8 ಕಿ. ಮೀ. ಓಡಿ ಕೊಲೆಗಾರನನ್ನು ಪತ್ತೆ ಹಚ್ಚಿದ ದಾವಣಗೆರೆಯ 'ತಾರಾ'!
ದಾವಣಗೆರೆ, ಆಗಸ್ಟ್ 10; ಹಲವಾರು ಅಪರಾಧ ಪ್ರಕರಣಗಳು ಪೊಲೀಸರಿಗೆ ಸವಾಲಾಗಿರುತ್ತದೆ. ಕೆಲವು ಪ್ರಕರಣಗಳನ್ನು ಅವರು ಬೇಗ ಪತ್ತೆ ಹಚ್ಚುತ್ತಾರೆ. ಇಂತಹ ಸಮಯದಲ್ಲಿ ತಂತ್ರಜ್ಞಾನ ಶ್ವಾನದಳ ಸಹ ಅವರಿಗೆ ನೆರವು ನೀಡುತ್ತದೆ. ಇಂತಹವಾ ರೋಚಕ ಕೊಲೆ ಪ್ರಕರಣವೊಂದರ ವಿವರ ಇಲ್ಲಿದೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಶ್ವಾನದಳದ ಕ್ರೈಂ ಡಾಗ್ 'ತಾರ' ನೆರವು ನೀಡಿದೆ.

'ತಾರಾ' ಸುಮಾರು 8 ಕಿ. ಮೀ. ಓಡಿ ಕೊಲೆ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ. ದಾವಣಗೆರೆ ಜಿಲ್ಲಾ ಶ್ವಾನದಳದ 'ತಾರಾ' ಕಾರ್ಯಕ್ಕೆ ಪೊಲೀಸರು ಶ್ಲಾಘನೆ ನೀಡಿದ್ದಾರೆ. ಈ ಕೊಲೆ ಪ್ರಕರಣದ ವಿವರವನ್ನು ಪೊಲೀಸರು ನೀಡಿದ್ದಾರೆ.
8 ಕಿ. ಮೀ. ಓಡಿದ 'ತಾರಾ'; ದಾವಣಗೆರೆಯ ಶ್ರೀರಾಮನಗರದ ನಿವಾಸಿ ಲಲಿತಮ್ಮ (55) 7/8/2023ರಂದು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿದ್ದರು. ತಮ್ಮ ತಂಗಿ ತಿಮ್ಮಕ್ಕನ ಪುತ್ರ 26 ವರ್ಷದ ನರಸಿಂಹ ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆಯ ಸಮೀಪ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಿದ್ದರು.
ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ ಸರ್ವೀಸ್ ರಸ್ತೆಯ ಬದಿಯಲ್ಲಿ ನರಸಿಂಹನ ಶವ ಪತ್ತೆಯಾಗಿತ್ತು. ಸ್ಥಳದಲ್ಲಿ ನೆಲದ ಮೇಲೆ ರಕ್ತ ಹರಿದಿತ್ತು. 6/8/2023ರ ರಾತ್ರಿ ನರಹಿಂಹನ ತಲೆಗೆ ಯಾರೋ ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಯಿತು.
ಲಲಿತಮ್ಮ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಆರಂಭಿಸಿದರು. ಕೊಲೆ ಆರೋಪಿ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರಾಮಗೊಂಡ ಬಸರಗಿ, ಗ್ರಾಮಾಂತರ ಉಪ ವಿಭಾಗ ಡಿವೈಎಸ್‌ಪಿ ಬಸವರಾಜ್ ಬಿ. ಎಸ್. ಮಾರ್ಗದರ್ಶನದಲ್ಲಿ ತಂಡವನ್ನು ರಚನೆ ಮಾಡಲಾಯಿತು.
ಪಿಎಸ್‌ಐ ಹಾರೂನ್ ಅಖ್ತರ್ ನೇತೃತ್ವದ ತಂಡ ಮತ್ತು ದಾವಣಗೆರೆ ಜಿಲ್ಲಾ ಶ್ವಾನದಳದ ಕ್ರೈಂ ವಿಭಾಗದ 'ತಾರಾ' ಎಂಬ ಶ್ವಾನ ತನಿಖೆ ಆರಂಭಿಸಿತು. ಶ್ವಾನ 'ತಾರಾ' ಸುಮಾರು 8 ಕಿ. ಮೀ. ಓಡಿ ಆರೋಪಿ ಗುರುತು ಪತ್ತೆ ಮಾಡಲು ತಂಡಕ್ಕೆ ಸಹಕಾರ ನೀಡಿತು.
7/8/2023ರ ರಾತ್ರಿ ಕೊಲೆ ಆರೋಪಿ 32 ವರ್ಷದ ಶಿವಯೋಗಿ ಅಲಿಯಾಸ್ ಯೋಗಿಯನ್ನು ಪೊಲೀಸರು ಬಂಧಿಸಿದರು. ಈತ ಸಹ ದಾವಣಗೆರೆಯ ಶ್ರೀರಾಮನಗರದ ನಿವಾಸಿ. ಆರೋಪಿ ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದರು.
ಆಗ ಕೊಲೆಯಾ ನರಸಿಂಹ ಆರೋಪಿ ಶಿವಯೋಗಿ ಬಳಿ 35,000 ರೂ.ಗಳನ್ನು ಕೆಲಸದ ಅಡ್ವಾನ್ಸ್ ಆಗಿ ಪಡೆದಿದ್ದ. ಕೆಲಸಕ್ಕೂ ಬಾರದೇ, ಅಡ್ವಾನ್ಸ್ ಹಣ ಸಹ ವಾಪಸ್ ಕೊಡದೇ ಸತಾಯಿಸುತ್ತಿದ್ದ ಎಂಬುದು ಬಹಿರಂಗವಾಯಿತು.
ನರಹಿಂಹ ವಿರುದ್ಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆತ ಜೈಲಿಗೆ ಸಹ ಹೋಗಿ ಬಂದಿದ್ದ. ಬಳಿಕ ಶಿವಯೋಗಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಅವನನ್ನು ಹೀಗೆ ಬಿಟ್ಟರೆ ಮುಂದೆ ಕೊಲೆ ಮಾಡಬಹುದು ಎಂಬ ಭಯ ಶಿವಯೋಗಿಗೆ ಆರಂಭವಾಯಿತು.
ಆದ್ದರಿಂದ 6/8/2023ರ ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಮಲ್ಲಶೆಟ್ಟಿಹಳ್ಳಿ ಬಾಪೂಜಿ ಬಡಾವಣೆ, ಸರ್ವೀಸ್ ರಸ್ತೆ ಪಕ್ಕದಲ್ಲಿ ಕಟ್ಟಿಗೆಯಿಂದ ನರಸಿಂಹನ ಕಿವಿ, ತಲೆ ಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿತ್ತು. ಆರೋಪಿಯು ಈ ಕುರಿತು ತಪ್ಪೊಪ್ಪಿಕೊಂಡಿದ್ದಾನೆ.
ಕೊಲೆ ಆರೋಪಿಯನ್ನು 24 ಗಂಟೆಗಳಲ್ಲೇ ಬಂಧಿಸಿದ ಪಿಎಸ್‌ಐ ಹಾರೂನ್ ಅಖ್ತರ್ ನೇತೃತ್ವದ ತಂಡ ಮತ್ತು ದಾವಣಗೆರೆ ಜಿಲ್ಲಾ ಶ್ವಾನದಳದ ಕ್ರೈಂ ವಿಭಾಗದ 'ತಾರಾ' ಎಂಬ ಶ್ವಾನದ ತನಿಖೆಗೆ ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications