ಕುರುಬರ ಬೃಹತ್ ಹೋರಾಟಕ್ಕೆ ಸಾಕ್ಷಿಯಾಗಲಿದೆ ದಾವಣಗೆರೆ
ದಾವಣಗೆರೆ, ಜನವರಿ 05: ಕುರುಬ ಜನಾಂಗವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಜನವರಿ 6ರಂದು ದಾವಣಗೆರೆಯಲ್ಲಿ ಕುರುಬರ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಜಾಗೃತಿ ಸಮಾವೇಶಗಳು ಈಗಾಗಲೇ ನಡೆಯುತ್ತಿವೆ. ಎಂದು ದಾವಣಗೆರೆ ಕುರುಬರ ಎಸ್‌ಟಿ ಹೋರಾಟ ಸಮಿತಿ ತಿಳಿಸಿದೆ.
ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಲ್ಲಿ ಬುಧವಾರ ಸಮಾವೇಶ ನಡೆಯಲಿದೆ. ನಗರದ ಪಿಬಿ ರಸ್ತೆಯ ಬೀರಲಿಂಗೇಶ್ವರ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದ್ದು, 25 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.

ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಈಗಾಗಲೇ ಸಮಾವೇಶಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಮಠದ ಈಶ್ವರಾನಂದ ಪುರಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಿದ್ಧರಾಮಾನಂದ ಸ್ವಾಮೀಜಿ, ಸಚಿವರಾದ ಕೆ. ಎಸ್. ಈಶ್ವರಪ್ಪ, ಬಿ. ಎ. ಬಸವರಾಜ ಭೈರತಿ, ಮಾಜಿ ಸಚಿವರಾದ ಹೆಚ್. ಎಂ. ರೇವಣ್ಣ, ಬಂಡೆಪ್ಪ ಕಾಶೆಂಪುರ್, ಶಾಸಕರಾದ ಎಂಟಿಬಿ ನಾಗರಾಜ, ಎಸ್. ರಾಮಪ್ಪ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.
1986ರಲ್ಲಿ ಕುರುಬ ಸಮಾಜಕ್ಕೆ ಎಸ್ಟಿ ಸೌಲಭ್ಯ ನೀಡಿ, ಒಂದು ವರ್ಷದ ನಂತರ ರದ್ದುಗೊಳಿಸಲಾಗಿದೆ. ಅಂದಿನಿಂದಲೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂಬ ಹೋರಾಟ ಮುಂದುವರಿದಿದ್ದು, ಈ ಬಾರಿ ಬೃಹತ್ ಹೋರಾಟ, ಪಾದಯಾತ್ರೆಗಳ ಜಾಗೃತಿ ಮೂಡಿಸಲಾಗುತ್ತಿದೆ.
ಜನವರಿ 15ರಂದು ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಬಳಿಕ ಫೆಬ್ರುವರಿ 7 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ.












Click it and Unblock the Notifications