ಅಮಿತ್ ಶಾ ಮಾಯಮಂತ್ರದ ತಂಡ ಇಟ್ಟುಕೊಂಡಿದ್ದಾರಾ?: ಸಿದ್ದರಾಮಯ್ಯ ಕಿಡಿ
ದಾವಣಗೆರೆ, ಡಿಸೆಂಬರ್ 30 : ಬಿಜೆಪಿಯವರು ನಾಟಕ, ಗಿಮಿಕ್ ಮಾಡುವುದನ್ನು ಬಿಡಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದರೂ ಬಿಜೆಪಿ ಗೆಲ್ಲುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಮಾಯ, ಮಂತ್ರ ಮಾಡ್ತಾರಾ. ಅವರೇನೂ ಮಾಯಮಂತ್ರದ ತಂಡ ಇಟ್ಟುಕೊಂಡಿದ್ದಾರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದ ಬಾಪೂಜಿ ಕಾಲೇಜಿನ ಎಂಬಿಎ ಗ್ರೌಂಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮಂತ್ರಿಯಾಗಿರುವ ಕಾರಣಕ್ಕೆ ಆಹ್ವಾನ ನೀಡಿರುವುದಕ್ಕೆ ರಾಜ್ಯಕ್ಕೆ ಬಂದಿದ್ದಾರೆ. ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶಕ್ಕೂ ಅಮಿತ್ ಶಾ ಹೋಗಿಬಂದಿದ್ದರು. ಅಲ್ಲೇನಾಯ್ತು ಎನ್ನುವುದು ಎಲ್ಲರಿಗೂ ಗೊತ್ತಿರ ವಿಚಾರ. ಬಂದಾಕ್ಷಣ ಮೈಸೂರು ಭಾಗದಲ್ಲಿ ಬಿಜೆಪಿಯವರು ಗೆದ್ದು ಬಿಡುತ್ತಾರಾ ಎಂದು ಹೇಳಿದರು.
ಮಹಾದಾಯಿ ಯೋಜನೆ ಸಮಗ್ರ ಯೋಜನಾ ವರದಿಗೆ ಒಪ್ಪಿಗೆ ಪಡೆಯಲು ಎರಡು ವರ್ಷ ಬೇಕಾಯ್ತಾ..? ಇಷ್ಟು ಸಮಯ ಯಾಕೆ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ನಾಟಕಗಳು, ಗಿಮಿಕ್‌ಗಳನ್ನು ಬಿಡಬೇಕು
ಚುನಾವಣೆ ಹತ್ತಿರವಿದೆ ಹಾಗೂ ಜನವರಿ 2 ರಂದು ಕಾಂಗ್ರೆಸ್ ವತಿಯಿಂದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದ ಕಾರಣ ಕಳಸ -ಬಂಡೂರಿ ನಾಲಾ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. 2020ರ ಫೆಬ್ರವರಿ 27ರಂದು ಮಹಾದಾಯಿ ಯೋಜನೆಗೆ ನೊಟಿಫಿಕೇಷನ್ ಆಗಿತ್ತು. ಡಿಪಿಆರ್ ಮಾಡಲು ಇಷ್ಟು ದಿನಗಳು ಯಾಕೆ ಬೇಕಾಗಿತ್ತು. ಈಗ ಡಿಪಿಆರ್ ಮಾಡಲೇಬೇಕಾಗಿತ್ತು. ಹಾಗಾಗಿ ಮಾಡಲಾಗಿದೆ. ಇವರದ್ದೇ ಕೇಂದ್ರದಲ್ಲಿ ಸರ್ಕಾರ ಇತ್ತು. ಗೋವಾದವರಿಗೋಸ್ಕರ ಕೇಂದ್ರ ತಡೆ ಮಾಡಿತ್ತು. ಬಿಜೆಪಿಯವರು ನಾಟಕಗಳು, ಗಿಮಿಕ್‌ಗಳನ್ನು ಬಿಡಬೇಕು. ನಾವು ಸಮಾವೇಶ ಮಾಡಿ ಜನರಿಗೆ ವಾಸ್ತವ ವಿಚಾರ ತಿಳಿಸುತ್ತೇವೆ ಎಂದು ಹೇಳಿದರು.

