ದೂಡಾಗೆ ಜಮೀನು ನೀಡದಿರಲು ರೈತರ ನಿರ್ಧಾರ: ಸಮಸ್ಯೆ ಪರಿಹರಿಸ್ತೇವೆ ಎಂದ ಸಿದ್ದೇಶ್ವರ್...!
ದಾವಣಗೆರೆ, ಸೆಪ್ಟೆಂಬರ್ 17: ಹಳೇ ಕುಂದುವಾಡದಲ್ಲಿ ದೂಡಾ ವತಿಯಿಂದ ನಿರ್ಗತಿಕರು ಹಾಗೂ ಬಡವರಿಗಾಗಿ ಉದ್ದೇಶಿಸಿರುವ ಬಡಾವಣೆ ನಿರ್ಮಾಣಕ್ಕೆ ಒಂದಿಂಚೂ ಜಮೀನು ಮಾರಾಟ ಮಾಡದಿರಲು ರೈತರು ನಿರ್ಧರಿಸಿದ್ದಾರೆ. ಆದರೆ ಸಂಸದ ಜಿ. ಎಂ. ಸಿದ್ದೇಶ್ವರ್ ಮಾತ್ರ, ಸುಮ್ಮನೆ ವಿವಾದ ಸೃಷ್ಟಿಸಬೇಡಿ, ಕಿಚ್ಚು ಹಚ್ಚಿಸಬೇಡಿ. ಯಾವ ರೈತರು ವಿರೋಧ ಮಾಡಿಲ್ಲ. ಎಲ್ಲವನ್ನೂ ನಾವು ಸರಿಮಾಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಗ್ರಾಮದ ಮುಖಂಡ ಮಲ್ಲಿಕಾರ್ಜುನ್, ದಾವಣಗೆರೆ-ಹರಿಹರ ನಗರಾಭಿವೃದ್ದಿ ಇಲಾಖೆಯಿಂದ ಕಳೆದ ಮೂರು ವರ್ಷಗಳಿಂದಲೂ ಸುಮಾರು 53.19ಎಕರೆ ಜಮೀನಿನಲ್ಲಿ ವಸತಿ ಯೋಜನೆಯಡಿ ಬಡಾವಣೆ ಮಾಡಲು ಉದ್ದೇಶಿಸಲಾಗಿದೆ. ಹಲವಾರು ಕಾರಣಗಳಿಂದ ಯಾವುದೇ ಕಾರಣಕ್ಕೂ ದೂಡಾಗೆ ಜಮೀನು ನೀಡದೇ ಇರಲು ರೈತರೆಲ್ಲರೂ ತೀರ್ಮಾನಿಸಿದ್ದೇವೆ ಎಂದಿದ್ದಾರೆ.
ಮೂರು ವರ್ಷದ ಹಿಂದೇ ಮಾಡಿದ ಪ್ರಸ್ತಾಪ ಇಟ್ಟುಕೊಂಡು ಈಗ ಜಮೀನು ಖರೀದಿಸುತ್ತೇವೆಂದು ಬಂದರೆ ಹೇಗೆ..? ದಾವಣಗೆರೆಯ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ದೂಡಾ ಇಲಾಖೆಗೆ ಸೇರಿದ ಸೈಟ್‌ಗಳಿದ್ದು, ಮೂರು ವರ್ಷದ ಹಿಂದೇ ಇದ್ದ ದರಕ್ಕೆ ನಮಗೆ ಸೈಟ್ ಮಾರಾಟ ಮಾಡಿ ಎಂದರೇ, ಅದೇ ದರಕ್ಕೆ ದೂಡಾದವರು ಸೈಟ್ ನೀಡುತ್ತಾರಾ..? ಇದಕ್ಕೆ ಉತ್ತರಿಸಲಿ. ದೂಡಾದ ಈ ಮೂರು ವರ್ಷದಿಂದ ನಿರ್ಲಕ್ಷ್ಯ ಧೋರಣೆಗೆ ರೋಸಿ ಹೋಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೂಡಾದಿಂದ ವ್ಯರ್ಥ ಪ್ರಯತ್ನ
