ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ: ಕಾರಣ ಏನು ಗೊತ್ತಾ?
ರಾಜಕೀಯದಲ್ಲಿ ಉಚ್ಛಾಟನೆಗಳು ನಡೆಯುತ್ತಿರುತ್ತವೆ. ಆದರೆ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪಂಚಮಸಾಲಿ ಪೀಠಾದ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಹಾಗಾದ್ರೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ. ಪೀಠದಲ್ಲಿ, ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಕಾರ್ಯದರ್ಶಿ ನೀಲಕಂಠ ಅಸೂಟಿ ಸೇರಿದಂತೆ ಹಲವು ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮ ಆಸ್ತಿಗಳನ್ನು ಮಾಡಿದ್ದಾರೆ. ಹಾಗೂ ಲಿಂಗಾಯತ ಧರ್ಮವಿರೋಧಿ ಹೇಳಿಕೆ ಸೇರಿದಂತೆ ಹಲವು ಕಾರಣಗಳನ್ನು ಆರೋಪ ಹೊರಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನಿರ್ಧಾರ ತೆಗೆದುಕೊಂಡಿದೆ. ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಗ್ಗೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಮುದಾಯದ ಮುಖಂಡರ ಕಾರ್ಯಕಾರಿಣಿ ಸಭೆಯಲ್ಲಿ ಸ್ವಾಮೀಜಿ ಉಚ್ಚಾಟನೆ ತೀರ್ಮಾನ ಮಾಡಲಾಗಿದೆ. ಅಕ್ರಮ ಆಸ್ತಿ ಗಳಿಕೆ, ಲಿಂಗಾಯತ ಧರ್ಮ ವಿರೋಧಿ ಹೇಳಿಕೆ ಆರೋಪ ಮಾಡಲಾಗಿದೆ. ಅವರು ಕಾರ್ಯನಿರತರಿರಲಿಲ್ಲ. ಸನ್ಯಾಸಿಗೆ ಇರುವಂತಹ ಮೂಲಭೂತ ಲಕ್ಷಣ ಕಡಿಮೆಯಾಗಿವೆ. ಸ್ವಾಮೀಜಿಗಳ ಬಗ್ಗೆ ತುಂಬಾ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಟ್ರಸ್ಟ್ ಮಾತು ಕೇಳುತ್ತಿರಲಿಲ್ಲ. ಅವರದ್ದು ದೊಡ್ಡ ಫೈಲೇ ಇದೆ ಎಂದು ನೀಲಕಂಠ ಅಸೂಟಿ ಹೇಳಿದ್ದಾರೆ.
ಕೊನೆಗೂ ಸಭೆಯಲ್ಲಿ ಪೀಠದಿಂದ ಅವರನ್ನು ಉಚ್ಛಾಟನೆ ