ಬೆಣ್ಣೆನಗರಿ ದಾವಣಗೆರೆಯಲ್ಲಿ ಶಿವರಾತ್ರಿಯ ಸಂಭ್ರಮ ಹೇಗಿದೆ?, ಇಲ್ಲಿದೆ ವಿವರ
ದೇಶದ್ಯಾಂತ ಮಹಾಶಿವರಾತ್ರಿ ಸಂಭ್ರಮ ಜೋರಾಗಿದ್ದು, ಹಾಗೆಯೇ ಬೆಣ್ಣೆನಗರಿಯಲ್ಲಿ ಯಾವ ರೀತಿ ಸಂಭ್ರಮ ಇದೆ ಅನ್ನುವುದನ್ನು ಇಲ್ಲಿ ತಿಳಿಯಿರಿ.
ದಾವಣಗೆರೆ, ಫೆಬ್ರವರಿ, 18: ಈಗಾಗಲೇ ರಾಜ್ಯಾದಂತ ಶಿವರಾತ್ರಿ ಹಬ್ಬದ ಸಡಗರ, ಸಂಭ್ರಮ ಜೋರಾಗಿದೆ. ಶಿವನ ದೇಗುಲಗಳಲ್ಲಿ ಪೂಜೆ, ಪುನಸ್ಕಾರಗಳು ಕೂಡ ಅದ್ಧೂರಿಯಾಗಿ ನಡೆಯುತ್ತಿವೆ. ಹಾಗೆಯೇ ಪೂಜೆ ಸಲ್ಲಿಸುತ್ತಾ ಭಕ್ತರು ಶಿವ ಸ್ಮರಣೆಯಲ್ಲಿ ತೊಡಗಿದ್ದಾರೆ. ಹಾಗಾದರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಮಹಾಶಿವರಾತ್ರಿ ಸಂಭ್ರಮ ಹೇಗಿದೆ ಅನ್ನುವುದನ್ನು ನೋಡೋಣ ಬನ್ನಿ.
ಬಿಲ್ವಪ್ರಿಯನಾದ ಪರಶಿವನಿಗೆ ಭಕ್ತಿಯ ಸಮರ್ಪಣೆಯ ಹಬ್ಬವಾದ ಶಿವರಾತ್ರಿಯು ದಾವಣಗೆರೆಯ ಶಿವಾಲಯಗಳಲ್ಲಿ ಕಳೆಗಟ್ಟಿದೆ. ಭಕ್ತರು ಶಿವನ ಪೂಜೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು.
ಹಾಗೆಯೇ ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಬಹಳ ಶಿಥಿಲಗೊಂಡಿದ್ದು, ಕಟ್ಟಡದ ಅಭಿವೃದ್ಧಿ ಪಡಿಸಲು ಅಂದಾಜು ವೆಚ್ಚದ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ .ಎನ್ ದುರ್ಗಾಶ್ರೀ ಆಶ್ವಾಸನೆ ನೀಡಿದರು.
ಅವರು ಇಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ತಮ್ಮ ಪತಿ ಪದ್ಮನಾಭ ಮತ್ತು ಪುತ್ರನೊಂದಿಗೆ ಭೇಟಿ ನೀಡಿ, ಶ್ರೀ ಮಹಾಶಿವರಾತ್ರಿ ಪರ್ವದ ಅಂಗವಾಗಿ ಜರುಗಿದ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು.

ನ್ಯಾಯಾಲಯದಲ್ಲಿರುವ ಜಾಗದ ತಕರಾರರು
ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜಾಗದ ತಕರಾರು ಇದೆ. ಜಾಗದ ತಕರಾರರು ಇನ್ನು ನ್ಯಾಯಾಲಯದಲ್ಲಿದೆ. ಆದರೆ ದೇವಸ್ಥಾನದ ಬಗ್ಗೆ ಯಾವುದೇ ರೀತಿಯ ತಕರಾರು ಇಲ್ಲ. ಮತ್ತು ಇದು ರಾಜ್ಯದ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಸರ್ಕಾರವೇ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಬೇಕು ಎಂದು ಕುರುಬ ಸಮುದಾಯದ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುರುಬ ಸಮುದಾಯದ ಮುಖಂಡರಾದ ಜೆ. ಕೆ. ಕೊಟ್ರಬಸಪ್ಪ, ಬಿ. ಎಂ. ಸತೀಶ್, ಎಚ್.ಜಿ. ಸಂಗಪ್ಪ, ಎಚ್. ಬಿ. ಗೋಣೇಪ್ಪ, ಎಸ್.ಎಸ್. ಗಿರೀಶ್, ಕನ್ನವರ ರೇವಣ್ಣ, ಕೆ. ಪರಶುರಾಮ, ಸಲ್ಲಳ್ಳಿ ಹನುಮಂತಪ್ಪ, ನವೀನ್, ಬಿ. ಎಚ್. ಪರಶುರಾಮಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ದೇವಾಲಯಗಳಲ್ಲಿ ನೆರೆದ ಭಕ್ತರ ದಂಡು
ನಗರದ ಅನೇಕ ಶಿವ ದೇವಾಲಯಗಳಲ್ಲಿ ಬೆಳಗಿನ ಜಾವ 5ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು ಶಿವನಿಗೆ ಅಭಿಷೇಕ ಮಾಡುತ್ತಲೇ ಇದ್ದಾರೆ. ಪೂಜಾದಿ ಕಾರ್ಯಗಳನ್ನು ನೆರವೇರಿಸಿದ್ದು ಕೂಡ ಕಂಡುಬಂದಿದೆ. ಲಿಂಗೇಶ್ವರ ದೇವಾಲಯ, ಪಾತಾಳ ಲಿಂಗೇಶ್ವರ ದೇವಾಲಯ, ದೇವರಾಜ ಅರಸು ಬಡಾವಣೆಯಲ್ಲಿರುವ ಈಶ್ವರಿಯ ವಿವಿ, ವಿದ್ಯಾನಗರದ ಈಶ್ವರ- ಪಾರ್ವತಿ ದೇವಾಲಯ ಸೇರಿದಂತೆ ನಗರದ ಎಲ್ಲಾ ಶಿವಾಲಯಗಳಲ್ಲಿ ಶ್ರದ್ದಾ ಭಕ್ತಿಯಿಂದ ವಿಶೇಷವಾಗಿ ಅಭಿಷೇಕ ಹಾಗೂ ಪೂಜೆ ನೆರವೇರಿದೆ.

ಶಿವರಾತ್ರಿ ಹಬ್ಬದ ಸಂಭ್ರಮ ಹೇಗಿದೆ?
ದಾವಣಗೆರೆಯ ಜನರು ಮಹಾಶಿವರಾತ್ರಿಯಂದು ಮುಂಜಾನೆಯಿಂದ ಮಧ್ಯಾಹ್ನದವರೆಗೆ ತಮ್ಮ ಪೂಜೆಯನ್ನು ನೆರವೇರಿಸಿದ್ದು ಗಮನ ಸೆಳೆದಿದೆ. ಇನ್ನು ಕೆಲವರು ತಮ್ಮ ಮನೆಗಳಲ್ಲಿಯೇ ಶಿವಾಭಿಷೇಕ ಮಾಡಿದ್ದಾರೆ. ಶಿವರಾತ್ರಿ ಪ್ರಮುಖ ಹಬ್ಬವಾಗಿದ್ದು, ಈ ದಿನ ಕೆಲವರು ಉಪವಾಸ ವ್ರತವನ್ನು ಕೂಡ ಮಾಡುತ್ತಾರೆ. ಹಾಗೂ ಇನ್ನು ಕೆಲವರು ಹಣ್ಣು -ಹಾಲು ಮಾತ್ರ ಸೇವಿಸುತ್ತಾರೆ. ಜೊತೆಗೆ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಮಾಡಿದ್ದಾರೆ. ಶಿವನನ್ನು ಪೂಜಿಸುವುದು ಮತ್ತು ಕಠಿಣ ಉಪವಾಸವನ್ನು ಆಚರಿಸುವುದು ಸೇರಿದಂತೆ, ಒಬ್ಬ ವ್ಯಕ್ತಿಯು ಶಿವರಾತ್ರಿಯ ದಿನದಂದು ಭಗವಾನ್ ಶಂಕರನನ್ನು ಸಂತೋಷಪಡಿಸಿದರೆ ಮೋಕ್ಷ ಅಥವಾ ಮೋಕ್ಷದಿಂದ ಆಶೀರ್ವದಿಸಲ್ಪಡುತ್ತಾನೆ ಎನ್ನುವ ಪ್ರತೀತಿ ಇದೆ.

ಬಿಲ್ವಪತ್ರೆಯ ಮಹತ್ವ ಏನು?
ಶಿವನಿಗೆ ಅತಿ ಇಷ್ಟವಾದ ಪುಷ್ಪವೆಂದರೆ, ಬಿಲ್ವಪತ್ರೆಯಾಗಿದೆ. ಈ ಬಿಲ್ವಪತ್ರೆಯನ್ನು ಶಿವರಾತ್ರಿಯ ದಿನ ಪಂಚಾಕ್ಷರಿ ಜಪದೊಂದಿಗೆ ಶಿವನಿಗೆ ಸಮರ್ಪಿಸಿದರೆ ಶಿವ ಆಶೀರ್ವಾದ ಮಾಡುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹಾಗಾಗಿ ಬಿಲ್ವಪತ್ರೆಗೆ ಶಿವರಾತ್ರಿ ಆಚರಣೆಯಲ್ಲಿ ಬಹಳ ಮಹತ್ವದ ಸ್ಥಾನವಿದೆ.
ಕತ್ತಲೆ ಮತ್ತು ಅಜ್ಞಾನವನ್ನು ಜಯಿಸುವುದು ಶಿವರಾತ್ರಿಯ ಮಹತ್ವವಾಗಿದೆ. ಆದ್ದರಿಂದ ಈ ದಿನ ಶಿವನಿಗೆ ಹಣ್ಣುಗಳು, ಎಲೆಗಳು, ಸಿಹಿತಿಂಡಿಗಳು ಮತ್ತು ಹಾಲಿನ ಅರ್ಪಣೆಗಳನ್ನು ಮಾಡಲಾಗುತ್ತದೆ. ಕೆಲವರು ಶಿವನ ಪೂಜೆಯೊಂದಿಗೆ ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ದೇವಾಲಯಗಳಲ್ಲಿ ಶಿವನ ಪವಿತ್ರ ಮಂತ್ರವಾದ "ಓಂ ನಮಃ ಶಿವಾಯ" ಸಂಗೀತಮಯವಾಗಿರುತ್ತದೆ.

ವ್ಯಾಪಾರಿಗಳ ಮುಖದಲ್ಲಿ ಸಂತಸ
ಒಂದೆಡೆ ಶಿವರಾತ್ರಿ ಹಬ್ಬ, ಮತ್ತೊಂದೆಡೆ ಬೇಸಿಗೆಯ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬಗೆಯ ಹಣ್ಣುಗಳ ಮಾರಾಟ ಭರ್ಜರಿಯಾಗಿ ಸಾಗಿತ್ತು. ಕಲ್ಲಂಗಡಿ, ಖರ್ಬೂಜ, ಸೇಬು, ಕಿತ್ತಳೆ, ದ್ರಾಕ್ಷಿ ಸೇರಿದಂತೆ ಅನೇಕ ಬಗೆಯ ಹಣ್ಣುಗಳ ಮಾರಾಟ ಹೆಚ್ಚಾಗಿತ್ತು. ಶಿವರಾತ್ರಿ ಹಬ್ಬದಲ್ಲಿ ಹಣ್ಣುಗಳ ನೈವೇದ್ಯ ಮಾಡಲಾಗುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಅದರಲ್ಲೂ ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಕಲ್ಲಂಗಡಿ ಹಣ್ಣುಗಳನ್ನು ತರಿಸಿದ್ದ ವ್ಯಾಪಾರಿಗಳು ಭಾರಿ ವ್ಯಾಪಾರದ ಸಂತಸಲ್ಲಿದ್ದರು.












Click it and Unblock the Notifications