ಈ ಹಿಂದೇ ಅಂದರೆ 2022ರ ಮೇ 31ರಂದೇ ಜಮೀನು ನೀಡುವುದಿಲ್ಲ, ಈ ಪ್ರಕ್ರಿಯೆ ಕೈ ಬಿಡಿ ಎಂದು ನಿರ್ಣಯಿಸಿ ದೂಡಾ ಆಯುಕ್ತರಿಗೆ ಮನವಿ ಪತ್ರ ನೀಡಲಾಗಿತ್ತು, 2022ರ ಸೆಪ್ಟೆಂಬರ್ 5ರಂದು ದೂಡಾ ಹಾಗೂ ಎಸಿ, ಭೂ ಸ್ವಾಧೀನಾಧಿಕಾರಿಗಳಿಗೆ ಆಕ್ಷೇಪಣಾ ಅರ್ಜಿ ಸಲ್ಲಿಕೆ ಮಾಡಿ ಜಮೀನು ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಲಾಗಿದೆ. ಈ ವಿಚಾರ ಗೊತ್ತಿದ್ದರೂ ಸಹ ಮೊಂಡುತನದಿಂದ ದೂಡಾ ಇಲಾಖೆ, ಸಚಿವ ಸಂಪುಟ ಒಪ್ಪಿಗೆ ಪಡೆದು ಮತ್ತೆ ವ್ಯರ್ಥ ಪ್ರಯತ್ನ ಮುಂದುರೆಸಿದೆ. ಏನೇ ಆದರೂ ನಾವು ಒಂದಿಂಚು ಜಮೀನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದೂಡಾ ವರ್ಷದಿಂದಲೂ ಒಂದಿಲ್ಲೊಂದು ಸಮಸ್ಯೆ ಉದ್ಭವ ಮಾಡಿದೆ. ಎಲ್ಲಾ ರೈತರನ್ನ ಆಹ್ವಾನಿಸದೇ ಬ್ರೋಕರ್‌ಗಳ ಜೊತೆಗೆ ಒಂದಿಬ್ಬರು ರೈತರೊಂದಿಗೆ ಸೇರಿ ದರ ನಿಗದಿ ಮಾಡಲಾಗಿದೆ. ಬಳಿಕ ರೈತರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಆ ಆದೇಶ ವಾಪಸ್ ಪಡೆಯಲಾಗಿತ್ತು. ಜೊತೆಗೆ ಹಣದ ಜೊತೆಗೆ ಸೈಟ್ ನೀಡುತ್ತೇವೆ ಎಂದು ಹೇಳಿ ಈಗ ಇಲ್ಲ ಎಂದು ಉಲ್ಟಾ ಹೊಡೆದು, ಬಳಿಕ ಕಣ್ಣೊರೆಸುವ ತಂತ್ರ ಮಾಡಲಾಗಿದೆ. ಇಂತಹ ಹತ್ತು ಹಲವು ಯಡವಟ್ಟುಗಳನ್ನು ದೂಡಾ ಮಾಡಿದೆ, ಇದರಿಂದ ನಾವು ಬೇಸತ್ತಿದ್ದೇವೆ ಎಂದರು.

