ಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಒಂದೆಡೆ ಸಂತಸ, ಮತ್ತೊಂದೆಡೆ ಭಯ?
ದಾವಣಗೆರೆ, ಜುಲೈ 14: ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಭದ್ರಾ ಜಲಾಶಯ ನೀರು ಬಿಡಲಾಗಿದ್ದು, ಜಿಲ್ಲೆಯ ಜನರು ಹಾಗೂ ರೈತರಲ್ಲಿ ಸಂತಸ ತಂದಿದ್ದರೆ, ಮತ್ತೊಂದೆಡೆ ನದಿಪಾತ್ರದ ಜನರಲ್ಲಿ ಪ್ರವಾಹ ಭೀತಿ ತಲೆದೋರಿದೆ.
ಈಗಾಗಲೇ ಜಲಾಶಯದಿಂದ ನೀರು ಹೊರಬಿಡಲಾಗಿದ್ದು, ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ತಗ್ಗು ಪ್ರದೇಶಗಳಲ್ಲಿ ಆತಂಕ ಶುರುವಾಗಿದೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.
ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಿ ಸುರಕ್ಷಿತವಾಗಿಡಲು ಹಾಗೂ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಈಗಾಗಲೇ ಗುರುತು ಮಾಡಲಾಗಿದೆ. ವಸತಿ ಮತ್ತು ಊಟದ ವ್ಯವಸ್ಥೆಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಸುಮಾರು 113ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಇವರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಸಮಾರೋಪಾದಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದಷ್ಟು ಬೇಗ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ 184 ಅಡಿ ತಲುಪಿದ ಹಿನ್ನೆಲೆಯಲ್ಲಿ ಹೊನ್ನಾಳಿ- ಹರಿಹರ ಭಾಗದಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಹೊನ್ನಾಳಿ, ನ್ಯಾಮತಿ, ಹರಿಹರ ಭಾಗದ ಕೆಲ ಗ್ರಾಮಗಳು ಮುಳುಗುವ ಆತಂಕದಲ್ಲಿವೆ. ಡ್ಯಾಂನ ಗರಿಷ್ಠ ಮಟ್ಟ 186 ಅಡಿ ಇದ್ದು ಈಗಾಗಲೇ 184 ಅಡಿ ಭರ್ತಿ ಆಗಿದೆ.
ಭದ್ರಾ ಜಲಾನಯನ ಭಾಗದಲ್ಲಿ ಗುರುವಾರವೂ ಕೂಡ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಹೊನ್ನಾಳಿ, ಹರಿಹರ ಭಾಗದ ಜನರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ನದಿಗೆ ಇಳಿಯದಂತೆ ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಎನ್. ಡಿ. ಆರ್. ಎಫ್ ಅನ್ವಯ ಪರಿಹಾರ
ಅಧಿಕಾರಿಗಳು ಮೈಗಳತನ ಬಿಟ್ಟು ಪ್ರಾಮಾಣಿಕವಾಗಿ ಶ್ರಮವಹಿಸಿ ಕೆಲಸ ಮಾಡಬೇಕು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಗುರುತಿಸಿ ಎನ್. ಡಿ. ಆರ್. ಎಫ್ ಅನ್ವಯ ಪರಿಹಾರ ಒದಗಿಸಬೇಕು. ಕ್ಷೇತ್ರದಲ್ಲಿ ಕೆಲವೆಡೆ ಅಡಿಕೆ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಹಾನಿಗೊಳಗಾದ ಅರ್ಹ ರೈತರಿಗೆ ಪರಿಹಾರ ದೊರಕಿಸುವ ಕೆಲಸವಾಗಬೇಕು ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.
ಈಗಾಗಲೇ ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್, ಮೇದಾರ ಓಣಿ ಮುಳುಗುವ ಹಂತದಲ್ಲಿದಲ್ಲಿದ್ದು, ಶಾಸಕ ಎಂ. ಪಿ. ರೇಣುಕಾಚಾರ್ಯ ಸ್ಥಳ ವೀಕ್ಷಣೆ ಮಾಡಿದ್ದಾರೆ. 25 ಮನೆಗಳನ್ನು ಸ್ಥಳಾಂತರ ಮಾಡಲಾಗುವುದು. ಈ ಮನೆಗಳು ತಗ್ಗು ಪ್ರದೇಶಗಳಲ್ಲಿದ್ದು, ಈ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ ಜನರು ಬೇರೆ ಕಡೆ ಹೋಗದ ಕಾರಣ ಸಮಸ್ಯೆ ಆಗಿದೆ ಎಂದರು.

ಮಳೆ ಹಾನಿ ಕುರಿತು ವರದಿಗೆ ಸೂಚನೆ
ಮುಂಬರುವ ದಿನಗಳಲ್ಲಿ ಸಾಕಷ್ಟು ಮಳೆ ಹಾಗೂ ಪ್ರವಾಹ ಸಾಧ್ಯತೆ ಹೆಚ್ಚಿರುವ ಕಾರಣದಿಂದ ಅಧಿಕಾರಿಗಳು ಕಠಿಣ ಪರಿಸ್ಥಿತಿ ನಿರ್ಮಾಣವಾದರೂ ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಮಳೆ ಹಾನಿ ಕುರಿತು ವಿವಿಧ ಇಲಾಖೆಗಳ ವರದಿ ಪರಿಶೀಲನಾ ಸಭೆಯನ್ನೂ ಸಹ ನಡೆಸಿದ್ದಾರೆ.

ನದಿಪಾತ್ರದ ಜನರಿಗೆ ಕಾಳಜಿ ಕೇಂದ್ರ
ಯಾವ್ಯಾವ ಭಾಗದಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿದೆಯೋ ಆ ಪ್ರದೇಶಗಳ ನದಿ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಮುನ್ಸೂಚನೆಯಾಗಿ ಮಾಹಿತಿ ನೀಡಿ, ಬೇರೆಡೆಗೆ ಸ್ಥಳಾಂತರ ವಾಗುವಂತೆ ಜಾಗೃತಿ ಮೂಡಿಸಬೇಕು. ನದಿ ನೀರು ಹೆಚ್ಚಾಗಿ ಹರಿದುಬರುವುದರಿಂದ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದ್ದರೆ ಮುಂಚಿತವಾಗಿ ಅಂತಹ ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆದು ಊಟ, ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಅವರಿಗೆ ನೀಡುವ ಊಟ ಗುಣಮಟ್ಟದ್ದಾಗಿರಬೇಕು, ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಗುರುತಿಸಿ ಎ. ಬಿ. ಸಿ ಗುಂಪುಗಳಾಗಿ ವಿಂಗಡಿಸಿ ತುರ್ತಾಗಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಚರಂಡಿ, ಒಳಚರಂಡಿ ಸ್ವಚ್ಛಗೊಳಿಸಲು ಸೂಚನೆ
ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಮಿಕ ರೋಗಗಳು ಬರುವ ಸಾಧ್ಯತೆ ಇದೆ, ಹಾಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ, ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಸಭೆಯಲ್ಲಿ ಚರ್ಚೆಯಾದ ವಿಷಯಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು, ಸಾರ್ವಜನಿಕರು ದೂರು ಹೇಳದಂತೆ ಕಾರ್ಯ ನಿರ್ವಹಿಸಿ. ಒಂದು ವೇಳೆ ಲೋಪದೋಷಗಳು ಕಂಡು ಬಂದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.












Click it and Unblock the Notifications