ದಾವಣಗೆರೆಯಲ್ಲಿ ಮುಂದುವರಿದ ಭಾರೀ ಮಳೆ: ಅಪಾಯ ಮಟ್ಟ ಮೀರಿದ ತುಂಗಭದ್ರಾ
ದಾವಣಗೆರೆ, ಜುಲೈ 16: ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ತುಂಗಾಭದ್ರಾ ನದಿಯು ಉಕ್ಕಿ ಹರಿಯುತ್ತಿದ್ದು, ಹೊನ್ನಾಳಿ, ಉಕ್ಕಡಗಾತ್ರಿ, ಹರಿಹರ ಸೇರಿದಂತೆ ಹಲವೆಡೆ ಪ್ರವಾಹ ಭೀತಿ ಶುರುವಾಗಿದೆ.
ತುಂಗಾ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವುದರಿಂದ ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹೊನ್ನಾಳಿ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ತಲೆದೋರಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಇನ್ನು ಹರಿಹರದಲ್ಲಿಯೂ ಪ್ರವಾಹ ಭೀತಿ ಇದ್ದು, ಜನರು ನೆರೆ ಆತಂಕದಲ್ಲಿದ್ದಾರೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹರಿಹರ ಆಡಳಿತ ಸೂಚನೆ ನೀಡಿದ್ದು, ಪ್ರವಾಹ ಎದುರಾದರೆ ಸರ್ವರೀತಿಯಲ್ಲಿಯೂ ಎದುರಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಇನ್ನು ಚನ್ನಗಿರಿ, ಮಾಯಕೊಂಡ, ಜಗಳೂರು ಸೇರಿದಂತೆ ಎಲ್ಲೆಡೆ ಉತ್ತಮ ಮಳೆಯಾಗಿದೆ. ರೈತರಲ್ಲಿ ಮಂದಹಾಸ ಮೂಡಿದ್ದು, ಭತ್ತ ಬೆಳೆ ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಭದ್ರಾ ಜಲಾಶಯಕ್ಕೂ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಮುಂಗಾರು ಬೆಳೆಗೆ ನೀರು ಸಿಗುವ ವಿಶ್ವಾಸದಲ್ಲಿ ರೈತರು ಇದ್ದಾರೆ. ಜಲಾಶಯದಿಂದ ನೀರು ಹರಿಸಿದರೆ ಭತ್ತ ನಾಟಿ ಮಾಡಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.

ತಪ್ಪಿದ ಭಾರೀ ಅನಾಹುತ
ಬೆಣ್ಣೆ ನಗರಿ ದಾವಣಗೆರೆಯಲ್ಲಿ ವರುಣ ಅವಾಂತರ ಸೃಷ್ಟಿಸಿದ್ದು, ಭಾರೀ ಅವಘಡವೊಂದು ತಪ್ಪಿದೆ. ಮಳೆಗೆ ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದಿದ್ದು, ಸ್ವಲ್ಪದರಲ್ಲಿಯೇ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.
ದಾವಣಗೆರೆಯ ತರಳುಬಾಳು ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮರದ ಕೆಳಗೆ ಯಾರೂ ಇಲ್ಲದಿರುವುದರಿಂದ ಅನಾಹುತ ತಪ್ಪಿದಂತಾಗಿದೆ. ಶಾಲೆ ಬಿಟ್ಟ ಬಳಿಕ ಮಕ್ಕಳು ಮನೆಗೆ ಹೋಗುತ್ತಿದ್ದರು. ಈ ವೇಳೆ ಮಳೆ ಸುರಿಯುತಿತ್ತು. ಇದ್ದಕ್ಕಿದ್ದಂತೆ ಮರದ ಕೊಂಬೆ ಮುರಿದು ಬಿದ್ದಿದ್ದು, ವಿದ್ಯುತ್ ಲೈನ್ ಕಂಬದ ಮೇಲೆ ಬಿದ್ದಿದೆ. ಇದರಿಂದ 3 ವಿದ್ಯುತ್ ಕಂಬಗಳು ಜಖಂಗೊಂಡಿವೆ.
ಬೆಳಿಗ್ಗೆಯಿಂದ ಶುರುವಾದ ಮಳೆ ಸಂಜೆಯವರೆಗೂ ಇತ್ತು. ಮಧ್ಯಾಹ್ನ ಸ್ವಲ್ಪ ಹೊತ್ತು ಬಿಡುವು ಕೊಟ್ಟಿತ್ತು. ಬಿದ್ದ ಮರದ ಕೊಂಬೆಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ವಿದ್ಯುತ್ ಇದ್ದಾಗಲೆ ಕಂಬದ ಮೇಲು ಬಿದ್ದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.












Click it and Unblock the Notifications