ದಾವಣಗೆರೆಯಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ಕಣಕ್ಕೆ, ಬಿಜೆಪಿ ಅಭ್ಯರ್ಥಿ ಬಗ್ಗೆ ಕುತೂಹಲ
ದಾವಣಗೆರೆ, ಡಿ. 01: ಇಷ್ಟು ದಿನ ಸ್ವಲ್ಪ ರಾಜಕೀಯವಾಗಿ ತಣ್ಣಗಿದ್ದ ಮಾಜಿ ಸಚಿವ, ಮಾಜಿ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕೆಪಿಸಿಸಿಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರದಲ್ಲಿ ಬಿಸಿ ಕಾವೇರುವುದಂತೂ ಸತ್ಯ.
ಇಲ್ಲಿ ಬೇರೆ ಯಾರೂ ಅರ್ಜಿ ಸಲ್ಲಿಸದ ಕಾರಣ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಹುರಿಯಾಳು ಆಗುವುದು ಬಹುತೇಕ ಖಚಿತ. ಆದ್ರೆ, ಬಿಜೆಪಿಯಿಂದ ಕೇಸರಿ ಕಲಿ ಯಾರಾಗ್ತಾರೆ? ಉತ್ತರಾಧಿಕಾರಕ್ಕಾಗಿ ಯಾರೂ ಸೆಣಸಾಡುತ್ತಾರೆ ಎಂಬುದು ಇನ್ನು ನಿಗೂಢವಾಗಿದೆ.
ವಿಧಾನಸಭೆ ಚುನಾವಣೆ: ಹೈಕಮಾಂಡ್ ಟಿಕೆಟ್ ಕೊಟ್ಟರೆ ಕಣಕ್ಕಿಳಿಯುತ್ತೇನೆ ಎಂದ ಬಿಜೆಪಿ ಶಾಸಕ
ಇನ್ನು ಮಲ್ಲಣ್ಣ ಎಂದು ಕರೆಸಿಕೊಳ್ಳುವ ಮಾಜಿ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್‌ನಿಂದ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಕೊನೆಗಳಿಗೆಯಲ್ಲಿ ಅರ್ಜಿ ಹಾಕಿರುವುದು ಕೈ ಪಡೆಯಲ್ಲಿ ರಣೋತ್ಸಾಹ ತಂದಿದೆ. ಮಲ್ಲಣ್ಣ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಜೊತೆಗೆ ಹೊಸ ಚೈತನ್ಯ ತಂದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೈ ಪಾಳೆಯಕ್ಕೂ ಬೇಕಿರುವುದು ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳೇ. ಹಾಗಾಗಿ ಮಲ್ಲಿಕಾರ್ಜುನ್ ಅವರು ಉತ್ತರದಿಂದ ಕಣಕ್ಕಿಳಿಯುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಬಿಜೆಪಿ ಅಭ್ಯರ್ಥಿ ಬಗ್ಗೆ ಹೆಚ್ಚಿದ ಕುತೂಹಲ
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಜೊಡೋ, ಸಂವಿಧಾನ ಉಳಿಸಿ ಆಂದೋಲನಕ್ಕೆ ಚಾಲನೆ ನೀಡಿದ್ದ ವೇಳೆ ಮಾತನಾಡಿದ್ದ ಅವರು, ನಾನು ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳುವ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕುವ ಮುನ್ಸೂಚನೆ ನೀಡಿದ್ದರು. ಈಗ ಅರ್ಜಿ ಸಲ್ಲಿಸಿದ್ದು, ಉತ್ತರ ವಿಧಾನಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಆದರೆ, ಬಿಜೆಪಿಯಿಂದ ಕೇಸರಿ ಕಲಿ ಯಾರು ಎಂಬುದು ಇನ್ನು ಸ್ಪಷ್ಟ ಆಗಿಲ್ಲ.
ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ತೀರ್ಮಾನದ ಪ್ರಕಾರ 75 ವರ್ಷ ಮೇಲ್ಪಟ್ಟವರಿಗೆ ಈ ಬಾರಿ ಟಿಕೆಟ್ ನೀಡುವುದಿಲ್ಲ ಎಂದಿದೆ. ಇನ್ನು ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರೇ ಸ್ಪರ್ಧೆ ಮಾಡೋದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್. ಎ. ರವೀಂದ್ರನಾಥ್ ಅವರ ಜನುಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಸ್. ಎ. ರವೀಂದ್ರನಾಥ್ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿ ಎಂದಿದ್ದರು.

ಹಾಲಿ ಶಾಸಕ, ಮಾಜಿ ಶಾಸಕರ ನಡುವೆ ನಡೆಯಲಿದೆಯ ಪೈಪೋಟಿ?
ಪಕ್ಷದ ಹೈಕಮಾಂಡ್ ತನ್ನ ನಿರ್ಧಾರದಿಂದ ಹಿಂದೆ ಸರಿದು ಎಸ್. ಎ. ರವೀಂದ್ರನಾಥ್ ಅವರಿಗೆ ಟಿಕೆಟ್ ಕೊಟ್ಟರೆ ಬೇರೆ ಕ್ಷೇತ್ರಗಳಲ್ಲಿಯೂ ಟಿಕೆಟ್ ಆಕಾಂಕ್ಷಿತರ ಸಂಖ್ಯೆ ಹೆಚ್ಚಾಗುತ್ತದೆ. ಇದು ಸಹ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಎಸ್. ಎ. ರವೀಂದ್ರನಾಥ್ ಅವರು ಮಲ್ಲಿಕಾರ್ಜುನ್ ಅವರ ವಿರುದ್ಧ ಹೀನಾಯ ಸೋಲು ಕಂಡಿದ್ದರು.
2018ರಲ್ಲಿ ವಿರೋಚಿತ ಗೆಲುವು ಪಡೆದಿದ್ದ ಎಸ್. ಎ. ರವೀಂದ್ರನಾಥ್ ಅವರಿಗೆ ವಯಸ್ಸಾಗಿರುವ ಕಾರಣದಿಂದ ಟಿಕೆಟ್ ನೀಡಲಾಗುತ್ತೋ ಇಲ್ಲವೋ ಎಂಬ ಚರ್ಚೆ ಈಗಲೇ ಶುರುವಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಂಸದ ಜಿ. ಎಂ. ಸಿದ್ದೇಶ್ವರ್ ಅವರು, ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿಯಾಗುತ್ತಾರೋ ನೋಡೋಣ. ಆಮೇಲೆ ನಾವು ಯಾರು ಕಣಕ್ಕಿಳಿಯಬೇಕು ಎಂಬ ಬಗ್ಗೆ ಉತ್ತರ ನೀಡುತ್ತೇವೆ ಎಂದಿದ್ದರು.

ರವೀಂದ್ರನಾಥ್‌ರನ್ನು ಗೆಲ್ಲಿಸಿ ಎಂದಿರುವ ಸಿಎಂ ಬೊಮ್ಮಾಯಿ
ಇನ್ನು ಬಿಜೆಪಿಯಲ್ಲಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ದಂಡೇ ದೊಡ್ಡದಿದೆ. ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ವೀರೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ. ಎಸ್. ಜಗದೀಶ್, ಜೀವನ್ ಮೂರ್ತಿ ಸೇರಿದಂತೆ ಹಲವರಿದ್ದಾರೆ. ಈಗ ಎಸ್. ಎ. ರವೀಂದ್ರನಾಥ್ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂಬ ಬಸವರಾಜ್ ಬೊಮ್ಮಾಯಿಯವರ ಮಾತು ಈಗ ಮತ್ತಷ್ಟು ಕುತೂಹಲ ಮಾಡಿಸಿದೆ.
ಗುಜರಾಜ್, ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಮೇಲೆ ಬಿಜೆಪಿ ಹಾಗೂ ಸಂಘ ಪರಿವಾರ ಕಣ್ಣಿಟ್ಟಿದೆ. ಈ ಚುನಾವಣೆಯಲ್ಲಿ ಬರುವ ಫಲಿತಾಂಶದ ಆಧಾರದ ಮೇಲೆ ಕದನ ಕಲಿ ಯಾರಾಗಬೇಕು ಎಂಬ ಬಗ್ಗೆಯೂ ನಿರ್ಧಾರ ಆಗುತ್ತದೆ ಎಂಬ ಮಾತು ಕೇಳಿ ಬರುತ್ತಿವೆ.

ಗುಜರಾತ್‌ನಲ್ಲಿ ಹೊಸಬರಿಗೆ ಮಣೆ ಹಾಕಿರುವ ಬಿಜೆಪಿ
ಗುಜರಾತ್ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿಲ್ಲ. ಹೊಸಬರಿಗೆ ಮಣೆ ಹಾಕಲಾಗಿದೆ. ಘಟಾನುಘಟಿ ನಾಯಕರಿಗೆ ಕೊಕ್ ಕೊಟ್ಟು ಯುವಪೀಳಿಗೆಗೆ ಹೆಚ್ಚಿನ ಆದ್ಯತೆ ನೀಡಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ತಂತ್ರ ರೂಪಿಸುವ ಕುರಿತಂತೆ ಬಿಜೆಪಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದೇ ಆದಲ್ಲಿ ಹೈಕಮಾಂಡ್ ತಂತ್ರದಂತೆ ಚುನಾವಣೆ ನಡೆಯಲಿದೆ.
ಈ ಎರಡೂ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬರದಿದ್ದರೆ, ಆಗ ಸ್ವಲ್ಪ ನಿರ್ಧಾರದಲ್ಲಿ ಸಡಿಲಿಕೆಯಾಗುವುದರಲ್ಲಿ ಸಂದೇಹ ಏನಿಲ್ಲ. ಆಗ ಗೆಲ್ಲುವ ಕುದುರೆಗಳಿಗೆ ಹೆಚ್ಚಿನ ಮಣೆ, ಮಹತ್ವ ನೀಡುವ ಸಾಧ್ಯತೆಯೂ ಹೆಚ್ಚಿದೆ. ಆಗ ರಾಜ್ಯ ನಾಯಕರು, ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ನಾಯಕರ ಜೊತೆಗೆ ಕೆಲವರಿಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಅಚ್ಚರಿ ಏನಿಲ್ಲ.
ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹಣಾಹಣಿ ಏರ್ಪಡಲಿದೆ. ಆಮ್ ಆದ್ಮಿ, ಕೆಎಸ್‌ಆರ್, ಜೆಡಿಎಸ್ ಯಾರಿಗೆ ಹೊಡೆತ ನೀಡುತ್ತಾರೆ ಎಂಬುದಷ್ಟೇ ಮುಖ್ಯ. ಮಲ್ಲಿಕಾರ್ಜುನ್ ಅರ್ಜಿ ಸಲ್ಲಿಸಿದ ಬಳಿಕ ಕಾಂಗ್ರೆಸ್ ನಾಯಕರು, ಅಭಿಮಾನಿಗಳು ಈ ಬಾರಿ ಮಲ್ಲಣ್ಣರನ್ನು ಗೆಲ್ಲಿಸಲೇಬೇಕೆಂಬ ಪಣ ತೊಟ್ಟರೆ, ಬಿಜೆಪಿ ಕಾರ್ಯಕರ್ತರು ಈ ಬಾರಿ ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿ ಮತ್ತೆ ಕಮಲ ಅರಳುವಂತೆ ಮಾಡುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ.