ದಾವಣಗೆರೆಯಲ್ಲಿ ಶ್ರೀರಾಮನ ಬ್ಯಾನರ್, ಬಂಟಿಂಗ್ಸ್, ಕೇಸರಿ ಧ್ವಜ ತೆರವಿಗೆ ನಿರ್ಧಾರ: ಮುಂದಾಗಿದ್ದೇನು ಗೊತ್ತಾ?
ದಾವಣಗೆರೆ, ಜನವರಿ, 23: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಪ್ರಯುಕ್ತ ನಗರದೆಲ್ಲೆಡೆ ಅಳವಡಿಸಲಾಗಿದ್ದ ಶ್ರೀರಾಮ, ಸೀತಾಮಾತೆ, ಆಂಜನೇಯ ಸ್ವಾಮಿ ಬ್ಯಾನರ್, ಬಂಟಿಂಗ್ಸ್, ಫೋಟೋ, ಕೇಸರಿ ಬಾವುಟ, ಧ್ವಜಗಳನ್ನು ತೆರವುಗೊಳಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಈ ನಿರ್ಧಾರಕ್ಕೆ ರೊಚ್ಚಿಗೆದ್ದ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ನಂತರ ನಡೆದಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ನಗರದ ಪಿಬಿ ರಸ್ತೆಯ ಮಹಾನಗರ ಪಾಲಿಕೆ ಎದುರು ರಸ್ತೆ ತಡೆ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಮಹಾನಗರ ಪಾಲಿಕೆ ಆಯುಕ್ತರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಸಿಡಿದೆದ್ದರು. ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೊಲೀಸರ ಜೊತೆ ತಳ್ಳಾಟ, ನೂಕಾಟವೂ ನಡೆಯಿತು.

ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರದ ಉದ್ಘಾಟನೆ ಹಿನ್ನೆಲೆ ನಗರದ ತುಂಬೆಲ್ಲಾ ಬ್ಯಾನರ್, ಬಂಟಿಂಗ್ಸ್, ಬಾವುಟ, ಫೋಟೋ, ಕೇಸರಿ ಧ್ವಜ, ಬಾವುಟಗಳನ್ನು ಅಳವಡಿಕೆ ಮಾಡಲಾಗಿತ್ತು. ಇಡೀ ನಗರವು ರಾಮಮಂದಿರದ ಉದ್ಘಾಟನೆ ಸಂಭ್ರಮದಲ್ಲಿತ್ತು. ಆದರೆ, ಬೆಳ್ಳಂಬೆಳಗ್ಗೆ ಆಯುಕ್ತರು ಕೊಟ್ಟ ಸೂಚನೆ ಹಿಂದೂ ಸಂಘಟನೆ ಕಾರ್ಯಕರ್ತರು ಕೆರಳುವಂತೆ ಮಾಡಿತು. ಯಾವುದೇ ಮುನ್ಸೂಚನೆ ನೀಡದೇ ತೆರವಿಗೆ ಮುಂದಾಗಿದ್ದರಿಂದ ಗೊಂದಲಕ್ಕೆ ಕಾರಣವಾಯಿತು.
ವಿನೋಬ ನಗರದ ಮೂರನೇ ಮುಖ್ಯ ರಸ್ತೆಯಲ್ಲಿ ಬಿಜೆಪಿ ಹಾಗೂ ಶ್ರೀರಾಮ ಸೇನೆ ಪದಾಧಿಕಾರಿಗಳು, ನಾಗರಿಕರು ಅಳವಡಿಸಿದ್ದ ಶ್ರೀರಾಮನ ಬ್ಯಾನರ್, ಬಂಟಿಂಗ್ಸ್, ಕೇಸರಿ ಧ್ವಜಗಳನ್ನು ಪೌರ ಕಾರ್ಮಿಕರು ತೆರವುಗೊಳಿಸಲು ಮುಂದಾದರು. ಈ ವೇಳೆ ವಿರೋಧ ವ್ಯಕ್ತಪಡಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ತೆರವುಗೊಳಿಸಬಾರದು. ಇನ್ನೆರಡು ದಿನ ಬಿಡಿ, ನಾವೇ ತೆಗೆಯುತ್ತೇವೆ ಎಂದು ಹೇಳಿದರೂ ಕೇಳದೇ ತೆರವುಗೊಳಿಸಲು ಮುಂದಾಗಿದ್ದು ಕಣ್ಣು ಕೆಂಪಾಗಿಸಿತು.
ಪಾಲಿಕೆ ಸದಸ್ಯರ ಗಮನಕ್ಕೆ ಬಂದಿಲ್ಲ: ಯಾರಿಗೂ ಸೂಚನೆ ಕೊಡದೇ ತೆರವುಗೊಳಿಸುತ್ತಿರುವ ಹಿಂದೆ ಯಾರಿದ್ದಾರೆ? ಆದೇಶ ನೀಡಿದವರು ಯಾರು? ಯಾಕೆ ಇಷ್ಟು ತರಾತುರಿಯಲ್ಲಿ ತೆರವುಗೊಳಿಸಲಾಗುತ್ತಿದೆ? ಇದು ಹಿಂದೂ ವಿರೋಧಿ ನೀತಿಯೇ? ಕಾಂಗ್ರೆಸ್ ನವರು ಹಿಂದೂಗಳಲ್ಲವೇ? ಯಾಕಿಷ್ಟು ಹಿಂದೂಗಳ ಮೇಲೆ ಕೋಪ ಎಂದು ಪ್ರಶ್ನಿಸಿದರು.
