Davanagere Benne Dose: ದಾವಣಗೆರೆ ಬೆಣ್ಣೆ ದೋಸೆಗೆ GI ಟ್ಯಾಗ್ ನೀಡಲು ನಿರಾಕರಣೆ: ಕಾರಣ ಏನು?
ಒಂದೊಂದು ಜಿಲ್ಲೆಗಳು ಒಂದೊಂದು ವಿಶೇಷತೆಯನ್ನು ಒಳಗೊಂಡಿವೆ. ಅದೇ ರೀತಿ ದಾವಣಗೆರೆ ಅಂದರೆ ಮೊದಲು ನೆನಪಾಗೋದೆ ಬೆಣ್ಣೆದೋಸೆ. ಇಲ್ಲಿನ ದೋಸೆ ರಾಜ್ಯ ಅಲ್ಲದೆ, ಇಡೀ ದೇಶಾದ್ಯಂತ ಪ್ರಸಿದ್ಧಿಯಾಗಿದೆ. ಅಲ್ಲದೆ, ಹೊರಗಿನಿಂದ ಯಾರೇ ಈ ಜಿಲ್ಲೆಗೆ ಎಂಟ್ರಿ ಕೊಟ್ಟರೂ, ಇಲ್ಲಿನ ಬೆಣ್ಣೆದೋಸೆ ಸವಿಯದೇ ವಾಪಾಸ್ ಆಗುವುದಿಲ್ಲ. ಅಷ್ಟರ ಮಟ್ಟಿಗೆ ಪ್ರಖಾತಿಯಾಗಿದ್ದರೂ, GI ಟ್ಯಾಗ್ ನಿಡಲು ಕೇಂದ್ರ ನಿರಾಕರಿಸಿದೆ.
ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ದಾವಣಗೆರೆ ಬೆಣ್ಣೆ ದೋಸೆಗೆ ಕೇಂದ್ರ ಸರ್ಕಾರ ಜಿಐ ಟ್ಯಾಗ್ ನೀಡಲು ನಿರಾಕರಿಸಿದ್ದೇಕೆ? ಹೀಗಂದರೇನು? ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಜನಪ್ರಿಯ ದೋಸೆಗಳ ಪೈಕಿ ದಾವಣಗೆರೆ ಬೆಣ್ಣೆ ದೋಸೆ ಕೂಡ ತುಂಬಾ ಪ್ರಸಿದ್ಧಿ ಪಡೆಸಿದೆ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಬೆಣ್ಣೆ ದೋಸೆಗೆ ಇದೀಗ ಭೌಗೋಳಿಕ ಸೂಚಕ ಟ್ಯಾಗ್ ನೀಡಲು ನಿರಾಕರಿಸಿರುವುದೇ ಅಸಮಾಧನದ ಸಂಗತಿಯಾಗಿದೆ.

ಬೆಣ್ಣೆದೋಸೆ ಪ್ರಸಿದ್ಧಿಯಿಂದ ದಾವಣಗೆರೆ ಬೆಣ್ಣೆನಗರಿ ಅಂತಲೇ ಹೆಸರು ಪಡೆದಿದೆ. ಈ ದೋಸೆ ದಾವಣಗೆರೆಯಲ್ಲಿ ಹುಟ್ಟಿಕೊಂಡಿದ್ದರೂ, ಇದರ ವಿಶೇಷ ವಿಶೇಚ ದೋಸೆಯ ಹೋಟೆಲ್‌ಗಳು ಇದೀಗ ರಾಜ್ಯ ಅಲ್ಲದೆ, ದೇಶದಾದ್ಯಂತ ಆರಂಭವಾಗಿವೆ. ಆದರೆ, ಈ ಬೆಣ್ಣೆ ದೋಸೆಗೆ ಭೌಗೋಳಿಕ ಸೂಚಕ (Geographical Indication) ಟ್ಯಾಗ್ ನೀಡಲು ಸಾಧ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.
ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸದನದಲ್ಲಿ ಕೋರಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್, ದಾವಣಗೆರೆ ಬೆಣ್ಣೆದೋಸೆ ಹೆಚ್ಚು ಜನಪ್ರಿಯ ಆಗಿದೆ. ಆದರೆ, ಕರ್ನಾಟಕ, ದಾವಣಗೆರೆ ಹೊರಗಿನ ಪ್ರದೇಶಗಳನ್ನು ಒಳಗೊಂಡಂತೆ ಇತರೆ ಪ್ರದೇಶದಲ್ಲೂ ವ್ಯಾಪಕವಾಗಿ ಸಿಗುವ ಈ ದೋಸೆ ಸಾಮಾನ್ಯ ವಸ್ತುವಾಗಿದೆ ಎಂದು ಅಸಡ್ಡೆ ಉತ್ತರವನ್ನು ನೀಡಿದ್ದಾರೆ.
ಜಿಐ ಟ್ಯಾಗ್‌ಗೆ ಅಗತ್ಯ ಇರುವ ವಿಶಿಷ್ಟತೆಯು ಕಡಿಮೆಯಾಗಿದೆ, ಯಾಕೆಂದರೆ ಈ ದೋಸೆಯನ್ನು ಇದೀಗ ದೇಶಾದ್ಯಂತ ತಯಾರು ಮಾಡಲಾಗುತ್ತಿದೆ. ಆದ್ದರಿಂದ ಅದರ ವಿಶಿಷ್ಟ ಪ್ರಾದೇಶಿಕ ಗುರುತನ್ನು ಕಳೆದುಕೊಳ್ಳುತ್ತದೆ. ಇನ್ನು ಇದು GI ಟ್ಯಾಗ್‌ಗೆ ಅರ್ಹತೆ ಪಡೆಯಲು, ನಿರ್ದಿಷ್ಟ ಪ್ರದೇಶಕ್ಕೆ ವಿಶಿಷ್ಟವಾಗಿರಬೇಕು ಎಂದು ಹೇಳಿದ್ದಾರೆ.
ನಿರ್ದಿಷ್ಟ ಉತ್ಪಾದನಾ ಪ್ರಕ್ರಿಯೆಗಳು, ಹವಾಮಾನ ಪರಿಸ್ಥಿತಿಗಳು ಮತ್ತು ಸ್ಥಳೀಯ ಪದಾರ್ಥಗಳನ್ನು ಹೊಂದಿರುತ್ತದೆ. ಆ ಉತ್ಪನ್ನ ಪುರಾತನ ದಾಖಲಿತ ಇತಿಹಾಸವನ್ನು ಹೊಂದಿರಬೇಕು. ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರಬೇಕು ಎಂದು ಸಚಿವರು ತಿಳಿಸಿದ್ದಾರೆ.
ದಾವಣಗೆರೆ ಬೆಣ್ಣೆ ದೋಸೆಯನ್ನು ಭೌಗೋಳಿಕ ಸೂಚಕವಾಗಿ ನೋಂದಾಯಿಸಲು ಭೌಗೋಳಿಕ ಸೂಚನೆಗಳ ನೋಂದಣಿ ಕಚೇರಿಗೆ ಅರ್ಜಿ ಬಂದಿಲ್ಲ. ನೋಂದಣಿ ಸ್ವಯಂಪ್ರೇರಿತ ಕಾರ್ಯವಲ್ಲ. ಆದರೆ, GI ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ಕಾನೂನು ಪ್ರಕ್ರಿಯೆ ಆಗಿದೆ. ಉತ್ಪಾದಕರ ಸಂಘ ಅಥವಾ ಉತ್ಪನ್ನವನ್ನು ತಯಾರಿಸುವ ಸಂಸ್ಥೆಯಿಂದ ಭೌಗೋಳಿಕ ಸೂಚನೆಗಳ ರಿಜಿಸ್ಟ್ರಾರ್‌ಗೆ ಅರ್ಜಿಯನ್ನು ಸಲ್ಲಿಸಬೇಕೆಂದು ತಿಳಿಸಿದರು.