ರೈತರಿಗೆ ತೊಂದರೆ ನೀಡಿದರೆ ಉಗ್ರ ಹೋರಾಟ
ಜೊತೆಗೆ ಇಲ್ಲಿ ಜಮೀನು ಮಾರಾಟ ಮಾಡಿ ಬೇರೆಡೆ ಖರೀದಿಸಿ ಕೃಷಿ ಜಮೀನು ಮಾಡಲು ಕಷ್ಟಕರವಾಗಿದೆ, ಎರಡು-ಮೂರು ವರ್ಷದ ಹಿಂದೇ ಬೇರೆಡೆ ಜಮೀನು ಕಡಿಮೆ ದರ ಇತ್ತು, ಹೀಗ ಎಲ್ಲೆಡೆ ಜಮೀನು ದರ ದುಪ್ಪಟ್ಟಾಗಿದೆ, ಈ ಹಿನ್ನೆಲೆ ಕುಟುಂಬಸ್ಥರು, ಇದಕ್ಕೆ ಒಪ್ಪುತ್ತಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಜಮೀನು ಬಿಟ್ಟು ರೈತರಿಗೆ ನೆಮ್ಮದಿ ನೀಡಿ. ಏನೇ ಸವಾಲು ಎದುರಾದರೂ ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ, ಆದರೂ ಸಹ ಮತ್ತೆ ಮತ್ತೆ ವ್ಯರ್ಥ ಪ್ರಯತ್ನ ಮುಂದುವರೆಸಿ ರೈತರಿಗೆ ತೊಂದರೆ ನೀಡಿದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರ ಜೊತೆ ಮಾತನಾಡಿ ಸಮಸ್ಯೆಗೆ ಪರಿಹಾರ
ಕುಂದುವಾಡ ಬಳಿ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಡಾವಣೆಗೆ ಜಮೀನು ನೀಡಲು ರೈತರು ವಿರೋಧ ಮಾಡಿರುವ ವಿಚಾರದ ಬಗ್ಗೆ ವಿವಾದದ ಕಿಡಿ ಹೊತ್ತಿಸಬೇಡಿ. ರೈತರು ಭೂಮಿ ಕೊಡಲ್ಲ, ಧರಣಿ ಕುಳಿತುಕೊಳ್ಳುತ್ತಾರೆ ಎಂಬೆಲ್ಲಾ ವದಂತಿ ಬೇಡ. ರೈತರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ್ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುಂದುವಾಡ ಬಳಿಯ ಬಡಾವಣೆ ನಿರ್ಮಾಣ ಸಂಬಂಧ ಸರ್ಕಾರದ ಅಧಿಕಾರಿಗಳು, ಶಾಸಕರು ಕ್ರಮ ವಹಿಸುತ್ತಾರೆ. ಈ ಬಗ್ಗೆ ಸಮಾಲೋಚನೆ ನಡೆಸುತ್ತಾರೆ. ಯಾವ ರೈತರು ಭೂಮಿ ಕೊಡಲ್ಲ ಎಂದು ವಿರೋಧ ಮಾಡಿಲ್ಲ, ಈ ಬಗ್ಗೆ ಯಾವುದೇ ವಿವಾದ ಸೃಷ್ಟಿಸುವುದು ಬೇಡ ಎಂದರು.

ಈಗಿನ ದರಕ್ಕೆ ಜಮೀನು ಖರೀದಿ ಭರವಸೆ
ಈಗಾಗಲೇ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಲೇಔಟ್ ನಿರ್ಮಾಣ ಮಾಡಲು ಒಪ್ಪಿಗೆ ಸಿಕ್ಕಿದೆ. ರೈತರು ಧರಣಿ ಕುಳಿತುಕೊಳ್ಳುವುದಿಲ್ಲ. ಕಳೆದ ಐದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ಜೊತೆ ನಾವೆಲ್ಲಾ ಚರ್ಚೆ ನಡೆಸಿದ್ದೇವೆ. ಸರಕಾರದ ಯಾವುದೇ ಯೋಜನೆಗಳಿದ್ದರೂ ಮಂಜೂರಾತಿ ಸಿಗುವುದು ತಡವಾಗುತ್ತದೆ. ಹಾಗೆಂದ ಮಾತ್ರಕ್ಕೆ ಯೋಜನೆ ನಿಲ್ಲುತ್ತದೆ ಎಂಬುದೇನಿಲ್ಲ. ಬಡಾವಣೆ ನಿರ್ಮಾಣ ಸಂಬಂಧ ರೈತರ ಭೂಮಿ ಖರೀದಿ ಹಾಗೂ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ತಡವಾಗಿರುವುದು ನಿಜ. ಮೂರು ವರ್ಷಗಳ ಹಿಂದಿನ ದರ ನಿಗದಿ ಮಾಡಲ್ಲ. ಈಗಿನ ದರ ನಿಗದಿಪಡಿಸಿ ಜಮೀನು ಖರೀದಿಸಲಾಗುವುದು. ಈ ಬಗ್ಗೆ ಯಾವುದೇ ಆತಂಕ, ಭಯ ಬೇಡ ಎಂದು ತಿಳಿಸಿದರು.












Click it and Unblock the Notifications