ಖಾಲಿ ನಿವೇಶನಗಳ ಮಾಲೀಕರಿಗೆ ಪಾಲಿಕೆಯಿಂದ ಮಹತ್ವದ ಮಾಹಿತಿ
ದಾವಣಗೆರೆ, ಸೆಪ್ಟೆಂಬರ್ 8: ನಗರ ಪ್ರದೇಶಗಳಲ್ಲಿ ಖಾಲಿ ನಿವೇಶಗಳು ಇದ್ರೆ, ಸ್ಥಳೀಯರು ಅಲ್ಲೇ ಕಸ ಬಿಸಾಡಿ ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ಪಾಲಿಕೆ ವಾಹನಗಳು ಬಂದರೂ ಕೂಡ ಅದರಲ್ಲಿ ಹಾಕದೇ ಕಸವನ್ನು ಎಲ್ಲೆಂದರಲ್ಲಿ ಚೆಲ್ಲುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆ ದಾವಣಗೆರೆಯಲ್ಲಿ ಮಹಾನಗರ ಪಾಲಿಕೆಯೂ ಖಾಲಿ ನಿವೇಶನಗಳ ಮಾಲೀಕರಿಗೆ ಖಡಕ್ ಸೂಚನೆಯೊಂದನ್ನು ನೀಡಿದೆ.
ಹೌದು.. ನಗರ ಪ್ರದೇಶಗಳಲ್ಲಿ ಬೆಳಗ್ಗೆಯೇ ಕಸ ಹಾಕಿಸಿಕೊಂಡು ಹೋಗಲು ವಾಹನಗಳು ಬರುತ್ತವೆ. ಆದರೆ, ತುಂಬಾ ಮಂದಿ ಅವುಗಳಲ್ಲಿ ಹಾಕದೇ ತಮಗೆ ಇಷ್ಟ ಬಂದ ಸ್ಥಳಗಳಲ್ಲಿ ಕಸ ಎಸೆದು ಹೋಗುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಅದರಲ್ಲೂ ಖಾಲಿ ನಿವೇಶನಗಳ ಬಳಿಯೇ ಹೆಚ್ಚು ಮಂದು ಕಸ ಎಸೆದು ಹೋಗುತ್ತಿದ್ದು, ಇದರಿಂದ ಅಕ್ಕಪಕ್ಕದಲ್ಲಿನ ನಿವಾಸಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಹೀಗೆ ಮಾಡಿದವರ ವಿರುದ್ಧ ದಂಡ ವಿಧಿಸಿದರೂ ಕೂಡ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ.

ಇನ್ನೂ ಕೆಲ ಮನೆ ಮಾಲೀಕರು ಈ ಬಗ್ಗೆ ತಲೆನೇ ಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳ ಮಾಲೀಕರು ಸಾರ್ವಜನಿಕರಿಗೆ ಕಸ ಹಾಕಲು ಅವಕಾಶ ಮಾಡಿದ್ದು, ಅನುಪಯುಕ್ತ ಗಿಡ ಗಂಟೆಗಳು ಬೆಳೆದು ನೆರೆ ಹೊರೆಯವರ ಆರೋಗ್ಯಕ್ಕೆ ಸಮಸ್ಯೆ ಆಗುತ್ತಿದೆ. ಈ ಹಿನ್ನೆಲೆ ಖಾಲಿ ನಿವೇಶನಗಳ ಮಾಲೀಕರು ಕಾಂಪೌಂಡ್, ತಡೆಗೋಡೆಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದೆ.
ಖಾಲಿ ನಿವೇಶನಗಳನ್ನು ಈಗಲೇ ಸ್ವಚ್ಛಗೊಳಿಸಿ ಯಾವುದೇ ಅನಧಿಕೃತ ವ್ಯಕ್ತಿಗಳು ಹಾಗೂ ಬಿಡಾಡಿ ಪ್ರಾಣಿಗಳ ಪ್ರವೇಶಕ್ಕೆ ಅವಕಾಶ ಇಲ್ಲದಂತೆ 30 ದಿನಗಳೊಳಗೆ 6 ಅಡಿ ಎತ್ತರದ ಕಾಂಪೌಂಡ್, ತಡೆಗೋಡೆ ನಿರ್ಮಾಣ ಮಾಡಿಸಿಕೊಳ್ಳಬೇಕು. ಒಂದು ವೇಳೆ ಮಾಲೀಕರು ಈ ನಿಯಮವನ್ನು ಉಲ್ಲಂಘನೆ ಮಾಡಿದರೆ, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಮಾಲೀಕರು ಖಾಲಿ ನಿವೇಶನಗಳು ಶುದ್ಧ ಇಟ್ಟುಕೊಳ್ಳಬೇಕು. ಈ ಮೂಲಕ ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದು ಹೇಗಿದೆ ಅಂದ್ರೆ, ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು ಎಂಬ ಗಾದೆ ಮಾತಿನಂತಿದೆ. ನಿವೇಶನಗಳ ಮಾಲೀಕರು ಈಗಲಾದರೂ ಎಚ್ಚೆತ್ತುಕೊಂಡು ತಮ್ಮ ನಿವೇಶನಗಳನ್ನ ಸ್ಚಚ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಪಾಲಿಕೆ ಕೈಗೊಳ್ಳುವ ಕ್ರಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ.
ಇದು ದಾವಣಗೆರೆ ಜಿಲ್ಲೆಯಲ್ಲಿ ಮಾತ್ರವಲ್ಲ, ವಿವಿಧ ಬೃಹತ್ ನಗರಗಳಲ್ಲೂ ಕೂಡ ನಡೆಯುತ್ತಿದ್ದು, ಕಡಿವಾಣ ಹಾಕುವ ಕೆಲಸಗಳು ಸಹ ಮುಂದುವರೆದಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದ್ದರೂ ಸಹ ಕ್ಯಾರೆ ಅನ್ನದೇ ಕೆಲವರು ಕಸವನ್ನು ಎಲ್ಲೆಂದರಲ್ಲೇ ಎಸೆಯುತ್ತಿರುವುದು ಬೆಳಕಿಗೆ ಬರುತ್ತಿವೆ. ಇದನ್ನು ತಡೆಗಟ್ಟಲು ಪಾಲಿಕೆ ಮಾರ್ಷಲ್‌ಗಳನ್ನು ಸಹ ನೇಮಕ ಮಾಡಿದೆ. ಆದರೂ ಅವರ ಕಣ್ತಪ್ಪಿಸಿ ಕೆಲವರು ತಾವು ಆಡಿದ್ದೇ ಆಟ ಎಂಬಂತೆ ಕಸವನ್ನು ಎಲ್ಲೆಂದರಲ್ಲೇ ಎಸೆಯುತ್ತಿದ್ದಾರೆ.












Click it and Unblock the Notifications