ಕಾಲೇಜು ಕಸ ಗುಡಿಸಿ, ಬೆಲ್ ಹೊಡೆದು ಕೆಲಸ ಆರಂಭಿಸಿದ ಶಾಸಕ!
ದಾವಣಗೆರೆ, ಜೂನ್ 01; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಪೂರ್ಣ ಬಹುಮತ ಪಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ನ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಶಾಸಕ ಬಿ. ದೇವೇಂದ್ರಪ್ಪ ತಮ್ಮ ಕರ್ಮಭೂಮಿಯಾದ ನಳಂದಾ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕರಾಗುವ ಮುನ್ನ ಮಾಡುತ್ತಿದ್ದ ಜವಾನ ವೃತ್ತಿಯನ್ನು ಮಾಡುವ ಮೂಲಕ ಜಗಳೂರು ಕ್ಷೇತ್ರದ ಶಾಸಕರ ಕೆಲಸವನ್ನು ಪ್ರಾರಂಭ ಮಾಡಿದರು. ಈ ಮೂಲಕ ಹಿಂದಿನ ದಿನಗಳನ್ನು ಮರೆತಿಲ್ಲ ಎಂದರು ತೋರಿಸಿಕೊಟ್ಟರು.

ಕಾಲೇಜಿಗೆ ಭೇಟಿ ನೀಡಿದ ಅವರು ಕಚೇರಿ ಕಸ ಗುಡಿಸಿ, ಬೆಲ್ ಹೊಡೆದು, ರಿಜಿಸ್ಟರ್‌ನಲ್ಲಿ ಸಹ ಮಾಡಿದರು. ಈ ಸಂದರ್ಭದಲ್ಲಿ ಜಗಳೂರು ತಹಶೀಲ್ದಾರ್ ಸಂತೋಷ್, ನಳಂದಾ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಟಿ. ಮಧುಕುಮಾರ್ ಹಾಗೂ ಜಗಳೂರು ಪಟ್ಟಣದ ಕಾಂಗ್ರೆಸ್ ಮುಖಂಡರು, ನಳಂದಾ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.
ಬಿ. ದೇವೇಂದ್ರಪ್ಪ ಗೆಲುವು; 2023ರ ಚುನಾವಣೆಯಲ್ಲಿ ಬಿ. ದೇವೇಂದ್ರಪ್ಪ ಜಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಅವರು 50765 ಮತಗಳನ್ನು ಪಡೆದು, 49891 ಮತಗಳನ್ನು ಪಡೆದ ಬಿಜೆಪಿಯ ಎಸ್. ವಿ. ರಾಮಚಂದ್ರ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇತ್ತು, ಅಂತಿಮವಾಗಿ ಗೆಲುವು ಬಿ. ದೇವೇಂದ್ರಪ್ಪಗೆ ಸಿಕ್ಕಿದೆ.

ಜೀವನಸಾಗಿಸಲು ಕಾಲೇಜಿನಲ್ಲಿ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಜವಾನ ವೃತ್ತಿಯನ್ನು ಮಾಡುತ್ತಿದ್ದರು. ಜೀವನದ ಏಳು, ಬೀಳಿನಲ್ಲಿ ಕಷ್ಟ ಸುಖ ಕಂಡ ಅವರು ಇಂದು ಶಾಸಕರಾಗಿ ಜನರ ಕಷ್ಟ ಆಲಿಸಲು ಮುಂದಾಗಿದ್ದಾರೆ. ಬಿ. ದೇವೇಂದ್ರಪ್ಪ ತಾಲೂಕು ಕೇಂದ್ರದಿಂದ ಕೆಲವೇ ಕಿ. ಮೀ. ದೂರದಲ್ಲಿರುವ ಚಿಕ್ಕಮ್ಮನಹಟ್ಟಿ ಗ್ರಾಮದವರು.
ಬಿ. ದೇವೇಂದ್ರಪ್ಪಗೆ ಕಷ್ಟ ಕಾಲದಲ್ಲಿ ಜವಾನರ ಕೆಲಸ ನೀಡಿ ಜೀವನಕ್ಕೆ ಆಧಾರವಾಗಿದ್ದು, ನಳಂದಾ ಕಾಲೇಜಿನ ಸಂಸ್ಥಾಪಕರಾದ ದಿ. ಟಿ. ತಿಪ್ಪೇಸ್ವಾಮಿ. ಕಲೆ, ಸಾಹಿತ್ಯದ ಬಗ್ಗೆ ಅಪಾರ ಅಭಿರುಚಿ ಇರುವ ಶಾಸಕರು ರಾಮಾಯಣ, ಮಹಾಭಾರತ, ಸಾಧು ಸಂತರು, ದಾರ್ಶನಿಕರ ಪುಸ್ತಕಗಳನ್ನು ಓದಿಕೊಂಡಿದ್ದಾರೆ.
ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಬಿ. ದೇವೇಂದ್ರಪ್ಪ ಸ್ವ-ಇಚ್ಛೆಯಿಂದ ಜವಾನ ವೃತ್ತಿಗೆ ರಾಜೀನಾಮೆ ನೀಡಿ, ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ತಾಲೂಕಿನ ಜನರ ಸೇವೆ ಮಾಡಬೇಕು ಎಂದು ರಾಜಕೀಯಕ್ಕೆ ಬಂದರು.
2018ರ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. 13 ಸಾವಿರ ಮತಗಳನ್ನು ಪಡೆದು ಸೋಲು ಕಂಡರು. 2023ರಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದರು. ಪಕ್ಷ ಟಿಕೆಟ್ ನೀಡಿತು.
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ. ಪಿ. ಪಾಲಯ್ಯ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ 29 ಗ್ರಾಮ ಪಂಚಾಯಿತಿಯಲ್ಲಿ ಸುತ್ತಿ ಚುನಾವಣಾ ಪ್ರಚಾರ ಮಾಡಿದರು.
ಒಂದು ಬಾರಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಜನರಿಗೆ ಮನವಿ ಮಾಡಿದರು. ಜನರು ಹಾಲಿ ಶಾಸಕರಾಗಿದ್ದ ಬಿಜೆಪಿಯ ಎಸ್. ವಿ. ರಾಮಚಂದ್ರ ಸೋಲಿಸಿ ಬಿ. ದೇವೇಂದ್ರಪ್ಪ ಬೆಂಬಲಿಸಿದರು. ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
ಜಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಎಚ್. ಪಿ. ರಾಜೇಶ್ ಸಹ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಕೇವಲ ಒಂದು ವರ್ಷದ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದ ಬಿ. ದೇವೇಂದ್ರಪ್ಪಗೆ ಟಿಕೆಟ್ ನೀಡಿತು. ಚುನಾವಣೆಯಲ್ಲಿ ಅವರು ಜಯಗಳಿಸಿದ್ದಾರೆ.












Click it and Unblock the Notifications