ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಣ್ಣೆನಗರಿ ದಾವಣಗೆರೆಯಲ್ಲಿ ವರುಣನ ಆರ್ಭಟ; ರಾತ್ರಿಪೂರ್ತಿ ಜನರ ಪರದಾಟ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 2: ದಾವಣಗೆರೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಂಕಷ್ಟ ಎದುರಿಸುವಂತಾಗಿದ್ದು, ನೀರನ್ನು ಹೊರ ಹಾಕಲು ಜನರು ಹರಸಾಹಸ ಪಡುವಂತಾಗಿದೆ.

ಸುಮಾರು ಮೂರು ಗಂಟೆಗಳ ಕಾಲ ಸುರಿದ ಮಳೆ ಹಲವು ಅವಾಂತರವನ್ನೇ ಸೃಷ್ಟಿಸಿತು. ಕೆಲವು ಕಡೆಗಳಲ್ಲಿ ರಾತ್ರಿಪೂರ್ತಿ ಜನರು ಜಾಗರಣೆ ಮಾಡುವಂತಾದರೆ, ಮತ್ತೆ ಕೆಲವು ಕಡೆ ಮನೆಯಿಂದ ಹೊರಬಂದು ನಿಲ್ಲುವಂತಾಯಿತು.

ನೀರು ನುಗ್ಗಿ ದವಸ- ಧಾನ್ಯ, ಸಾಮಗ್ರಿಗಳು ನೀರು ಪಾಲಾಗಿದ್ದು, ಜನರು ಊಟಕ್ಕೂ ಪರದಾಡುವಂತಾಗಿದೆ. ಮಳೆಯಿಂದ ತೊಂದರೆಗೆ ಒಳಗಾಗಿರುವ ಜನರು ಇದೀಗ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Heavy Rain Lashes In Davangere; People Who Have Suffered Hardship In Whole Night

ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಣಾಮ ದಾವಣಗೆರೆ ನಗರದ 5ನೇ ವಾರ್ಡ್‌ನ ಬೂದಾಳ ರಸ್ತೆಯಲ್ಲಿನ ಹಲವು ಮನೆಗಳಲ್ಲಿ ಮೊಣಕಾಲುದ್ದ ನೀರು ನುಗ್ಗಿತು. ಇದರಿಂದ ಮನೆಯಲ್ಲಿದ್ದ ಅಕ್ಕಿ ಸೇರಿದಂತೆ ದವಸ- ಧಾನ್ಯ, ಹಾಸಿಗೆ ನೀರು ಪಾಲಾಗಿದ್ದು, ಪೀಠೋಪಕರಣಗಳು ಹಾಗೂ ಪಾತ್ರೆ- ಪಗಡೆಗಳು ನೀರಿನಿಂದ ಆವೃತಗೊಂಡಿದ್ದವು.

ಇನ್ನು 15ನೇ ವಾರ್ಡ್‌ನ ಕುಂದುವಾಡ ಬಳಿಯ ಡ್ರೈನೇಜ್ ಬ್ಲಾಕ್ ಆಗಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಟ ನಡೆಸಿದ್ದಾರೆ. ರಸ್ತೆ ಹಾಗೂ ಚರಂಡಿಗಳು ನೀರಿನಿಂದ ತುಂಬಿಕೊಂಡು, ಅಪಾಯಕ್ಕೆ ಆಹ್ವಾನ ನೀಡುವಂತೆ ಕಾಣುತ್ತಿತ್ತು. ಸರಿಯಾಗಿ ಚರಂಡಿ ಹಾಗೂ ಯುಜಿಡಿ ಕಾಮಗಾರಿ ನಡೆಸದ ಮಹಾನಗರ ಪಾಲಿಕೆ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾತ್ರಿಯಿಡೀ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಜಾಗರಣೆ ಮಾಡಿದ್ದಾರೆ.

ಕೆಲ ಬಡಾವಣೆಗಳಲ್ಲಿ ಮನೆಗಳ ಒಳಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಹೇಳಿ ಕೇಳಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಯಾವ ಸ್ಮಾರ್ಟ್ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯದೆ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ನೀರು ನುಗ್ಗಿ ಜನರು ಪರದಾಡುವುದು ತಪ್ಪಿಲ್ಲ.