ಯಾವ್ಯಾವ ಕೆಟಗರಿಯವರಿಗೆ ಎಷ್ಟು ಮೀಸಲಾತಿ ಸ್ಪಷ್ಟತೆ ಇಲ್ಲ
ಇನ್ನು ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಸಿಕ್ಕಿಲ್ಲ. ಯಾವ್ಯಾವ ಕೆಟಗರಿಯವರಿಗೆ ಎಷ್ಟು ಕೊಡುತ್ತೇವೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ವೀರಶೈವ ಲಿಂಗಾಯತ, ಪಂಚಮಸಾಲಿ ಸಮಾಜ, ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಮೀಸಲಾತಿ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ. 3 ಎನಲ್ಲಿದ್ದ ಒಕ್ಕಲಿಗರನ್ನು 2ಸಿಗೆ, 3ಬಿನಲ್ಲಿದ್ದ ಲಿಂಗಾಯತರನ್ನು 2ಡಿ ಕೆಟಗರಿಗೆ ಸೇರಿಸಿ ಮೀಸಲಾತಿ ಪ್ರಮಾಣ ಕೊಡುವುದಾಗಿ ಹೇಳಿದೆ. ಒಕ್ಕಲಿಗ ಸಮುದಾಯದವರಿಗೆ ಮೀಸಲಾತಿ ನೀಡುವುದಕ್ಕೆ ವಿರೋಧ ಇಲ್ಲ. ಎಲ್ಲಿಂದ ತೆಗೆದುಕೊಂಡು ಈ ಸಮಾಜಗಳಿಗೆ ಮೀಸಲಾತಿ ನೀಡುತ್ತೇವೆಂದು ಹೇಳಿಲ್ಲ ಎಂದರು.
ಮೀಸಲಾತಿ ನೀಡುವುದು ಸಂವಿಧಾನಬದ್ಧವಾಗಿ ಆಗಿದೆಯಾ ಇಲ್ಲವೋ ಎಂಬ ಬಗ್ಗೆ ನೋಡಬೇಕಾಗುತ್ತದೆ. ಇಂದಿರಾ ಸಹಾನಿ ಕೇಸ್ ನಲ್ಲಿ ಮೀಸಲಾತಿ ಶೇಕಡಾ 50ರಷ್ಟು ದಾಟಬಾರದು ಎಂಬುದಾಗಿ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. 1992ರಲ್ಲಿ ಸುಪ್ರೀಂಕೋರ್ಟ್ ನ 9 ನ್ಯಾಯಾಧೀಶರ ಪೀಠವೂ ಸ್ಪಷ್ಟವಾಗಿ ಹೇಳಿದೆ. ಕೇಂದ್ರದಲ್ಲಿ ಈಗ ಇರುವುದು 49.5 ರಷ್ಟು ಮಾತ್ರ ಇದೆ. ಇಡಬ್ಲ್ಯೂಎಸ್ ಗೆ ಈಗ ಕೇಂದ್ರ ಶೇಕಡಾ 10ರಷ್ಟು ನೀಡಿದೆ. ಎಸ್ಸಿ, ಎಸ್ಟಿ ವರ್ಗಕ್ಕೆ ಶೇ. 6ರಷ್ಟು ಮೀಸಲಾತಿ ಘೋಷಿಸಲಾಗಿದೆ. ಎಲ್ಲವೂ ಸೇರಿದರೆ 65.5ರಷ್ಟಾಗುತ್ತದೆ. ಆದರೆ, ಈಗ ಇರುವುದು ಯಾರ್ಯಾರಿಗೆ ಎಷ್ಟೆಷ್ಟು ಮೀಸಲಾತಿ ಸಿಗುತ್ತದೆ ಎಂಬುದು. ಇದಕ್ಕೆ ಸಂವಿಧಾನದ ತಿದ್ದುಪಡಿ ಆಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.

ಚುನಾವಣೆ ದೃಷ್ಟಿಯಿಂದಲೇ ರಾಜ್ಯ ಸರ್ಕಾರ ಇವೆಲ್ಲವನ್ನೂ ಮಾಡುತ್ತಿದೆ
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಈ ತಂತ್ರಗಾರಿಕೆ ಮಾಡುತ್ತಿದ್ದಾರೆ. ಪಂಚಮಸಾಲಿಯವರು 3 ಬಿಯಿಂದ 2ಡಿ ಮಾಡಿ ಎಂದು ಕೇಳಿದ್ದರಾ..? ಎಲ್ಲವೂ ರಾಜಕೀಯ ಗಿಮಿಕ್. ನಾಗಮೋಹನ್ ದಾಸ್ ಅವರು 2020ರಲ್ಲಿಯೇ ವರದಿ ನೀಡಿದ್ದರೂ ಯಾಕೆ ಜಾರಿಗೊಳಿಸಿಲ್ಲ. 257 ದಿನಗಳ ಕಾಲದವರೆಗೆ ವಾಲ್ಮೀಕಿ ಸಮಾಜದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಅವರು ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ಹೋರಾಟ ಮಾಡಿದರು. ಆಗಲೇ ಯಾಕೆ ಮಾಡಲಿಲ್ಲ. ಚುನಾವಣೆ ದೃಷ್ಟಿಯಿಂದಲೇ ರಾಜ್ಯ ಸರ್ಕಾರ ಇವೆಲ್ಲವನ್ನೂ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಹೆಲಿಕಾಪ್ಟರ್ ಮೂಲಕ ಸತೀಶ್ ಜಾರಕಿಹೊಳಿ ಜೊತೆ ಆಗಮಿಸಿದ ಸಿದ್ದರಾಮಯ್ಯರನ್ನು ನೋಡಲು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಳ್ಳಾಟ, ನೂಕಾಟ ನಡೆಸಿದರು. ಪೊಲೀಸರು ಸ್ಥಳದಲ್ಲಿದ್ದರೂ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ತಳ್ಳಾಟದ ನಡುವೆಯೂ ಕಾರು ಹತ್ತಿದ ಸಿದ್ದರಾಮಯ್ಯ ಅವರು ಬಳಿಕ ಮಾಧ್ಯಮದವರ ಮನವಿ ಮೇರೆಗೆ ಕಾರಿನಿಂದ
ಕೆಳಗೆ ಇಳಿದು ಮಾತನಾಡಿದರು. ಸಿದ್ದರಾಮಯ್ಯರು ಆಗಮಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜೈ, ಚಾಮುಂಡೇಶ್ವರಿ ಪುತ್ರ ಸಿದ್ದರಾಮಯ್ಯರಿಗೆ ಜೈ ಎಂಬ ಜೈಕಾರ ಹಾಕಿದ ಅಭಿಮಾನಿಗಳು, ಸಿದ್ದರಾಮಯ್ಯರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.












Click it and Unblock the Notifications