Durgambika Jatra 2024: ದಾವಣಗೆರೆಯಲ್ಲಿ ದುಗ್ಗಮ್ಮ, ಚೌಡೇಶ್ವರಿ ಜಾತ್ರೆ ಸಂಭ್ರಮ, ಹರಕೆ ತೀರಿಸಿದ ಭಕ್ತಸಾಗರ
ದಾವಣಗೆರೆ, ಮಾರ್ಚ್, 19: ದಾವಣಗೆರೆ ಶಕ್ತಿ ದೇವತೆ ಶ್ರೀ ದುರ್ಗಾಂಬಿಕಾದೇವಿ, ವಿನೋಬ ನಗರದ ಶ್ರೀ ಚೌಡೇಶ್ವರಿ ದೇವಿ, ಎಸ್‌ಒಜಿ ಕಾಲೋನಿಯ ಶ್ರೀ ದುರ್ಗಾಂಬಿಕಾ ದೇವಿಯವರ ಜಾತ್ರಾ ಮಹೋತ್ಸವದ ಸಡಗರ, ಸಂಭ್ರಮ ಮನೆ ಮಾಡಿದೆ.
ಶ್ರೀ ದುರ್ಗಾಂಬಿಕಾ ಜಾತ್ರೆಗಾಗಿ ಅತ್ಯಾಕರ್ಷಕ ಪೆಂಡಾಲ್ ಸಿದ್ಧವಾಗಿದೆ. ಮಂಗಳವಾರ ದೇವಿಯ ವಾರವಾದ್ದರಿಂದ ದೇವಿಯಲ್ಲಿ ಹರಕೆ ಹೊತ್ತವರು ದೀಡು ನಮಸ್ಕಾರ, ಬೇವಿನುಡುಗೆ ಸೇರಿ ಇತರೆ ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು.

ಹರಕೆತೀರಿಸುವ ಅಸಂಖ್ಯಾತ ಭಕ್ತಾದಿಗಳ ಅನುಕೂಲಕ್ಕಾಗಿ ಮರಳು, ಸಾಮೂಹಿಕ ನಲ್ಲಿಗಳ, ಷವರ್ ಬಾತ್ ಜೊತೆಗೆ ಕೆಲವಾರು ಪ್ರದೇಶಗಳಲ್ಲಿ ತಾತ್ಕಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿತ್ತು.
ದುಗ್ಗಮ್ಮನ ದೇವಸ್ಥಾನಕ್ಕೆ ಭಕ್ತಾದಿಗಳು ಸುಲಲಿತವಾಗಿ ಹೋಗಿ ಬರುವಂತಾಗಲು ಕೆಲವಾರು ರಸ್ತೆಗಳನ್ನು ತಾತ್ಕಾಲಿಕ ಒಮ್ಮುಖ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ತಾತ್ಕಾಲಿಕ ಉಪ ಪೊಲೀಸ್ ಠಾಣೆ, ಆರೋಗ್ಯ ಕೇಂದ್ರ, ಮಾಹಿತಿ ಕೇಂದ್ರ, ದೇವಿಯ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ, ವಿಶೇಷ ದರ್ಶನದ ವ್ಯವಸ್ಥೆ ಒಳಗೊಂಡಂತೆ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.
ಕುರಿ, ಕೋಳಿ, ಅಗತ್ಯ ವಸ್ತುಗಳ ಬೆಲೆ ಹೆಚ್ಚು ಎಂದು ಜನರು ಹಿಂದೆ ಸರಿಯುವ ಮಾತೇ ಇಲ್ಲ. ಎರಡು ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಗೆ ಎಷ್ಟೇ ಖರ್ಚಾದರೂ ಸರಿಯೇ ಬಾಡೂಟಕ್ಕೆ ಜನರು ಸಜ್ಜಾಗಿದ್ದಾರೆ. ಮನೆಗಳಿಗೆಬೀಗರು, ನೆಂಟರಿಷ್ಟರು ಆಗಮಿಸಿದ್ದಾರೆ. ಆಗಲೇ ಹಲವಾರು ಕಡೆಗಳಲ್ಲಿ ಶಾಮಿಯಾನಗಳ ವ್ಯವಸ್ಥೆ ಸಹ ಮಾಡಿಕೊಳ್ಳಲಾಗುತ್ತಿದೆ.
ಕುರಿಯ ಜೊತೆಗೆ ಕೋಳಿ, ತರಕಾರಿ, ಹೂವು, ಹಣ್ಣುಗಳ ಬೆಲೆಯೂ ಸಾಮಾನ್ಯ ದಿನಗಳಗಿಂತಲೂ ದುಬಾರಿಯಾಗಿದೆ. ಆದರೆ, ಹಬ್ಬದ ಲೆಕ್ಕಾಚಾರದ ಮುಂದೆ ಯಾವುದೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಜನರು ಅದ್ಧೂರಿ ಹಬ್ಬದಾಚರಣೆಯ ಲಹರಿಯಲ್ಲಿದ್ದಾರೆ. ವಿನೋಬ ನಗರದ ಒಂದನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯೂ ಕಳೆಗಟ್ಟಿದೆ. ಅತ್ಯಾಕರ್ಷಕ ಪೆಂಡಾಲ್ ಮನಸೂರೆಗೊಳ್ಳುತ್ತಿದೆ. ನಗರ ದೇವತೆ ದುರ್ಗಾಂಬಿಕಾ ಜಾತ್ರೆಯೊಂದಿಗೆ ವಿನೋಬ ನಗರದ ಚೌಡಮ್ಮನ ಜಾತ್ರೆಯೂ ನಡೆಯುವುದರಿಂದ ಸಂತಸ ಇಮ್ಮಡಿಯಾಗಿದೆ.
ಜಾತ್ರೆ ಸಂದರ್ಭದಲ್ಲಿ ದೇವಸ್ಥಾನಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಲಾಗಿದೆ. ಇಡೀ ದಾವಣಗೆರೆ ಜಾತ್ರೆ ಸಂಭ್ರಮ, ಭಕ್ತಿ, ಆರಾಧನೆಯಲ್ಲಿದೆ.
ಪ್ರಗತಿ ಪಬ್ಲಿಕ್ ಟ್ರಸ್ಟ್ (ರಿ.) ಆರ್ಯವೈಶ್ಯ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಆರ್.ರಮೇಶ್ ಬಾಬು ಹಾಗೂ ಕಾರ್ಯದರ್ಶಿ ಮಾಕಂ ನಾಗರಾಜ ಗುಪ್ತ ಅವರ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆಯಲ್ಲಿರುವ ಕಾಸಲ್ ಎಸ್ ವಿಠ್ಠಲ್ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯ ಪ್ರಯುಕ್ತ ಮಾರ್ಚ್ 19ರಿಂದ 24ರವರೆಗೆ ಪ್ರತಿದಿನ ಮಧ್ಯಾಹ್ನ 12:30ರಿಂದ ಪ್ರಸಾದ (ಮೊಸರನ್ನ)ವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಿದ್ದಾರೆ.
ಅಲ್ಲದೆ, ವಾಸವಿ ಯುವಜನ ಸಂಘದವರಿಂದ ಮಾರ್ಚ್ 19ರಿಂದ 24ರ ವರೆಗೆ ಬೆಳಗ್ಗೆ 11 ಗಂಟೆಯಿಂದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆಯನ್ನು ಹಮ್ಮಿಕೊಂಡಿರುವುದಾಗಿ ಸಂಘದ ಅಧ್ಯಕ್ಷ ಎಸ್.ಸುನೀಲ್ ತಿಳಿಸಿದ್ದಾರೆ.












Click it and Unblock the Notifications