ನಕಲಿ ಬಂಗಾರದ ಆಸೆಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡ ಬೆಂಗಳೂರಿಗ
ದಾವಣಗೆರೆ, ಫೆಬ್ರವರಿ 05: ವ್ಯಕ್ತಿಯೊಬ್ಬರಿಗೆ ಕಡಿಮೆ ಬೆಲೆಯಲ್ಲಿ ಕೆಜಿಗಟ್ಟಲೇ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ 3.50 ಲಕ್ಷ ವಂಚಿಸಿರುವ ಪ್ರಕರಣ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮೂಡಲಪಾಳ್ಯದ ನಿವಾಸಿ ಶ್ರೀನಿವಾಸ ಮೋಸ ಹೋದವರಾಗಿದ್ದು, ಶಿವಮೊಗ್ಗದ ಹರೀಶ್ ಹಾಗೂ ಆತನ ಸಹಚರ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಹೋಟೆಲ್‌ನಲ್ಲಿ ಕೆಲಸ ಮಾಡುವ ಶ್ರೀನಿವಾಸ್‌ಗೆ ಕರೆ ಮಾಡಿದ ಹರೀಶ್, ""ನಾನು ನಿಮ್ಮ ಹೋಟೆಲ್‌ಗೆ ಪ್ರತಿ ದಿವಸ ಬರುತ್ತೇನೆ. ನೀವು ನನ್ನನ್ನು ನೋಡಿದ್ದೀರಿ'' ಎಂದು ಪರಿಚಯ ಮಾಡಿಕೊಂಡಿದ್ದಾನೆ .
ಮತ್ತೊಂದು ದಿನ ಕರೆ ಮಾಡಿ, ""ಕಲಬುರಗಿಯಲ್ಲಿರುವ ನನ್ನ ಅಜ್ಜ ಒಂದು ತಿಂಗಳ ಹಿಂದೆ ಮನೆಯ ಪಾಯ ತೆಗೆಯುತ್ತಿರುವಾಗ ನಿಧಿ ಸಿಕ್ಕಿದೆ. ನಿಮಗೆ ಬೇಕಾದರೆ ಒಂದು ಕೆಜಿಯಷ್ಟು ತಂದು ಕೊಡುತ್ತೇನೆ . ಈ ವಿಷಯವನ್ನು ಯಾರಿಗೂ ಹೇಳಬೇಡಿ. ಸ್ಯಾಂಪಲ್ ಕೊಡುತ್ತೇನೆ ಶಿವಮೊಗ್ಗಕ್ಕೆ ಬನ್ನಿ'' ಎಂದು ತಿಳಿಸಿದ್ದಾನೆ.

ಹರೀಶ್ ಮಾತನ್ನು ನಂಬಿದ ಶ್ರೀನಿವಾಸ ಶಿವಮೊಗ್ಗಕ್ಕೆ ಬಂದಿದ್ದಾರೆ. ನಂತರ ಅವರನ್ನು ಹರೀಶ್ ಚೀಲೂರಿಗೆ ಕರೆಸಿಕೊಂಡಿದ್ದಾನೆ. ಒಂದು ಬಿಲ್ಲೆಯನ್ನು ನೀಡಿದ್ದಾನೆ. ಇದನ್ನು ಪರೀಕ್ಷಿಸಿದಾಗ ಅದು ಅಸಲಿ ಬಂಗಾರವಾಗಿತ್ತು. ""5 ಲಕ್ಷ ರುಪಾಯಿ ಕೊಟ್ಟರೆ ಒಂದು ಕೆಜಿ ಬಂಗಾರ ನೀಡುತ್ತೇನೆ'' ಎಂದು ಹರೀಶ್ ನಂಬಿಸಿದ್ದಾನೆ.

ಶ್ರೀನಿವಾಸ್ ಅವರು ಕಳೆದ ಜನವರಿಯಲ್ಲಿ 3.50 ಲಕ್ಷ ತೆಗೆದುಕೊಂಡು ಚೀಲೂರಿಗೆ ಬಂದಿದ್ದಾರೆ. ಆಗ ಆರೋಪಿಗಳು ನಕಲಿ ಬಂಗಾರ ನೀಡಿ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ನಂತರ ಮನೆಗೆ ಹೋಗಿ ಪರೀಕ್ಷಿಸಿದಾಗ, ಕೆಜಿಗಟ್ಟಲೆ ನಕಲಿ ಬಂಗಾರ ಇರುವುದು ಗೊತ್ತಾಗಿದ್ದ, ಈ ಪ್ರಕರಣ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.












Click it and Unblock the Notifications