ದಾವಣಗೆರೆಯಲ್ಲಿ ಸಂಚಾರಿ ಪೊಲೀಸರ ವಿರುದ್ಧ ಆಟೋ ಚಾಲಕರ ಕೇಸ್!
ದಾವಣಗೆರೆ, ಜೂ11: ಪೊಲೀಸ್ ಸಿಬ್ಬಂದಿ ತಪ್ಪು ಮಾಡಿದ್ದರೆ ಖಂಡಿತವಾಗಿಯೂ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಸಂಶಯವೇ ಬೇಡ. ಸೂಕ್ತ ದಾಖಲೆಗಳಿದ್ದರೆ ಶಿಕ್ಷೆ ಆಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆಟೋ ಚಾಲಕರಿಂದ ಸಂಚಾರಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಮಾಮೂಲಿ ಪಡೆದಿರುವುದು ಹಾಗೂ ಕಾರಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಲೀಕನ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಿವೈಎಸ್ಪಿ ಅವರು ತನಿಖೆ ನಡೆಸುತ್ತಿದ್ದಾರೆ. ಆರೋಪ ಸಾಬೀತಾದರೆ ಕ್ರಮ ಜರುಗಿಸುತ್ತೇವೆ ಎಂದು ಮಾಹಿತಿ ನೀಡಿದರು.
ಇಂಥ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಆಟೋ ಚಾಲಕರಿಂದ ಪೊಲೀಸ್ ಸಿಬ್ಬಂದಿಗೆ ಮಾಮೂಲಿ ಹಣ ಬಂದಿದೆಯಾ ಇಲ್ಲವೇ ಚೀಟಿ ಮಾಡಿಕೊಂಡಿದ್ದ ಹಣ ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಾಕಲಾಗಿದೆಯಾ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುವುದು. ಬೇರೆ ಬೇರೆ ವಿಚಾರಗಳೂ ಕೇಳಿ ಬರುತ್ತಿವೆ. ಆಟೋ ಚಾಲಕರು ನಾವು ಒಂದು ಸಂಘ ಮಾಡಿಕೊಂಡಿದ್ದೇವೆ. ತಿಂಗಳು ಚೀಟಿ ಎನ್ನುವ ರೀತಿಯಲ್ಲಿ ಮಾಡಿಕೊಂಡಿದ್ದೇವೆ, ಸೂಕ್ತ ದಾಖಲಾತಿಗಳಿವೆ. ಆ ಹಣವನ್ನು ನೀಡಿದ್ದೇವೆ ಎನ್ನುತ್ತಿದ್ದರೂ, ಈ ಬಗ್ಗೆ ಖಚಿತತೆ ಇಲ್ಲ ಎಂದು ತಿಳಿಸಿದರು.