ಈ ಸಂಬಂಧ ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದರೂ ಬೆಳಗ್ಗೆ ಪ್ರಯೋಜನ ಆಗಿಲ್ಲ. ಮನವಿ ಮಾಡಿದರೂ ತೆರವುಗೊಳಿಸಲು ಮುಂದಾಗಿದ್ದು, ಕಿಚ್ಚು ಹಚ್ಚುವಂತೆ ಮಾಡಿದೆ. ಮಹಾನಗರ ಪಾಲಿಕೆಯ ಸದಸ್ಯರು ಮನವಿ ಮಾಡಿದರೂ ಕ್ಯಾರೇ ಎನ್ನಲಿಲ್ಲ. ಇದು ಮತ್ತಷ್ಟು ಸಿಟ್ಟಿಗೇಳುವಂತೆ ಮಾಡಿತು.
ಆರ್.ಶಿವಾನಂದ್ ಹೇಳಿದ್ದೇನು?: ಪಾಲಿಕೆಯ ಆಯುಕ್ತರು ಮನಸೋ ಇಚ್ಚೆ ಸೂಚನೆ ನೀಡಿದ್ದಾರೆ. ರಾಮಮಂದಿರ ಉದ್ಘಾಟನೆ ಆಗಿ 24 ಗಂಟೆಗಳು ಕಳೆದಿಲ್ಲ. ಇಷ್ಟು ಅರ್ಜೆಂಟ್ ಆಗಿ ತೆರವುಗೊಳಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು. ಅಲ್ಲದೆ, ನನ್ನ ವಾರ್ಡ್‌ನಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗೂ ಕೇಸರಿ ಧ್ವಜ ತೆರವುಗೊಳಿಸಲು ಯಾವುದೇ ಮುನ್ಸೂಚನೆ ಕೊಟ್ಟಿಲ್ಲ. ನನ್ನ ಗಮನಕ್ಕೂ ಬಂದಿಲ್ಲ ಎಂದು ತಿಳಿಸಿದರು.
ಕಾನೂನು ಪ್ರಕಾರವೇ ತೆರವು ಮಾಡಲು ಆಯುಕ್ತರು ಆದೇಶ ನೀಡಿರಬಹುದು. ಎಲ್ಲರಿಗೂ ಒಂದೇ ರೀತಿಯ ಕಾನೂನು ಪಾಲಿಸುತ್ತಾರಾ? ಈ ಹಿಂದೆ ನಗರದಲ್ಲಿ ಅಳವಡಿಸಿದ್ದ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಕಟೌಟ್‌ಗಳು ಎಷ್ಟು ದಿನ ರಾರಾಜಿಸಿದವು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದಸ್ಯರೇ ಅನೇಕ ಸಮಸ್ಯೆಗಳನ್ನು ಗಮನಕ್ಕೂ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದರು.
ಹಿಂದೂಗಳ, ಜನರ ಮನಸ್ಸಿಗೆ ಘಾಸಿ ಮಾಡುವಂತಹ ಕ್ರಮ ತೆಗೆದುಕೊಳ್ಳುತ್ತಾರೆ. ಆಯುಕ್ತರು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಘೋಷಣೆಗಳು ಮುಗಿಲು ಮುಟ್ಟಿದವು. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರಂಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಆ ನಂತರ ಪರಿಸ್ಥಿತಿ ತಹಬದಿಗೆ ಬಂತು.
ಆಯುಕ್ತೆ ರೇಣುಕಾ ಅವರು ಘಟನೆಗೆ ಕ್ಷಮೆಯಾಚಿಸಿದರು. ಆ ಬಳಿಕ ತೆರವುಗೊಳಿಸದಂತೆ ಸೂಚನೆ ನೀಡಲಾಗುವುದು ಎಂದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳಾದ ಎಸ್.ಟಿ.ವೀರೇಶ್, ಅಜಯ್ ಕುಮಾರ್, ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯರಾದ ಕೆ.ಎಂ.ವೀರೇಶ್, ರಾಕೇಶ್ ಜಾಧವ್, ಆರೈಕೆ ಆಸ್ಪತ್ರೆಯ ಮುಖ್ಯಸ್ಥರೂ ಆದ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರವಿಕುಮಾರ್, ಹಿಂದೂ ಸಂಘಟನೆ ಮುಖಂಡರಾದ ಸತೀಶ್ ಪೂಜಾರಿ, ಗುರು ಜೊಳ್ಳಿ, ಸುರೇಶ್ ಗಂಡಗಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಅನಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಯುವ ಮುಖಂಡರಾದ ಶಿವನಗೌಡ ಪಾಟೀಲ್, ಹೆಚ್.ಪಿ.ವಿಶ್ವಾಸ್, ಲೋಕಿಕೆರೆ ನಾಗರಾಜ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications