ಯತ್ನಾಳ್ ಬಗ್ಗೆ ನಾನ್ ಮಾತನಾಡಲ್ಲ: ಮಾಜಿ ಸಿಎಂ ಬಿಎಸ್‌ವೈ ಹೀಗೆ ಹೇಳಿದ್ದೇಕೆ?
ದಾವಣಗೆರೆ, ಡಿಸೆಂಬರ್, 24: ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಪಕ್ಷದ ಹೈಕಮಾಂಟ್‌ಗೆ ದೂರು ಕೊಡಲು ಹೋಗುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಾವಣಗೆರೆಯಲ್ಲಿ ಹೇಳಿದರು.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಆರೋಪ, ಟೀಕೆ ಕುರಿತಂತೆ ಪ್ರತಿಕ್ರಿಯೆ ನೀಡುವುದಿಲ್ಲ. ಮುಂಬರುವ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದಷ್ಟೇ ಹೇಳಿದರು. ಇನ್ನು ಜಾತಿಗಣತಿ ವಿಚಾರ ಕುರಿತಂತೆ ವಿರೋಧ ವ್ಯಕ್ತವಾಗಿದೆ. ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರುತ್ತಿದೆ. ನಮ್ಮದೂ ಸಹ ಇದೇ ಅಭಿಪ್ರಾಯವಾಗಿದೆ. ಜನರ ವಿರೋಧದ ನಡುವೆಯೇ ಸರ್ಕಾರ ಯಾವುದೇ ಕಾರಣಕ್ಕೂ ವರದಿ ಅಂಗೀಕರಿಸಬಾರದು ಎಂದು ಅಭಿಪ್ರಾಯಪಟ್ಟರು.

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರು ಬಿಜೆಪಿ ಕರ್ನಾಟಕದ ನೂತನ ರಾಜ್ಯ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ನೂತನವಾಗಿ ನೇಮಕಗೊಂಡ ಎಲ್ಲಾ ರಾಜ್ಯ ಪದಾಧಿಕಾರಿಗಳನ್ನು ಅಳೆದು ತೂಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಆಯ್ಕೆ ಪಾರದರ್ಶಕವಾಗಿ ನಡೆದಿದೆ, ಅಸಮಾಧಾನ ಕುರಿತಂತೆ ಮಾಹಿತಿ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.
ನಾವು ಅಲ್ಪಸಂಖ್ಯಾತ ವಿರೋಧಿಗಳಲ್ಲ. ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಬಿಡಬೇಕು. ಇದರಿಂದ ಯಾವುದೇ ಪ್ರಯೋಜನವಾಗದು. ಹಿಜಾಬ್ ವಾಪಸ್ ಪಡೆಯುವ ಕುರಿತಂತೆ ನಾವು ತೀವ್ರ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಉಲ್ಟಾ ಹೊಡೆದಿದ್ದಾರೆ. ಮೊದಲು ಹಿಜಾಬ್ ವಾಪಸ್ ಪಡೆಯುತ್ತೇವೆ ಎಂದರು. ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇನ್ನು ನಿರ್ಧಾರವಾಗಿಲ್ಲ ಎನ್ನುತ್ತಾರೆ. ಸಮಾಜದಲ್ಲಿ ಧರ್ಮ- ಧರ್ಮಗಳ ನಡುವೆ ವಿಷ ಬೀಜ ಬಿತ್ತುವ, ಕಂದಕ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಯಡಿಯೂರಪ್ಪ ಹೇಳಿದರು.
ಬಿ.ವೈ.ವಿಜಯೇಂದ್ರ ಆಕ್ರೋಶ
ಬಿಜೆಪಿಗರು ಬ್ರಿಟೀಷರ ಬೂಟು ನೆಕ್ಕುತ್ತಿದ್ದರು ಎಂಬ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ರಾಜ್ಯ ಬಿಜೆಪಿ ಘಟಕ ಖಾರವಾಗಿ ಪ್ರತಿಕ್ರಿಯಿಸಿದೆ. ಮಾತ್ರವಲ್ಲ, ಇಂತಹ ದುರಹಂಕಾರಿ ಹೇಳಿಕೆಗೆ ರಾಜ್ಯದ ಜನರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ.ವಿಜಯೇಂದ್ರ ಯಡಿಯೂರಪ್ಪ ಗುಡುಗಿದರು.
ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮವದರ ಜೊತೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ದುರಹಂಕಾರಿ ಹೇಳಿಕೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಖಂಡಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರತಿಯೊಬ್ಬ ಸ್ವಾಭಿಮಾನಿ ಕಾರ್ಯಕರ್ತನೂ ಸಹ ತಕ್ಕ ಉತ್ತರ ಕೊಡುತ್ತಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟ ಮಾಡುವ ಮೂಲಕ ಉತ್ತರ ನೀಡುತ್ತೇವೆ. ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಕಾಂಗ್ರೆಸ್ ಸರ್ಕಾರ, ಮುಖಂಡರು ದುರಹಂಕಾರದ ನಡವಳಿಕೆಯಿಂದ ನಡೆದುಕೊಳ್ಳುತ್ತಿರುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಯಾವ ರೀತಿಯ ಶಾಸ್ತಿ ಆಗುತ್ತದೆ ಎಂಬುದನ್ನು ಕಾದು ನೋಡಿ ಎಂದು ತಿಳಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಸಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಂಜನೇಯ ಸ್ವಾಮಿಯ ರೀತಿ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿಸಲು ಜನರು ಪ್ರತಿಜ್ಞೆ ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ದುರಹಂಕಾರದ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಟಿಪ್ಪು ಪಕ್ಷ ಆಗಿಲ್ಲ ಎಂದರೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇಂತಹ ಹೇಳಿಕೆ ಕೊಡುತ್ತಾ ಇದ್ದರಾ? 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡುತ್ತೇವೆ ಎನ್ನುವುದು ನಿಮ್ಮ ಆದ್ಯತೆಯಾ? ನಿಮ್ಮ ನಡವಳಿಕೆಯನ್ನು ರಾಜ್ಯದ ಜನರು ಗಮನಿಸುತ್ತಾ ಇದ್ದಾರೆ. ಹೋದಲ್ಲಿ ಬಂದಲ್ಲಿ ಜನರು ಛೀಮಾರಿ ಹಾಕ್ತಿದ್ದಾರೆ ಎಂದು ಹೇಳಿದರು.












Click it and Unblock the Notifications