ಆರೋಪ ಮಾಡುವ ಬದಲು ತನಿಖೆಗೆ ಸಹಕರಿಸಲಿ: ಎಸ್ಪಿ
ಕೇಸ್ ಕೊಟ್ಟ ಮೇಲೆ ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಪೊಲೀಸರು ಯಾರೂ ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ಬೆದರಿಕೆ ಹಾಕಿಲ್ಲ. ಯಾವುದೇ ಕ್ರಿಮಿನಲ್ ಕೇಸ್ ವಾಪಸ್ ಪಡೆಯಲು ಕಾನೂನನಲ್ಲಿ ಆಗದು. ಸಿವಿಲ್ ಕೇಸ್ ನಲ್ಲಿ ಮಾತ್ರ ವಾಪಸ್ ಪಡೆಯಬಹುದು. ತನಿಖೆ ಮಾಡಿದ ಮೇಲೆ ನಿಜಾನಾ ಅಥವಾ ಸುಳ್ಳಾ ಎಂಬುದು ಗೊತ್ತಾಗುತ್ತದೆ. ವಿನಾಕಾರಣ ಏನೇನೋ ಆರೋಪ ಮಾಡುವ ಬದಲು ತನಿಖೆಗೆ ಸಹಕರಿಸಲಿ. ದಾಖಲಾತಿಗಳು ಇದ್ದರೆ ಕೊಡಲಿ. ತಪ್ಪು ಮಾಡಿದ್ದು ಸಾಬೀತಾದರೆ ಸಹಿಸುವ ಮತ್ತು ರಕ್ಷಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಹೇಳಿದರು.
ಕಾರಿನ ಮಾಲೀಕರು ದೂರು ನೀಡಲಿ
ಇನ್ನು ಕಾರು ಕಳವು ಮತ್ತು ಹಲ್ಲೆ ಪ್ರಕರಣ ಸಂಬಂಧವೂ ತನಿಖೆ ನಡೆಯುತ್ತಿದೆ. ಕಾರಿನ ಮಾಲೀಕರು ತನ್ನ ಕಾರು ಕಳೆದು ಹೋಗಿದೆ ಎಂಬ ಬಗ್ಗೆ ದೂರುಕೊಡಬೇಕು. ನಾವು ಸುಮೊಟೋ ಕೇಸ್ ದಾಖಲಿಸಲು ಬರುವುದಿಲ್ಲ. ಕಳೆದ ಮೇ 18ರಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನನ್ನ ಕಾರನ್ನು ಪರಮೇಶ್ ಎನ್ನುವವನಿಗೆ ನೀಡಿದ್ದೆ. ಲೋನ್ 10 ಲಕ್ಷ ರೂಪಾಯಿ ಪಡೆದಿದ್ದೆ. ಈ ಹಣ ಪಾವತಿ ಮಾಡಲು ಆಗದ ಕಾರಣ ಕಾರು ಕೊಟ್ಟಿದ್ದೇನೆ ಎಂದು ಗಿರೀಶ್ ಅವರೇ ದೂರು ನೀಡಿದ್ದಾರೆ. ಆದ್ರೆ, ವಾಪಸ್ ಕೊಟ್ಟಿಲ್ಲ ಎಂಬುದು ಅವರ ಆರೋಪ ಆಗಿತ್ತು. ಗಿರೀಶ್ ಅವರಿಗೆ ಕಾರು ವಾಪಸ್ ಕೊಡಿಸಲು ವಿದ್ಯಾನಗರ ಪೊಲೀಸರು ಮಾಡಿದ್ದಾರೆ ಎಂದು ತಿಳಿಸಿದರು.

ವಿದೇಶಕ್ಕೆ ಹೋಗಲು ಯತ್ನಿಸಿದ್ದ
ಹರಿಹರದಲ್ಲಿ ಮರಳುಗಾರಿಕೆ ದಂಧೆಯ ಸೂತ್ರಧಾರ ಇಮ್ರಾನ್ ಸಿದ್ಧಿಕಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ. ಆದ್ರೆ, ಆಗಿಲ್ಲ. ಮುಂದಿನ ವಿಚಾರಣೆ ನಡೆಸದಂತೆ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿರುವ ಕಾರಣದಿಂದ ತನಿಖೆ ಸದ್ಯಕ್ಕೆ ನಿಂತಿದೆ. ನಾವು ಕೂಡ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಿದ್ದೇವೆ. ಇದು ತೆರವಾದ ಬಳಿಕ ಮತ್ತೆ ತನಿಖೆ ನಡೆಸುತ್ತೇವೆ. ದೇಶ ಬಿಟ್ಟು ಹೋಗಲು ವಿಮಾನ ನಿಲ್ದಾಣಕ್ಕೆ ಹೋದಾಗ ಆತನನ್ನ ತಡೆಯಲಾಗಿದೆ. ನಾವು ಸಹ ಎಲ್ ಒ ಸಿಯನ್ನು ಏರ್ ಪೋರ್ಟ್ ನವರಿಗೆ ನೀಡಿದ್ದೇವೆ. ಪಾಸ್ ಪೋರ್ಟ್, ವೀಸಾ ಜಫ್ತಿ ಮಾಡಿಲ್ಲ. ನಾವು ಯಾವುದೇ ಕ್ರಮ ಕೈಗೊಳ್ಳಬೇಕಾದರೆ ತಡೆಯಾಜ್ಞೆ ತೆರವಾಗಲೇ ಬೇಕು ಎಂದು ಹೇಳಿದರು.












Click it and Unblock the Notifications