನ್ನಗಿರಿ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾದರೂ ಹೊಗೆ ಮಾತ್ರ ಜೋರಾಗಿಯೇ ಹರಡುತ್ತಿದೆ.
ಸಿಎಂ ಭೇಟಿ ರದ್ದಾಗಿದ್ದೇಕೆ?
ಚನ್ನಗಿರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಾರೆ ಎಂದು ಮೊದಲೇ ಹೇಳಲಾಗಿತ್ತು. ಕಾರ್ಯಕ್ರಮವೂ ನಿಗದಿಯಾಗಿತ್ತು. ಆದರೆ ಬಣ ರಾಜಕೀಯ ಹಾಗೂ ಅದೇ ರೀತಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಇನ್ನು ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ. ಆದ್ದರಿಂದ ಕ್ಷೇತ್ರಕ್ಕೆ ಬಂದರೆ ಮುಜುಗರ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ಭೇಟಿ ರದ್ದು ಮಾಡಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಕೂಡ ಆಗಮಿಸಿರಲಿಲ್ಲ.












Click it and Unblock the Notifications