ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಠೇವಣಿ ಕಳೆದುಕೊಳ್ಳುತ್ತಾರೆ-ಹೀಗೆ ಭವಿಷ್ಯ ನುಡಿದಿದ್ದು ಯಾರು ಮತ್ತು ಯಾಕೆ?
ದಾವಣಗೆರೆ, ಏಪ್ರಿಲ್, 06: ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುವುದು ಹೆಚ್ಚಾಗಿಬಿಟ್ಟಿದೆ. ಹಾಗೆಯೇ ಇದೀಗ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದಾವಣಗೆರೆಯಲ್ಲಿ ರಾಧಾಮೋಹನ್ ಅಗರವಾಲ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಠೇವಣಿ ಕಳೆದುಕೊಳ್ಳುತ್ತಾರೆ. ಮೂರು-ನಾಲ್ಕು ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಗೆಲುವು ಸಾಧಿಸಲ್ಲಿದ್ದಾರೆ. ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾವಣಗೆರೆ ಸೇರಿದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್ ದೇಶದಲ್ಲಿ ಸಂಪೂರ್ಣ ಸರ್ವನಾಶವಾಗಿದೆ. 30 ರಿಂದ 35 ಸ್ಥಾನ ಗೆಲ್ಲಬಹುದು. ನಾವು ಯಾವುದೇ ಗ್ಯಾರೆಂಟಿ ಬಗ್ಗೆ ಹೇಳಲ್ಲ. ಪ್ರಧಾನಿ ನರೇಂದ್ರ ಮೋದಿಯೇ ನಮಗೆ ಗ್ಯಾರೆಂಟಿ. ಇಡೀ ದೇಶದಲ್ಲಿ ಬಿಜೆಪಿ ಅಲೆ ಇದೆ. ಕಾಂಗ್ರೆಸ್‌ನವರಂತೆ ನಾವು ಭಾಷಣ ಮಾಡುತ್ತಾ ಸುತ್ತುವುದಿಲ್ಲ. ನಾವು ಈ ಚುನಾವಣೆ ಬಗ್ಗೆ ವಿಚಾರಿಸಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಆಗುವ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು
ಇನ್ನು ದಾವಣಗೆರೆಯಲ್ಲಿ ಭಿಜೆಪಿ ಭಿನ್ನಮತೀಯರ ಸಭೆಗೆ ಮಾಜಿ ಸಚಿವ ಕರುಣಾಕರ ರೆಡ್ಡಿ ಗೈರು ಹಾಜರಾಗಿದ್ದರು. ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಅವರು, ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಚುನಾವಣೆ ಸಿದ್ಧತೆ ಹಿನ್ನೆಲೆ ಈ ಸಭೆ ಕರೆಯಲಾಗಿದೆ ಎಂದರು.
ಸತತ ಮೂರನೇ ಬಾರಿ ದಾವಣಗೆರೆ ಬಿಜೆಪಿ ನಾಯಕರ ಸಭೆ ನಡೆಸಲಾಗಿದೆ. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ , ಲೋಕಿಕೆರೆ ನಾಗರಾಜ್, ಬಿ.ಜಿ.ಅಜಯ್ ಕುಮಾರ್ ಸೇರಿದಂತೆ ಪ್ರಮುಖರ ಜೊಚೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರು ಪ್ರಚಾರದಲ್ಲಿ ತೊಡಗಿದ್ದಾರೆ. ನಾವು ಯಾವುದೇ ತಾಲೂಕು ಅಧ್ಯಕ್ಷರ ಬದಲಾವಣೆ ಮಾಡಲು ಆಗಲ್ಲ. ನಮ್ಮಲ್ಲಿ ಯಾರು ಕೂಡಾ ಅಭ್ಯರ್ಥಿ ಬಗ್ಗೆ ಅಥವಾ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿಲ್ಲ. ಪ್ರತಿಯೊಬ್ಬರು ಗಾಯಿತ್ರಿ ಸಿದ್ದೇಶ್ವರ ಪರ ಕೆಲಸ ಮಾಡಲಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಎಸ್.ಈಶ್ವರಪ್ಪರ ಕುರಿತು ಮಾತನಾಡಿದ ಅವರು, ಈಶ್ವರಪ್ಪ ಅವರ ಜೊತೆ ಮಾತನಾಡಿದ್ದೇನೆ. ಈಶ್ವರಪ್ಪ ಮೋದಿಜಿಯವರ ಜೊತೆ ಇದ್ದಾರೆ. ಈಶ್ವರಪ್ಪ ಜೊತೆ ಮತ್ತೆ ಮಾತುಕತೆ ಮಾಡುತ್ತೇವೆ. ಒಂದು ರೀತಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಈಶ್ವರಪ್ಪ ಹೋದಲೆಲ್ಲ ಬಿಜೆಪಿ ಸಿದ್ದಾಂತ, ಮೋದಿಯವರ ಬಗ್ಗೆಯೇ ಮಾತನಾಡುತ್ತಾರೆ. ಹೀಗಾಗಿ ಅಧಿಕೃತ ಅಭ್ಯರ್ಥಿ ರಾಘವೇಂದ್ರ ಅವರಿಗೆ ಆ ಎಲ್ಲಾ ವೋಟ್‌ಗಳು ಬೀಳುತ್ತವೆ ಎಂದು ಹೇಳಿದರು.












Click it and Unblock the Notifications