ಸೋಮಣ್ಣ ಸಿಎಂ ಆಗ್ತೇನೆ ಎಂಬ ಭ್ರಮೆಯಲ್ಲಿದ್ದರು: ರೇಣುಕಾಚಾರ್ಯ ಹೀಗೆ ಹೇಳಿದ್ದು ಯಾವ ಆಧಾರದಲ್ಲಿ?
ದಾವಣಗೆರೆ, ಡಿಸೆಂಬರ್, 14: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರರ ವಿರುದ್ಧ ಇನ್ಮುಂದೆ ಮಾತನಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಮಗೂ ತಾಳ್ಮೆಯಿದೆ. ಅದನ್ನು ಪರೀಕ್ಷಿಸಬೇಡಿ ಎಂದು ಯತ್ನಾಳ್, ವಿ.ಸೋಮಣ್ಣ ವಿರುದ್ಧ ಎಂ.ಪಿ.ರೇಣುಕಾಚಾರ್ಯ ಅವರು ಗುಡುಗಿದ್ದಾರೆ. ಅಲ್ಲದೆ ವಿ. ಸೋಮಣ್ಣ ಸಿಎಂ ಆಗ್ತೇನೆ ಎಂಬ ಭ್ರಮೆಯಲ್ಲಿದ್ದರು ಎಂದು ಹೇಳಿದ್ದಾರೆ. ಹಾಗಾದರೆ ಹೀಗೆ ಅವರು ಹೇಳಿದ್ದು ಯಾವ ಆಧಾರದಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೇರೆ ಪಕ್ಷದಲ್ಲಿದ್ದ ಯತ್ನಾಳ್, ಸೋಮಣ್ಣ ಕರೆತಂದ ಇವರಿಬ್ಬರೇ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಮಾತನಾಡುತ್ತಿರುವುದು. ಬಿಎಸ್‌ವೈ ವಿರುದ್ಧ ಮಾತನಾಡಲು ಯಾವ ನೈತಿಕತೆ ಇದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಗುಡುಗಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯತ್ನಾಳ್, ಸೋಮಣ್ಣ ಎಲ್ಲಿಯವರೆಗೂ ಬಿಎಸ್‌ವೈ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಮಾತನಾಡುತ್ತಾರೋ ಅಲ್ಲಿಯವರೆಗೆ ನಾವು ಮಾತನಾಡುತ್ತೇವೆ. ಸಹಿಸಲು ಆಗದು. ನಮಗೂ ತಾಳ್ಮೆಯಿದೆ. ಪ್ರತಿದಿನ ಇಬ್ಬರೂ ಮಾತನಾಡಿದರೆ ಯಡಿಯೂರಪ್ಪರ ತೂಕ ಕಡಿಮೆಯಾಗುತ್ತಾ?
ಯಡಿಯೂರಪ್ಪನವರು ನಡೆದ ಹಾದಿಯ ಮಣ್ಣು ತೆಗೆದುಕೊಂಡು ಚಾಮರಾಜನಗರ, ಮೈಸೂರು ಜನರು ಹಣೆಗೆ ಇಟ್ಟುಕೊಳ್ಳುತ್ತಾರೆ. ಅಷ್ಟು ಹೋರಾಟದ ಮೂಲಕ ರಾಜಕಾರಣದಲ್ಲಿ ಮೇಲೆ ಬಂದು ಜನರಿಗಾಗಿ ಜೀವನ ಮುಡುಪಿಟ್ಟ ನಾಯಕ ಎಂದು ಹೇಳಿದರು.
ಯತ್ನಾಳ್, ಸೋಮಣ್ಣ ಅವರ ಪಾಪದ ಕೊಡ ತುಂಬಿದೆ. ಅದಕ್ಕೆ ಸದ್ಯದಲ್ಲೇ ಅಂತ್ಯ ಆಗುತ್ತೆ ಎಂಬ ಕಾರಣಕ್ಕೆ ಯಡಿಯೂರಪ್ಪ, ವಿಜಯೇಂದ್ರರನ್ನು ಜರನ ಮುಂದೆ ವಿಲನ್ ಮಾಡಲು ಹೊರಟಿದ್ದಾರೆ. ಟೀಕೆ ಮಾಡುವುದನ್ನು ಇನ್ಮುಂದೆ ಕೈ ಬಿಡಬೇಕು. ನಾವೆಲ್ಲರೂ ವಿಜಯೇಂದ್ರ ಅವರಿಗೆ ಸಾಥ್ ಕೊಡಬೇಕು. ಸಮಸ್ಯೆಗಳಿದ್ದರೆ ಹೈಕಮಾಂಡ್ ಬಳಿ ಹೇಳಿಕೊಳ್ಳಲಿ. ಇನ್ನು ಮುಂದಾದರೂ ತಿದ್ದಿಕೊಳ್ಳಲಿ. ಇಲ್ಲದಿದ್ದರೆ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಯಾರೂ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಬಾರದು. ಇಂತಹ ರಾಜಕೀಯ ಬಿಡಬೇಕು. ಸಭ್ಯ ರಾಜಕಾರಣಿಯಾಗಬೇಕು. ನಾನು ಜಾಸ್ತಿ ಮಾತನಾಡಬಾರದು. ಸಾರ್ವಜನಿಕರು ಗಮನಿಸುತ್ತಾರೆ. ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವ ನೈತಿಕ ಹಕ್ಕು ಎಲ್ಲಿದೆ. ಕಾಂಗ್ರೆಸ್‌ನಲ್ಲಿ ಸೋಮಣ್ಣರಿಗೆ ರಾಜಕೀಯ ಸ್ಥಾನ ಮಾನ ಕೊಟ್ಟಿದ್ದರಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಯಡಿಯೂರಪ್ಪನವರು ಬಿಜೆಪಿಗೆ ಸೋಮಣ್ಣರನ್ನು ಕರೆ ತಂದರು. ನಮಗೆ ಅನ್ಯಾಯವಾಗಿದೆ. ಸೋತರೂ ಸೋಮಣ್ಣ ಅವರನ್ನು ಮಂತ್ರಿ ಮಾಡಿದರು. ಯತ್ನಾಳ್ ಜೆಡಿಎಸ್‌ನಲ್ಲಿದ್ದರು. ಅವರನ್ನು ಬಿಜೆಪಿಗೆ ಕರೆತಂದಿದ್ದೇ ಯಡಿಯೂರಪ್ಪ ಅವರು. ಕೈ ಕಾಲು ಹಿಡಿದು ಬಿಜೆಪಿಗೆ ಬಂದವರು ಈಗ ಯಡಿಯೂರಪ್ಪರ ವಿರುದ್ಧವೇ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
2023ರ ವಿಧಾನಸಭೆ ಚುನಾವಣೆ ಸೋಲಿಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. 2017ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಮತ್ತೆ ರಾಜ್ಯ ಪ್ರವಾಸ ಮಾಡಿದರು. ಆಗಲೇ ಎಲ್ಲರೂ ಬೆಂಬಲ ಸೂಚಿಸಿದ್ದರೆ, 130ಕ್ಕೂ ಹೆಚ್ಚು ಸ್ಥಾನಗಳನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತಿತ್ತು. ಪಕ್ಷ ಸಂಘಟನೆ ಮಾಡಲು ಕೆಲವರು ಸರಿಯಾಗಿ ಸಹಕರಿಸಲಿಲ್ಲ. ಯಡಿಯೂರಪ್ಪರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದರು ಎಂದರು.
ಸಂಘಟನೆ ಚತುರ ಯಡಿಯೂರಪ್ಪ ಅವರು. ಸ್ಕೂಟರ್, ಸೈಕಲ್‌ನಲ್ಲಿ ಪ್ರವಾಸ ಮಾಡಿ ಪಕ್ಷ ಕಟ್ಟಿದ್ದಾರೆ. ಯತ್ನಾಳ್ ಸೆರೆಮನೆ ವಾಸ ಅನುಭವಿಸಿದ್ದಾರಾ? ಸುವರ್ಣ ಸೌಧದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರಾ? ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಏನೂ ಇಲ್ವಾ? ಸೋಮಣ್ಣ, ಯತ್ನಾಳ್‌ಗೆ ಬಿಎಸ್‌ವೈ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವು ಮಂತ್ರಿಯಾಗಲಿಲ್ಲ. ಹಾಗೆಂದ ಕಾರಣಕ್ಕೆ ದ್ವೇಷದ ರಾಜಕಾರಣ ಮಾಡಿದ್ದೇವಾ? ಯಾರೂ ಶಾಶ್ವತವಾಗಿ ಶಾಸಕರಾಗಿ ಇರುವುದಿಲ್ಲ. ಸೋತವರು ಗೆಲ್ತಾರೆ, ಗೆದ್ದವರು ಸೋಲ್ತಾರೆ. ಯಡಿಯೂರಪ್ಪ ಅವರ ವಿರುದ್ದ ವಾಗ್ದಾಳಿ ನಡೆಸುವುದು ಸರಿಯಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕು ನಿಜ. ಆದ್ರೆ ಜನರು ಬಂದು ಕೇಳಿದ್ದಾರಾ? ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಹುದ್ದೆ ಸಿಗಲಿಲ್ಲ ಎಂಬ ಕಾರಣಕ್ಕೆ ಯತ್ನಾಳ್ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವರಾಜ್ ಬೊಮ್ಮಾಯಿ, ಸೋಮಣ್ಣ ಸೋಲಲು ವಿಜಯೇಂದ್ರ ಹಣ ನೀಡಿದ್ದಾರೆ ಎಂಬ ಆರೋಪ ಮಾಡುವ ಯತ್ನಾಳ್‌ಗೆ ನಾಚಿಕೆಯಾಗಲ್ವಾ. ಸ್ವಪಕ್ಷೀಯರ ವಿರುದ್ಧ ಮಾತನಾಡುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ವಾ? ವಿಜಯೇಂದ್ರ ಸೋಲಿಸಲು ಯಾರೆಲ್ಲಾ ಪ್ರಯತ್ನಪಟ್ಟಿದ್ದಾರೆ ಎಂಬುದು ನನಗೂ ಗೊತ್ತು. ವಿಜಯೇಂದ್ರ ಸೋತರೆ ನಾವು ದೊಡ್ಡವರಾಗುತ್ತೇವ ಎಂದು ಕುತಂತ್ರ ನಡೆಸಿದರು. ಆದರೆ ಇದರಲ್ಲಿ ಯಶಸ್ಸು ಸಾಧಿಸಲಿಲ್ಲ ಎಂದು ಬಾಂಬ್ ಸಿಡಿಸಿದರು.
ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಂದು ತಿಂಗಳಾಗಿದೆ. ಮುಜುಗರ ಆಗಬಾರದು ಎಂಬ ಕಾರಣಕ್ಕೆ ನಾವೆಲ್ಲರೂ ಸುಮ್ಮನಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಗೆಲ್ಲಬೇಕು. ವಿಶ್ವವೇ ನರೇಂದ್ರ ಮೋದಿ ಅವರನ್ನು ಮೆಚ್ಚಿದೆ. ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು. ದೇಶದ ಜನರ ಅಪೇಕ್ಷೆಯೂ ಇದೇ ಆಗಿದೆ. ಎಲ್ಲರೊಟ್ಟಿಗೆ ಚರ್ಚೆ ಮಾಡಲಿ. 28 ಸ್ಥಾನ ಗೆಲ್ಲಬೇಕು. ಯತ್ನಾಳ್, ಸೋಮಣ್ಣ ಅವರಿಗೆ ಬಿಜೆಪಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬಾರದು ಎಂಬುದು ಇರಬೇಕು. ಹಾಗಾಗಿ, ಏನೇನೋ ಮಾತನಾಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.
ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ವರಿಷ್ಠರು ಹೇಳಿದ್ದಕ್ಕೆ ಸ್ಪರ್ಧೆ ಮಾಡಿದ್ದರು. ಮಠ ಮಾನ್ಯಗಳಿಗೆ ಹೋಗಿ ನಾನೇ ವೀರಶೈವ ಲಿಂಗಾಯತ ಸಮಾಜದ ನಾಯಕ ಎಂದು ಫೋಸ್ ಕೊಡುತ್ತಿದ್ದಾರೆ. ದೊಡ್ಡ ನಾಯಕನಾಗಿದ್ದರೆ ಗೆಲ್ಲಬೇಕಿತ್ತು. ಸಿದ್ದರಾಮಯ್ಯರ ವಿರುದ್ದ ಸ್ಪರ್ಧೆ ಮಾಡಿ ಗೆದ್ದು ಸಿಎಂ ಆಗ್ತೇನೆ ಎಂಬ ಭ್ರಮಾಲೋಕದಲ್ಲಿದ್ದರು. ಸೋತಿರುವುದರಿಂದ ಸೋಮಣ್ಣ ಹತಾಶರಾಗಿ, ಹುದ್ದೆ ಸಿಗಲಿಲ್ಲ ಎಂಬ ಕಾರಣಕ್ಕೆ ಯತ್ನಾಳ್ ಟೀಕೆ ಮಾಡುತ್ತಿದ್ದಾರೆ. ನಾವೆಲ್ಲರೂ ಯಡಿಯೂರಪ್ಪ, ವಿಜಯೇಂದ್ರ ಎನ್ನುವುದಕ್ಕಿಂತ ಬಿಜೆಪಿ ಜೊತೆಗೆ ನಿಲ್ಲುತ್ತೇವೆ ಎಂದು ಹೇಳಿದರು.
ಅಚಾತುರ್ಯ ಆಗಿದೆ, ರಾಜಕೀಯ ಬೇಡ
ಸಂಸತ್ ಮೇಲಿನ ದಾಳಿ ಖಂಡನೀಯ. ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಸರಿಯಲ್ಲ. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಸಂಸದ ಪ್ರತಾಪ್ ಸಿಂಹ ಕಚೇರಿ ಮೇಲೆ ಕಾಂಗ್ರೆಸ್ ಮುತ್ತಿಗೆ ಹಾಕಲು ಯತ್ನಿಸಿದ್ದು ತಪ್ಪು. ನಾನು ಶಾಸಕ, ಸಚಿವನಾಗಿದ್ದಾಗ ನೂರಾರು ಮಂದಿಗೆ ಪಾಸ್ ಕೊಡಿಸಿದ್ದೇನೆ. ಯಾರೋ ಕಿಡಿಗೇಡಿಗಳು ಈ ರೀತಿಯ ಕೃತ್ಯ ಎಸಗಿದರೆ ಏನು ಮಾಡಲು ಆಗುತ್ತದೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು.
ವಿಧಾನಸೌಧ ಇರಬಹುದು, ಲೋಕಸಭೆ ಇರಬಹುದು. ಎಲ್ಲದಕ್ಕೂ ಭದ್ರತಾ ವೈಫಲ್ಯ ಎನ್ನುವುದಲ್ಲ. ಮುಂಬೈ ಮೇಲೆ ಭಯೋತ್ಪಾದಕರ ದಾಳಿಯಾಗಿದ್ದಾಗ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರು. ಎಲ್ಲದಕ್ಕೂ ರಾಜೀನಾಮೆ, ವೈಫಲ್ಯ ಎನ್ನುವುದು ಸರಿಯಲ್ಲ. ಆರೋಪಿಗಳಿಗೆ ಏನು ಬೇಕಾದರೂ ಶಿಕ್ಷೆ ಕೊಡಲಿ ಎಂದು ಹೇಳಿದರು.












Click it and Unblock the Notifications