ಬಾಲ್ಯದ ಕಷ್ಟದ ದಿನಗಳನ್ನು ನೆನೆದ ದಾವಣಗೆರೆ ಜಿಲ್ಲಾಧಿಕಾರಿ
ದಾವಣಗೆರೆ, ಜನವರಿ 09: ಬಾಲ್ಯದಲ್ಲಿ ತಾನು ಅನುಭವಿಸಿದ ಬಡತನ ಹಾಗೂ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ.
Recommended Video
ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ನನ್ನ ತಂದೆ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ, ನಮಗೆ ಕಿತ್ತು ತಿನ್ನುವ ಬಡತನ. ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ನನ್ನ ತಾಯಿಗೆ ಸಂಬಂಧಪಟ್ಟ ಅಧಿಕಾರಿಗಳು ಅಲೆದಾಡಿಸಿದರು.
ಕೊನೆಗೆ ನನ್ನ ತಾಯಿ 25 ರುಪಾಯಿ ವಿಧವಾ ವೇತನ ಪಡೆಯಲು ನೂರು ರುಪಾಯಿಗಳನ್ನು ಲಂಚವಾಗಿ ನೀಡಿದ ಮೇಲೆ ನನ್ನ ತಾಯಿಗೆ ವಿಧವಾ ವೇತನದ ಆದೇಶ ಪತ್ರವನ್ನು ಸಿಗುವಂತಾಯಿತು ಎಂದರು.

ಇದನ್ನೆಲ್ಲ ಗಮನಿಸಿದ ನನಗೆ ನನ್ನ ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲ್ಪ ಮಾಡಿದೆ. ಆಗಿನಿಂದಲೇ ಕಷ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ಇಂದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ ಎಂದುನ ಅನುಭವ ಹಂಚಿಕೊಂಡರು.
ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಯಾದ ತಕ್ಷಣ "ಪಿಂಚಣಿ ಅದಾಲತ್ ಕಾರ್ಯಕ್ರಮ"ವನ್ನು ಜಾರಿಗೆ ತಂದಿದ್ದೇನೆ ಎಂದರು.
ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆ ಬಾಗಿಲಿಗೆ ಬರಬೇಕು ಎಂಬುದು. ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸುವುದಾಗಿದೆ.
ಈ ನನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಚಾಚೂ ತಪ್ಪದೆ ನಿರ್ವಹಿಸಬೇಕೆಂದು ಸೂಚಿಸಿದ್ದೇನೆಂದು ದಾವಣಗೆರೆ ಜಿಲ್ಲಾಧಿಕಾರಿ ಶ್ರೀ ಮಹಾಂತೇಶ ಬೀಳಗಿ ಹೇಳಿದರು.












Click it and Unblock the Notifications