Heavy Rain Lashes In Davangere; People Who Have Suffered Hardship In Whole Night

ದಾವಣಗೆರೆ ಮಹಾನಗರ ಪಾಲಿಕೆಯ 15ನೇ ವಾರ್ಡ್‌ನ ಕುಂದುವಾಡ ಬಳಿಯಲ್ಲಿ ಡ್ರೈನೇಜ್ ಬ್ಲಾಕ್ ಪರಿಣಾಮ ಎಲ್ಲರ ಮನೆಯಲ್ಲಿ ನೀರು ನುಗ್ಗಿದ ಪರಿಣಾಮ, ಧಾರಾಕಾರ ಮಳೆಯಲ್ಲೂ ಜನರು ಬೀದಿಯಲ್ಲಿ ನಿಲ್ಲುವಂತಾಯಿತು.

ಜನರು ಇಂತಹ ಸಮಯದಲ್ಲಿ ಪಾಲಿಕೆ ಮೊರೆ ಹೋಗುವುದು ಸಾಮಾನ್ಯ. ಆದರೆ, ಪಾಲಿಕೆ ಹೆಲ್ಪ್‌ಲೈನ್ ಲಭ್ಯವಿರಲಿಲ್ಲ. ಅಧಿಕಾರಿಗಳು ಫೋನ್ ತೆಗೆಯುವುದಿಲ್ಲ. ಅವೈಜ್ಞಾನಿಕ ಕಾಮಗಾರಿ ನಡೆಸಿ, ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸ್ಪಂದಿಸದ ಕೆಟ್ಟ ಆಡಳಿತ ವ್ಯವಸ್ಥೆ ವಿರುದ್ಧ ಅಲ್ಲಿನ ನಿವಾಸಿಗಳು ಪಾಲಿಕೆಗೆ ಹಿಡಿಶಾಪ ಹಾಕಿದರು.

"ಪ್ರತಿ ಬಾರಿಯೂ ಜೋರಾಗಿ ಮಳೆ ಬಂದಾಗ ಇದೇ ಸಮಸ್ಯೆ ಆಗುತ್ತಿದೆ. ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಮತ್ತೊಂದೆಡೆ ಒಳಚರಂಡಿಯೂ ಸಮರ್ಪಕವಾಗಿ ಆಗಿಲ್ಲ. ಮಳೆ ಬಂದಾಗ ನಾವು ಎದುರಿಸುವ ಸಂಕಷ್ಟ ಹೇಳತೀರದ್ದು. ಈ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿ ಸಾಕಾಗಿ ಹೋಗಿದೆ."

"ಅಧಿಕಾರಿಗಳು ಇಂಥ ಸಂಕಷ್ಟದ ವೇಳೆಯಲ್ಲಿಯೂ ಸ್ಪಂದಿಸಲಿಲ್ಲ, ಕರೆ ಮಾಡಿದರೆ ಸ್ವೀಕರಿಸಲಿಲ್ಲ. ತಗ್ಗು ಪ್ರದೇಶಗಳ ಜನರ ಗೋಳು ಹೇಳತೀರದ್ದು. ಇನ್ನು ಮುಂದಾದರೂ ಇದು ಮರುಕಳಿಸದಂತೆ ಎಚ್ಚರ ವಹಿಸಬೇಕು. ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ," ಎಂದು ಜನರು ಎಚ್ಚರಿಕೆ ನೀಡಿದ್ದಾರೆ.

"ಭಾರೀ ಮಳೆ ಸುರಿದು ಅನಾಹುತ ಆಗುವ ಮುಂಚೆಯೇ ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳಬೇಕಿದೆ. ಇದೀಗ ದವಸ- ಧಾನ್ಯ ಸೇರಿದಂತೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಕೂಡಲೇ ಪರಿಹಾರ ‌ನೀಡಬೇಕು," ಎಂದು ಸಂಕಷ್ಟಕ್ಕೊಳಗಾದ ಜನರು ಆಗ್ರಹಿಸಿದ್ದಾರೆ.

ರಾಜ್ಯದ ವಾತಾವರಣ ಹೇಗಿರಲಿದೆ?
ನೈಋತ್ಯ ಮುಂಗಾರು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ರಾಯಚೂರಿನಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೀದರ್‌ನಲ್ಲಿ 18.8 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

English summary
Heavy rain lashes on Friday night in Davanagere has disrupted people life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X