ಬಿಜೆಪಿ ತೆಕ್ಕೆಗೆ ದಾವಣಗೆರೆ ಪಾಲಿಕೆ, ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿಗರು
ದಾವಣಗೆರೆ, ಫೆಬ್ರವರಿ 19: ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಪಾಲಿಕೆ ಸದಸ್ಯ ಬಿ.ಜಿ.ಅಜಯ್ ಕುಮಾರ್ ಮೇಯರ್ ಆಗಿಯೂ, ಸೌಮ್ಯ ನರೇಂದ್ರ ಕುಮಾರ್ ಉಪಮೇಯರ್ ಆಗಿಯೂ ಆಯ್ಕೆಯಾಗಿದ್ದಾರೆ. ಇದರಿಂದ ಪಾಲಿಕೆ ಅಧಿಕಾರ ಬಿಜೆಪಿ ತೆಕ್ಕೆಗೆ ಬಂದಿದೆ.
ಇದರಿಂದ ಕೋಪಗೊಂಡಿರುವ ಕಾಂಗ್ರೆಸ್ ನಾಯಕರು, ಜಿಲ್ಲಾ ಚುನಾವಣಾಧಿಕಾರಿ ವಿ.ಪಿ. ಇಕ್ಕೇರಿ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ನ ಆರು ಮಂದಿ ಎಂಎಲ್ಸಿಗಳು, 19 ಕಾರ್ಪೊರೇಟರ್ಗಳು ಆಗಮಿಸಿದ್ದರು. ಆದರೆ ಕೈ ಪಾಲಿಕೆ ಸದಸ್ಯರಾದ ಶ್ರೀನಿವಾಸ್, ಶ್ವೇತಾ ಶ್ರೀನಿವಾಸ್, ಯಶೋದಾ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಯಿತು. ಇಕ್ಕೇರಿ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡರು ಚುನಾವಣಾ ಪಟ್ಟಿಯಲ್ಲಿ ಸ್ಥಳೀಯರಲ್ಲದ ಎಂಎಲ್ಸಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದರು.

ದಾವಣಗೆರೆ; ಕೆಎಸ್ಆರ್‌ಟಿಸಿಯಿಂದ ಶಿರಡಿ, ಶ್ರೀಶೈಲಕ್ಕೆ ಹೊಸ ಬಸ್
ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆ ನಡೆಸಿದ್ದು, ಮೇಲ್ನೋಟಕ್ಕೆ ಚುನಾವಣೆಗೆ ಮಾತ್ರ ಸೇರಿಸಲಾಗಿದೆ ಎಂಬುದು ಸ್ಪಷ್ಟವಾದರೂ ಮತದಾನಕ್ಕೆ ಅವಕಾಶ ಕೊಟ್ಟಿರುವುದು ಕಾನೂನು ಬಾಹಿರ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಶಾಮನೂರು ಶಿವಶಂಕರಪ್ಪ ಮಾತನಾಡಿ, "ಕಾಂಗ್ರೆಸ್ನ ಮೂವರು ಸದಸ್ಯರನ್ನು ಬಿಜೆಪಿ ಹಣ ಕೊಟ್ಟು ಖರೀದಿಸಿದೆ. ಈ ಮೂಲಕ ವಾಮಮಾರ್ಗದಿಂದ ಅಧಿಕಾರಕ್ಕೇರಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications