ವದಂತಿಗಳಿಗೆ ಕಿವಿಗೊಡಬೇಡಿ: ದಾವಣಗೆರೆ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಹೀಗೆ ಹೇಳಿದ್ಯಾರಿಗೆ & ಯಾಕೆ?
ದಾವಣಗೆರೆ, ಏಪ್ರಿಲ್, 21: ಲೋಕಸಭಾ ಚುನಾವನೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇನ್ನು ದಾವಣಗೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿನಯ್ ಕುಮಾರ್ ಕೂಡ ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಜಿಲ್ಲೆಯಾದ್ಯಂತ ನನ್ನ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಆದರೆ ವಿರೋಧಿಗಳು ನನ್ನ ತೇಜೋವಧೆ, ಸುಳ್ಳು ವದಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇಂಥದ್ದಕ್ಕೆ ಯಾರೂ ಕಿವಿಗೊಡಬೇಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಪಾದಯಾತ್ರೆ ಆರಂಭಿಸಿದಾಗಿನಿಂದಲೂ ತೇಜೋವಧೆ, ಸುಳ್ಳು ಮಾಹಿತಿ ಹರಡುವ ಕೆಲಸ ಮಾಡಲಾಗುತ್ತಿದೆ. ರಾಜಕೀಯ ವಿರೋಧಿಗಳು ನನ್ನ ಏಳಿಗೆ ಸಹಿಸಲು ಆಗದೇ ಇರುವವರು ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಅಭಿಮಾನಿಗಳು, ಹಿತೈಷಿಗಳು, ಸ್ವಾಭಿಮಾನದ ಬೆಂಬಲಿಗರು ತಲೆಕೆಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ನನ್ನ ಸ್ಪರ್ಧೆಯಿಂದ ಭಯ ಶರು ಆಗಿರುವುದಂತೂ ನಿಜ. ಎಲ್ಲೆಡೆ ನನಗೆ ಬೆಂಬಲ ವ್ಯಕ್ತ ಆಗುತ್ತಿದೆ. ಜನರು ಸ್ವಯಂಪ್ರೇರಿತರಾಗಿ ಬಂದು ಧೈರ್ಯ ತುಂಬುತ್ತಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವರ್ಚಸ್ಸು ಹಾಳು ಮಾಡಲು ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ, ಎಸ್.ಎ.ರವೀಂದ್ರನಾಥ್ ಅವರು ಶುಕ್ರವಾರ ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಸುವಾಗ ಬಂದಿದ್ದರು. ಆಗ ಸಹಜವಾಗಿಯೇ ಕುಶಲೋಪರಿ ವಿಚಾರಿಸಿದರು. ಇದೊಂದು ಆಕಸ್ಮಿಕ ಭೇಟಿಯಾಗಿದ್ದು, ಇದಕ್ಕೆ ಕಥೆ ಕಟ್ಟುವುದು ಸರಿಯಲ್ಲ ಎಂದು ವಿನಯ್ ಕುಮಾರ್ ಹೇಳಿದರು.
ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಜಿಲ್ಲಾಧಿಕಾರಿ ಕಚೇರಿಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಹೋಗಿದ್ದೆ. ಈ ವೇಳೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ಮಾಜಿ ಸಚಿವ ರವೀಂದ್ರನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಅವರೆಲ್ಲರೂ ಮಾತನಾಡಿಸಿದರು. ಇಷ್ಟಕ್ಕೆ ಕೆಲವರು ಸುಳ್ಳು ವದಂತಿ ಹಬ್ಬಿಸಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಯಾರೂ ಕೂಡ ಇಂತಹ ವದಂತಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ನಾಮಪತ್ರ ಸಲ್ಲಿಸಿದ ದಿನ ಸೇರಿದ್ದ ಜನಸ್ತೋಮ, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲಾ ವರ್ಗದವರಿಂದ ನನಗೆ ಬೆಂಬಲ ಸಿಗುತ್ತಿರುವುದನ್ನು ನೋಡಿ ತಪ್ಪು ಸಂದೇಶ ನೀಡುವ ಕೆಲಸ ಆಗುತ್ತಿದೆ. ಬಿಜೆಪಿ ನಾಯಕರ ಜೊತೆ ಇರುವ ಫೋಟೋ ಬಳಸಿ ತೇಜೋವಧೆಗೆ ಯತ್ನಿಸುತ್ತಿದ್ದು, ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಅದು ಸ್ವೀಕೃತವಾಗಿದೆ. ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ, ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಜನರ ಬೆಂಬಲ, ಜನಾದೇಶ ನನ್ನ ಪರವಾಗಿದೆ. ಬೆಂಬಲಿಗರು, ಹಿತೈಷಿಗಳು ಸೇರಿದಂತೆ ಯಾರೂ ಗೊಂದಲಕ್ಕೆ ಒಳಗಾಗಬೇಡಿ. ಒಟ್ಟಾಗಿ ಚುನಾವಣೆ ಎದುರಿಸೋಣ, ಗೆಲ್ಲೋಣ ಎಂದು ಕರೆ ನೀಡಿದ್ದಾರೆ.












Click it and Unblock the Notifications