ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವುದು ಯಾಕೆ: ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ರೇಣುಕಾಚಾರ್ಯ ಹೀಗಂದಿದ್ಯಾಕೆ..?
ದಾವಣಗೆರೆ, ಅಕ್ಟೋಬರ್ 25: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ನೇಮಕ ಸಂಬಂಧ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಶೋಭಾ ಕರಂದ್ಲಾಜೆ ಅವರು ಅಧ್ಯಕ್ಷರಾಗುತ್ತಾರೆ ಎಂಬ ಊಹಾಪೋಹ ಕೇಳಿ ಬರುತ್ತಿದೆ. ಹೀಗಾಗಿ ಕೇಂದ್ರ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ. ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವುದು ಯಾಕೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರ ತೀರ್ಮಾನ ಕಾದು ನೋಡುತ್ತೇನೆ. ನಾನು ಯಾರ ಪರ - ವಿರೋಧ ಇಲ್ಲ. ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಆಸೆ ನನ್ನದು ಎಂದರು.

ರಾಜ್ಯದಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆಯಾಗಿದೆ. ಕರ್ನಾಟಕದಲ್ಲಿ ಹೆಮ್ಮರವಾಗಿ ಬಿಜೆಪಿ ಬೆಳೆಯಲು ಯಡಿಯೂರಪ್ಪರು ಕಾರಣ. ಮತಗಳನ್ನಾಗಿ ಪರಿವರ್ತಿಸಲು ಯಡಿಯೂರಪ್ಪರಂಥ ಪ್ರಭಾವಿ ನಾಯಕ, ಜಾತ್ಯಾತೀತ ನಾಯಕರಂಥವರು ಬೇಕು ಎಂದು ಹೇಳಿದರು.
ಮುಖಂಡರು, ಕಾರ್ಯಕರ್ತರು ಇಲ್ಲದೇ ಯಾರೂ ಏನು ಮಾಡಲು ಆಗಲ್ಲ. ಏಳು ಚುನಾವಣೆಗಳನ್ನು ಮಾಡಿದ್ದೇನೆ. ಬಿಜೆಪಿಗೆ ನಿನ್ನೆ ಮೊನ್ನೆ ಬಂದನಲ್ಲ. 90ರ ದಶಕದಲ್ಲಿ ಅಯೋಧ್ಯೆಯ ರಾಮಮಂದಿರ ಕಟ್ಟುವ ಹೋರಾಟದಲ್ಲಿ ಸಹಸ್ರಾರು ಯುವಕರ ತಂಡದ ಜೊತೆ ನಾನು ಪಾಲ್ಗೊಂಡಿದ್ದೆ. ಜೈಲಿಗೆ ಹೋಗಿದ್ದೇನೆ. ನೂರಾರು ಬಾರಿ ಹೋರಾಟ ಮಾಡಿದ್ದೇನೆ ಎಂದರು.
ಯಾರೇ ಗೆದ್ದಿದ್ದರೂ ಕಾರ್ಯಕರ್ತರು, ಮುಖಂಡರ ಶ್ರಮದಿಂದ ಗೆದ್ದಿದ್ದೇವೆ. ಕಾರ್ಯಕರ್ತರು ದುಡಿದಿಲ್ವಾ. ಇರುವವರು ಇರಬಹುದು, ಹೋಗುವವರು ಹೋಗಬಹುದು ಎಂದು ಹೇಳುವ ಮೂಲಕ ಇವರೇ ಪಕ್ಷ ಬಿಡಲಿ ಎನ್ನುತ್ತಿದ್ದಾರೆ. ವಯಸ್ಸಿನಲ್ಲಿ ಹಿರಿಯರು. ಗೌರವ ನೀಡುತ್ತೇನೆ. ರಾಜಕಾರಣಕ್ಕೆ ಅವರಿಗಿಂತ ಮುಂಚೆ ಬಂದಿದ್ದೇನೆ. ಬಿಜೆಪಿಗೆ ನಾನು ಸೀನಿಯರ್ ಎಂದು ಪುನರುಚ್ಚರಿಸಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಮುಖ್ಯ. ನಾವೇನೂ ಸರ್ಕಾರ ಬೀಳಿಸುತ್ತೇವೆ ಎಂದು ಹೇಳಿಲ್ಲ. ಒಳ್ಳೆಯ ಕೆಲಸ ಮಾಡಲಿ. ಇಲ್ಲದಿದ್ದರೆ ಹೋರಾಟ ಮಾಡುತ್ತೇನೆ ಎಂದು ರೇಣುಕಾಚಾರ್ಯ ಹೇಳಿದರು.
ಪಕ್ಷ ಸಂಘಟನೆ ಮಾಡಿದರೂ ಟಿಕೆಟ್ ಕೊಡಲಿಲ್ಲ ಎಂದು ಅನೇಕರು ನನ್ನ ಬಳಿ ಹೇಳಿದ್ದಾರೆ. ಯಡಿಯೂರಪ್ಪರನ್ನು ನಿರ್ಲಕ್ಷ್ಯ ವಹಿಸಿದರು. ಹಾಗಾಗಿ, ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು. ವೀರಶೈವ ಲಿಂಗಾಯತರಷ್ಟೇ ಅಲ್ಲ, ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ.
2 ಎ ಮೀಸಲಾತಿ ನೀಡಲು ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿರಲಿಲ್ಲ. ಇಂಥ ನಾಯಕರಿಗೆ ಪ್ರವಾಸ ಮಾಡಲು ಬಿಡುತ್ತಿಲ್ಲ. ಇದು ತಪ್ಪಲ್ವಾ. ಯಡಿಯೂರಪ್ಪ ಬೇಕು ಎಂದು ಜನರು ಹೇಳುತ್ತಿದ್ದಾರೆ. ಯಾವ ಸಂದರ್ಭದಲ್ಲಿಯೂ ಸುಮ್ಮನಿಲ್ಲ. ನವದೆಹಲಿಗೆ ಹೋಗಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ಬೇಡ ಎಂದು ಹೈಕಮಾಂಡ್‌ಗೆ ಹೇಳಿದ್ದೆವು. ಆದರೂ ಕೆಳಗಿಳಿಸಿದರು. ಇದೇ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.












Click it and Unblock the Notifications