Siddaramaiah: ಇವರೆಲ್ಲಾ ಲಂಚ ನೀಡಿ ಬಂದಿದ್ದಾರೆ; ಪೊಲೀಸರ ಕಡೆ ಕೈ ತೋರಿಸಿ ಆರೋಪಿಸಿದ ಸಿದ್ದರಾಮಯ್ಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ರಾಜಕೀಯ ಪಕ್ಷಗಳು ಮತಬೇಟೆಗೆ ಇಳಿದಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಮತ್ತೆ ಆರೋಪ ಮುಂದುವರೆಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಭ್ರಷ್ಟ ಸರ್ಕಾರ ಎಂದು ರಾಜ್ಯದ ಜನತೆಗೆ ಅರ್ಥವಾಗಿದೆ ಎಂದು ಹೇಳಿದರು.

ದಾವಣೆಗೆರೆ ಜಿಲ್ಲೆಯ ಜಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ಪರ ಪ್ರಚಾರದ ವೇಳೆ ಎಲ್ಲಿ ಹೋದರೂ ಲಂಚ ಲಂಚ ಕೇಳಿಬರುತ್ತಿದೆ ಎಂದ ಸಿದ್ದರಾಮಯ್ಯ, ಇವರೆಲ್ಲಾ ಲಂಚ ಕೊಟ್ಟು ಬಂದಿದ್ದಾರೆ ಎಂದು ಪೊಲೀಸರ ಕಡೆ ಕೈ ತೋರಿಸಿ ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದರು.
ಗ್ರಾಮೀಣ ಪ್ರದೇಶದಲ್ಲಿ ವರ್ಗಾವಣೆಗೆ 15ರಿಂದ 20 ಲಕ್ಷ ರೂಪಾಯಿ ಲಂಚ ನೀಡಬೇಕು. ಬೆಂಗಳೂರಿನಂತಹ ನಗರಗಳಿಗೆ ವರ್ಗಾವಣೆಯಾಗಬೇಕೆಂದರೆ 30 ರಿಂದ 40 ಲಕ್ಷ ನೀಡಬೇಕು. ಇಂತಹ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ನಿರ್ಮಿಸಿದೆ ಎಂದು ಕಿಡಿಕಾರಿದರು.
"ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಟೀಕಿಸುತ್ತಿದೆ, ಹಣ ಎಲ್ಲಿಂದ ತರುತ್ತಾರೆ ಎಂದು ಕೇಳುತ್ತಿದ್ದಾರೆ. ನಾನು ಬಸವರಾಜ ಬೊಮ್ಮಾಯಿ ಅಲ್ಲಾ, ನರೇಂದ್ರ ಮೋದಿ ಅಲ್ಲ. ನಾವು ನುಡಿದಂತೆ ನಡೆಯುವ ಜನ. ನೀಡಿದ ಎಲ್ಲ ಭರವಸೆಗಳನ್ನು ಪೂರೈಸುತ್ತಿವೆ," ಎಂದು ಸಿದ್ದರಾಮಯ್ಯ ಹೇಳಿದರು.

ಹಕ್ಕುಪತ್ರ ನೀಡಿ ರಾಜಕೀಯ ಲಾಭ ಪಡೆದ ಮೋದಿ
"ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಗೊಂದಲ ಸೃಷ್ಟಿಸಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಬಗ್ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಗುವಂತೆ ಮಾಡಿ ವಂಚಿಸಿದೆ. ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಮ್ಮ ಸರ್ಕಾರ. 2016ರಲ್ಲಿ ಕಾಂಗ್ರೆಸ್ ಸರ್ಕಾರ ಕಂದಾಯ ಗ್ರಾಮಗಳಾಗಿ ಮಾಡಿತು".
"ಈಗ ನರೇಂದ್ರ ಮೋದಿ ಬಂದು ಹಕ್ಕುಪತ್ರ ನೀಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಮೋದಿಯಂತೆ ಸುಳ್ಳು ಹೇಳುವವರು ಯಾರೂ ಇಲ್ಲ," ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ಹರಿಹಾಯ್ದರು.
"ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರುವುದು ಶತಸಿದ್ಧ. ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 20 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತೇವೆ. ಬಡವರು ಅರ್ಜಿ ಸಲ್ಲಿಸಿದ ಕೂಡಲೇ ಮನೆ ಮಂಜೂರು ಮಾಡಿಕೊಡುತ್ತೇವೆ," ಎಂದು ಸಿದ್ದರಾಮಯ್ಯ ತಿಳಿಸಿದರು.
ನರೇಂದ್ರ ಮೋದಿಯದ್ದು ಬರೀ ಭಾಷಣ
"ಅಚ್ಛೇ ದಿನ್ ಆಯೇಗಾ ಅಂತಾ ಹೇಳ್ತಾರೆ, ಒಳ್ಳೆಯ ದಿನಗಳ ಬಂದವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 224 ಕ್ಷೇತ್ರಗಳಲ್ಲಿ ಒಬ್ಬ ಮುಸ್ಲಿಮ್, ಒಬ್ಬ ಕ್ರಿಶ್ಚಿಯನ್‌ಗೂ ಟಿಕೆಟ್ ಕೊಟ್ಟಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇದು ಭಾಷಣಕ್ಕೆ ಸೀಮಿತ. ಅಲ್ಪಸಂಖ್ಯಾತರನ್ನು ಹೊರಗಿಟ್ಟಿದ್ದಾರೆ. ದಯವಿಟ್ಟು ಮೋದಿ ಮಾತು ನಂಬಬೇಡಿ," ಎಂದು ಹೇಳಿದರು.
ಸಂತೋಷ್ ಆತ್ಮಹತ್ಯೆಗಿಂತೆ ಬೇರೆ ಸಾಕ್ಷಿ ಬೇಕಾ?
ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾಖಲೆ ಕೊಡಿ ಎಂದರು. ಬಿಜೆಪಿ ಕಾರ್ಯಕರ್ತನೇ ಆಗಿದ್ದ ಸಂತೋಷ್ ಎಂಬ ಸಣ್ಣ ಗುತ್ತಿಗೆದಾರ ಗ್ರಾಮೀಣ ಅಭಿವೃದ್ಧಿ ಇಲಾಖೆಯಡಿ ಗುತ್ತಿಗೆ ಕೆಲಸ ಮಾಡುತ್ತಿದ್ದ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಈಶ್ವರಪ್ಪನಂಥ ಪೆದ್ದ ಮಂತ್ರಿ ಇದ್ದ. 40 ಪರ್ಸೆಂಟ್ ಕಮೀಷನ್ ಕೇಳಿದರು, ಸಣ್ಣ ಗುತ್ತಿಗೆದಾರ ಹಣ ಕೊಡಲಾಗಲಿಲ್ಲ.
ಆಗ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆತನ ಸಾವಿಗೆ ಈಶ್ವರಪ್ಪನೇ ನೇರ ಹೊಣೆ. ನಾವು ಈಶ್ವರಪ್ಪ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದಾಗ ರಾಜೀನಾಮೆ ಕೊಡಲಿಲ್ಲ. ಹಗಲು-ರಾತ್ರಿ ಧರಣಿ ಮಾಡಿದ ನಂತರ ಈಶ್ವರಪ್ಪ ರಾಜೀನಾಮೆ ಕೊಟ್ಟರು. ಮಿಸ್ಟರ್ ಬೊಮ್ಮಾಯಿ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು.












Click it and Unblock the Notifications