ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯವರಿಗೆ ಮಾನವೀಯತೆ ಇದೆಯಾ?, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಪ್ರಶ್ನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್‌, 23: ಬಿಜೆಪಿಯವರಿಗೆ ಸಂಸ್ಕೃತಿ ಮಾನವೀಯತೆ ಇದೆಯೇ? ಚಾಮರಾಜನಗರದಲ್ಲಿ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ವಸತಿ ಸಚಿವ ವಿ.‌ ಸೋಮಣ್ಣ ಮಂತ್ರಿ ಸ್ಥಾನವನ್ನು ತ್ಯಜಿಸಬೇಕು. ಅವರು ಸಚಿವರಾಗಲು ನಾಲಾಯಕ್. ಜನರ ಸಂಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ತಾಳ್ಮೆ, ಸಹನೆ ಇರದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬಾಪೂಜಿ ಎಂಬಿಎ ಗ್ರೌಂಡ್‌ನಲ್ಲಿ ಮಾತನಾಡಿದ ಅವರು, ''ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆ ಮೇಲೆ ಕೈಮಾಡಿರುವ ಸಚಿವ ವಿ ಸೋಮಣ್ಣನ ನಡೆ ಸರಿಯಲ್ಲ. ಕೆಲವೊಮ್ಮೆ ಕಠಿಣ ಶಬ್ದಗಳಲ್ಲಿ ಮಾತನಾಡುತ್ತಾರೆ. ಅಧಿಕಾರದಲ್ಲಿ ಇದ್ದವರಿಗೆ ತಾಳ್ಮೆ ಇರಬೇಕು. ಬಡವರು, ದಲಿತರು, ಹಿಂದುಳಿದವರ ಮೇಲೆ ಹಲ್ಲೆ ನಡೆಸಲು ಅಧಿಕಾರ ಕೊಡಲಾಗಿದೆಯಾ? ಮಹಿಳೆ ಮೇಲೆ ದರ್ಪ ತೋರಿರುವ ವಸತಿ ಸಚಿವ ವಿ. ಸೋಮಣ್ಣರ ಸಂಸ್ಕೃತಿ ಈ ಮೂಲಕ ಬಟಾಬಯಲಾಗಿದೆ. ಹೆಣ್ಣುಮಗಳಿಗೆ ಮಂತ್ರಿ ಹೊಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ನಾವು ಸಹಿಸುವುದಿಲ್ಲ. ಇಂತಹವರು ಮಂತ್ರಿ ಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಇರಬಾರದು. ರಾಜೀನಾಮೆ ಕೊಟ್ಟು ಹೊರಗೆ ಹೋಗಲಿ'' ಎಂದು ಗುಡುಗಿದರು.

ಚಾಮರಾಜನಗರ; ರೈತರ ಬಗ್ಗೆ ನಿರ್ಲಕ್ಷ್ಯ, ಸಚಿವ ಸೋಮಣ್ಣನ ವಿರುದ್ಧ ಕ್ರಮಕ್ಕೆ ಪಟ್ಟುಚಾಮರಾಜನಗರ; ರೈತರ ಬಗ್ಗೆ ನಿರ್ಲಕ್ಷ್ಯ, ಸಚಿವ ಸೋಮಣ್ಣನ ವಿರುದ್ಧ ಕ್ರಮಕ್ಕೆ ಪಟ್ಟು

ದೇವನಗರಿಯಲ್ಲಿ ಸಿದ್ದರಾಮಯ್ಯ ಕಿಡಿ

ದೇವನಗರಿಯಲ್ಲಿ ಸಿದ್ದರಾಮಯ್ಯ ಕಿಡಿ

"ಬಿಜೆಪಿಯವರಿಗೆ ಸಂಸ್ಕೃತಿ, ಮಾನವೀಯತೆ ಇಲ್ಲ. ಇನ್ನೊಬ್ಬರನ್ನು ಪ್ರೀತಿ, ಗೌರವದಿಂದ ಕಾಣಬೇಕು. ಮಾನವೀಯತೆ ಇಲ್ಲದವರಿಗೆ ಏನು ಹೇಳಬೇಕು. ಮಾನವೀಯತೆ ಎನ್ನುವುದು ಮೂಲಭೂತ ಆಗಿರಬೇಕು. ಬಿಜೆಪಿಯವರಿಗೆ ಸಂಸ್ಕೃತಿ ಎಲ್ಲಿಂದ ಬರುತ್ತದೆ. ಕಳೆದ ಎಂಟು ವರ್ಷಗಳಿಂದ ಸುಮ್ಮನಿದ್ದು, ಈಗ ನಮ್ಮ ಅವಧಿಯ ಹಗರಣ ಬಯಲು‌ ಮಾಡುತ್ತೇವೆ ಎನ್ನುವ ಬಿಜೆಪಿ, ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಾಯಿಗೆ ಯಾರಾದರೂ ಹೊಲಿದಿದ್ದಾರಾ? ಅವರ ಬಾಯಲ್ಲಿ ಕಡುಬು ಸಿಕ್ಕಿಹಾಕಿಕೊಂಡಿತ್ತಾ. ನಾನೇನೂ ತನಿಖೆ ಮಾಡಬೇಡಿ ಎಂದಿಲ್ಲ. ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿ ಇರುವವರು ಯಾರು? ಇಷ್ಟು ದಿನ ಸುಮ್ಮನಿದ್ದು ಈಗ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾತನಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.

ಗುಂಡ್ಲುಪೇಟೆ: ವಿ. ಸೋಮಣ್ಣ ಕಪಾಳಮೋಕ್ಷ, ಸಚಿವರು ಹಲ್ಲೆ ಮಾಡಿಲ್ಲ ಎಂದ ಮಹಿಳೆಗುಂಡ್ಲುಪೇಟೆ: ವಿ. ಸೋಮಣ್ಣ ಕಪಾಳಮೋಕ್ಷ, ಸಚಿವರು ಹಲ್ಲೆ ಮಾಡಿಲ್ಲ ಎಂದ ಮಹಿಳೆ

ಹಗರಣಗಳ ಬಗ್ಗೆ ತನಿಖೆ ಮಾಡಿಸಲಿ

ಹಗರಣಗಳ ಬಗ್ಗೆ ತನಿಖೆ ಮಾಡಿಸಲಿ

"ಯಾರ ಹಗರಣ ಬಯಲು ಮಾಡಬೇಕು, ತನಿಖೆ ಮಾಡಬೇಕು. 40% ಸರ್ಕಾರ ಎಂಬ ಆರೋಪ ನಾವು ಮಾಡಿದ ಮೇಲೆ ಹಿಂದಿನ ಸರ್ಕಾರದ ಹಗರಣದ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಧಿಕಾರ ಯಾರ ಕೈಯಲ್ಲಿದೆ. 2006ರಿಂದ ಇಲ್ಲಿಯವರೆಗೆ ಆಗಿರುವ ಹಗರಣಗಳ ಬಗ್ಗೆ ಆಯೋಗ ರಚನೆ ಮಾಡಿ ಸತ್ಯಾಸತ್ಯತೆ ಹೊರತೆಗೆಯಲಿ. ಬೇಡ ಎಂದವರು ಯಾರು? ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದಲ್ಲಿ ಐದು ವರ್ಷ ಇದ್ದಾಗ ಯಾಕೆ ಸುಮ್ಮನಿದ್ದರು. ಎಂಟು ವರ್ಷ ಸುಮ್ಮನಿದ್ದು ಈಗ ತನಿಖೆ ಮಾಡುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ‌. ಕಳೆದ ಮೂರು ವರ್ಷಗಳಿಂದಲೂ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಸರ್ಕಾರದ ವಿರುದ್ದ ಜನರು ಸಿಡಿದೆದ್ದಿದ್ದಾರೆ," ಎಂದು ಕಿಡಿಕಾರಿದ್ದಾರೆ.

ಸಿಐಡಿ ಮೇಲೆ ನಂಬಿಕೆ ಇಲ್ಲ

ಸಿಐಡಿ ಮೇಲೆ ನಂಬಿಕೆ ಇಲ್ಲ

ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ತನಿಖೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಿಲ್ಲ. ಸಿಐಡಿಯಿಂದ ಸತ್ಯಾಸತ್ಯತೆ ಹೊರಬರುತ್ತದೆ ಎಂಬ ವಿಶ್ವಾಸ ನಮಗೆ ಇಲ್ಲ. ಎಡಿಜಿಪಿಯಂತಹ ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ಹೇಗೆ ಪ್ರಶ್ನಿಸುತ್ತಾರೆ. ಹಿರಿಯ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡಿರುತ್ತಾರೆ. ಹಾಗಾಗಿ ಪಿಎಸ್ಐ ಹಗರಣ ತಾರ್ಕಿಕ ಅಂತ್ಯ ಕಾಣುತ್ತದೆ ಎಂದೆನಿಸುತ್ತಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ದಿನ ಸಂಚರಿಸಿದೆ. ಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಯಶಸ್ವಿಯಾಗಿ ಪಾದಯಾತ್ರೆ ನಡೆದಿದೆ. ಲಕ್ಷಾಂತರ ಜನರು ಭಾಗವಹಿಸಿದ್ದಾರೆ. ನಿರೀಕ್ಷೆಗೂ ಮೀರಿ ಜನರ ಸಹಕಾರ, ಸ್ಪಂದನೆ ಸಿಕ್ಕಿದೆ. ಬಿಜೆಪಿ ಆಡಳಿತ ವಿರೋಧಿ ಅಲೆಯಿಂದ ಇಷ್ಟೊಂದು ಜನರು ಬಂದಿದ್ದಾರೆ.

ವಸೂಲಿಗೆ ನಿಂತ ಬಿಜೆಪಿ ಸರ್ಕಾರ

ವಸೂಲಿಗೆ ನಿಂತ ಬಿಜೆಪಿ ಸರ್ಕಾರ

ಸರ್ಕಾರಿ ಶಾಲೆಗಳಲ್ಲಿ ನೂರು ರೂಪಾಯಿ ವಂತಿಗೆ ಸಂಗ್ರಹಕ್ಕೆ‌ ಮುಂದಾಗಿರುವುದು ಸರಿಯಲ್ಲ.‌ ಸರ್ಕಾರಿ ಶಾಲೆಗಳಲ್ಲಿ ಓದುವುದು ಬಡವರ ಮಕ್ಕಳು. ಪ್ರತಿ ಮಗುವಿಗೆ ತಿಂಗಳಿಗೆ ನೂರು ರೂಪಾಯಿ ಪಡೆದರೆ ವರ್ಷಕ್ಕೆ 1,200 ರೂಪಾಯಿ ಆಗುತ್ತದೆ. ನಾವು ಮಕ್ಕಳಿಗೆ ಬಿಸಿಯೂಟ, ಶೂ, ಪಠ್ಯಪುಸ್ತಕ, ಹಾಲು ಸೇರಿದಂತೆ ಹಲವು ರೀತಿಯಲ್ಲಿ ಉಚಿತವಾಗಿ ನೀಡಿದ್ದೆವು. ಆದರೆ ಬಿಜೆಪಿಯವರು ವಸೂಲಿಗೆ ನಿಂತಿದ್ದಾರೆ. ನಾನು ಸಹ ಈ ಸುತ್ತೋಲೆ ಪಡೆಯಲು ಆಗ್ರಹಿಸಿದ್ದೆ. ಬಡವರ ಮಕ್ಕಳಿಂದಲೂ ವಂತಿಗೆ ಹೆಸರಿನಲ್ಲಿ ಹಣ ಸುಲಿಗೆ ಮಾಡಲು ಹೊರಟಿರುವ ಈ ಸರ್ಕಾರದ ನಡೆ ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಭ್ರಷ್ಟಾಚಾರ ಮಾಡಿದಾಗ ಭ್ರಷ್ಟ ಎಂದು ಹೇಳಲು ಅಧಿಕಾರ ಇಲ್ವಾ? ಪೇಸಿಎಂ ಅಭಿಯಾನ‌ ನಡೆಸಿದವರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿರುವ ಕ್ರಮಕ್ಕೆ‌ ನಮ್ಮ ವಿರೋಧ ಇದೆ‌. ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ‌ ಮಾಡಬಾರದಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ಪಿ. ರಾಜ್‌ಕುಮಾರ್ ನನ್ನ ಆತ್ಮೀಯ ಸ್ನೇಹಿತರಾಗಿದ್ದಾರೆ. ನಿನ್ನೆ ರಾತ್ರಿ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ವಿಷಯ ತಿಳಿದು ಬೇಸರವಾಯಿತು. ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬಂದಿದ್ದೇನೆ. ಅಂತಿಮ ದರ್ಶನವನ್ನು ಪಡೆದು ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅವರಿಗೆ ಇನ್ನು 62 ವರ್ಷ ಆಗಿದ್ದು, ಅರರದ್ದು ಸಾಯುವ ವಯಸ್ಸಲ್ಲ. ಅವರ ಆತ್ಮಕ್ಕೆ ದೇವರು ಶಾಂತಿ‌ ಕೊಡಲಿ ಎಂದು ಸಂತಾಪ ಸೂಚಿಸಿದರು.

English summary
Minister V Somanna slpaped woman in Hangala village of Gundlupet taluk, Siddaramaiah expressed anger in Davangere and said BJP has lost humanity. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X