ದಾವಣಗೆರೆ ಬೆಣ್ಣೆ ದೋಸೆಯ ಹಿಂದಿರೋದು ಚೆನ್ನಮ್ಮ ಎಂಬ ಮಹಿಳೆ. ಬೆಳಗಾವಿಯ ರಾಮದುರ್ಗ ತಾಲೂಕಿನಿಂದ ಕುಟುಂಬವೊಂದು ದಾವಣಗೆರೆಗೆ ವಲಸೆ ಬಂದಿತ್ತು. ಈ ಕುಟುಂಬದ ಚೆನ್ನಮ್ಮ ಎಂಬ ಮಹಿಳೆ ತನ್ನ ಮಕ್ಕಳ ಜೊತೆ ದೋಸೆ, ಚಟ್ನಿ, ಆಲೂಗಡ್ಡೆ ಪಲ್ಯ ತಯಾರಿ ಮಾರಾಟ ಮಾಡಲು ಆರಂಭಿಸಿದರು. ದಾವಣಗೆರೆಯ ವಸಂತ ಟಾಕೀಸ್ ಬಳಿಯ ಸಾವಳಗಿ ನಾಟಕ ಥಿಯೇಟರ್ ಮುಂದೆ ಚೆನ್ನಮ್ಮ ಅವರ ಪುಟ್ಟ ಉಪಾಹಾರ ಗೃಹದಲ್ಲಿ ದೋಸೆ ಮಾಡುತ್ತಿದ್ದರು.
ಮೊದಲು ಚೆನ್ನಮ್ಮ ರಾಗಿ ಹಿಟ್ಟಿನ ದೋಸೆ ಮಾಡುತ್ತಿದ್ದರು. 1938ರ ವೇಳಗೆ ಚೆನ್ನಮ್ಮ ಅವರ ಮಕ್ಕಳಾದ ಶಾಂತಪ್ಪ ಮತ್ತು ಮಹದೇವಪ್ಪ ಅವರು ಅಕ್ಕಿ ಹಿಟ್ಟಿನ ದೋಸೆ ಮಾಡಲು ಆರಂಭಿಸಿದರು. ಬೆಣ್ಣೆ ಬೆರೆಸಿದ ಬಿಸಿ ಬಿಸಿ ದೋಸೆಗೆ ದಾಲ್ ಕೊಡಲಾಗುತ್ತಿತ್ತು. ಮುಂದೆ ಇದೇ ಬೆಣ್ಣೆ ದೋಸೆ ಪ್ರಸಿದ್ಧಿಯಾಯಿತು. ದಿನ ಕಳೆದಂತೆ ಶಾಂತಪ್ಪ ಅವರು 1944ರಲ್ಲಿ ಶಾಂತಪ್ಪ ದೋಸೆ ಹೋಟೆಲ್ ಎಂಬ ತಮ್ಮದೇ ಆದ ಉಪಾಹಾರ ಗೃಹವನ್ನು ತೆರೆದರು. ಇದೇ ದಾವಣಗೆರೆಯ ಅತ್ಯಂತ ಹಳೆಯ ಬೆಣ್ಣೆ ದೋಸೆ ಹೋಟೆಲ್ ಆಗಿದೆ. ಒಟ್ಟಿನಲ್ಲಿ ಇದೀಗ ದಾವಣಗೆರೆ ಬೆಣ್ಣೆ ದೋಸೆಗೂ ಜಿಐ ಟ್ಯಾಗ್ ನೀಡದಿರುವುದು ಅಸಮಾಧಾನಕರ ಸಂಗತಿಯಾಗಿದೆ.












Click it and Unblock the Notifications