ದಾವಣಗೆರೆ: ಸೇತುವೆಯಡಿ ವಾಸಿಸುತ್ತಿದ್ದ ವಯೋವೃದ್ಧೆಗೆ ನೆರವಾಗಿ ಮಾನವೀಯಯೆ ಮೆರೆದ ಜಡ್ಜ್.!
ದಾವಣಗೆರೆ, ಏಪ್ರಿಲ್, 06: ಸಮಾಜದಲ್ಲಿ ನಿಜವಾದ ಕುರುಡರು, ಬಡವರು ಎಂದರೆ ಮಾನವೀಯತೆ, ಮನುಷ್ಯತ್ವವೇ ಇಲ್ಲದವರು. ಮೊದಲು ಮಾನವೀಯತೆ, ಆಮೇಲೆ ಎಲ್ಲಾ ಎನ್ನುವ ಮಾತನ್ನು ನಮ್ಮ ಹಿರಿಯರೇ ಹೇಳಿದ್ದಾರೆ. ಸಾಮಾನ್ಯವಾಗಿ ಬಹುತೇಕ ಶ್ರೀಮಂತರು ಕಣ್ಣಿದ್ದು ಕುರುಡರಂತೆ ಅಸಹಾಯಕರಾಗಿರುತ್ತಾರೆ. ಇಂತಹದ್ದರ ನಡುವೆ ಕೆಲವೇ ಮಂದಿ ಶ್ರೀಮಂತರು ಮಾತ್ರ ಮಾನವೀತೆ ಮೆರೆಯುತ್ತಾ ಅವರ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಾ, ಬಡವರಿಗೆ ಆಸರೆಯಾಗಿರುತ್ತಾರೆ. ಈ ಮಾತು ಯಾಕೆ ಅಂತೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಬೆಣ್ಣೆ ನಗರಿ, ಶಿಕ್ಷಣ ನಗರಿ ಎಂದೆಲ್ಲ ಪ್ರಖ್ಯಾತಿ ಹೊಂದಿರುವ ದಾವಣಗೆರೆ ನಗರದಲ್ಲಿ ಶ್ರೀಮಂತರು, ಮಧ್ಯಮ ವರ್ಗದವರು, ಬಡವರು ಮತ್ತು ಕಡುಬಡವರಂತಹ ಲಕ್ಷಾಂತರ ಜನರು ವಾಸ ಮಾಡುತ್ತಿದ್ದಾರೆ. ಪ್ರತಿನಿತ್ಯದ ಬದುಕಿನ ಜಂಜಾಟಗಳ ನಾಗಾಲೋಟದಲ್ಲಿ ಕೆಲವು ಸಣ್ಣ ಸಣ್ಣ ವಿಷಯಗಳು ನಾಗರಿಕ ಸಮಾಜದ ಕಣ್ಣಿಗೆ ಬಿದ್ದರೂ ಹೃದಯಕ್ಕೆ ತಟ್ಟುವುದಿಲ್ಲ.

ಆದರೆ, ದಾವಣಗೆರೆಯ ಶಾಮನೂರು ಕೆಳ ಸೇತುವೆಯನ್ನೇ ಸೂರು ಮಾಡಿಕೊಂಡು ಪುಟ್ಟ ನಾಯಿಮರಿಯೊಂದಿಗೆ ವಾಸವಿದ್ದ ವಯೋವೃದ್ಧೆಯನ್ನು ರಕ್ಷಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾನವೀಯತೆ ಮೆರೆದಿದ್ದಾರೆ.
ನ್ಯಾಯಾಧೀಶರು ಪ್ರತಿದಿನ ವಸತಿಗೆ ಹಿಂದಿನ ನ್ಯಾಯಾಲಯಕ್ಕೆ ಸಂಚರಿಸುವ ದಾರಿಯಲ್ಲಿ ಮಳೆ, ಗಾಳಿ ಮತ್ತು ಧೂಳಿನ ನಡುವೆ ವಾಸವಿದ್ದ ಈ ವಯೋವೃದ್ಧೆಯನ್ನು ಗಮನಿಸಿದ್ದಾರೆ. ತಮ್ಮ ಇಲಾಖೆಯ ಇನ್ನೋರ್ವ ನ್ಯಾಯಾಧೀಶರಾದ ಮಹಾವೀರ ಕರೆಣ್ಣನವರ ಇವರೊಂದಿಗೆ ಸೇರಿ ಮಹಿಳೆಯ ಘನತೆಯ ಬದುಕಿಗೆ ಆಸರೆ ಆಗಿದ್ದಾರೆ.
ಮೊದಮೊದಲು ತೀವ್ರ ಪ್ರತಿರೋಧ, ಆಕ್ರೋಶ, ಕೌಟುಂಬಿಕವಾಗಿ ತನ್ನ ಮೇಲಾದ ಆಕ್ರಮಣಗಳನ್ನು ಅಸ್ಪಷ್ಟವಾಗಿ ಹೇಳುತ್ತಿದ್ದ ಆ ವಯೋವೃದ್ಧೆ, ಉಂಡ ಸಂಕಟಗಳ ಕಾರಣಕ್ಕೋ ಏನೋ ತನ್ನೆದುರಿಗೆ ನಿಂತು ತನ್ನನ್ನು ವಿಚಾರಿಸುತ್ತಿದ್ದ ನ್ಯಾಯಾಧೀಶರ ಮೇಲೆಯೇ ಹರಿಹಾಯ್ದಿದ್ದರು.
ಆದರೂ ಸಹ, ಸಹನೆ ಕಳೆದುಕೊಳ್ಳದೆ ಸಮಾಧಾನದುಂದ ಆ ಅರ್ಜಿಯ ಮಾನಸಿಕ ಸ್ಥಿತಿಗತಿ ಶೀಲತೆಯನ್ನು ಅರಿತು, ನ್ಯಾಯಾಧೀಶರಾದ ಮಹಾವೀರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಕೊನೆಗೂ ಅವಳ ಮನ ಒಪ್ಪಿಸಿ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು.
ದೇಶದ ಯಾವ ಮನುಷ್ಯನೂ ಸಹ ಹಸಿವಿನಿಂದ ಸಾಯಬಾರದು. ಮನುಷ್ಯರಿಗೆ ನೋಡುವ ಕಣ್ಣಿದ್ದರಷ್ಟೆ ಸಾಲದು, ಅಂತರಂಗವೂ ಸಹ ಮಿಡಿಯುತ್ತಿರಬೇಕು ಎಂಬುದಕ್ಕೆ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆಯವರೆ ಸಾಕ್ಷಿ ಎಂದು ನಾಗರೀಕರ ಪ್ರಶಂಸೆಗೆ ಪಾತ್ರರಾದರು.












Click it and Unblock the Notifications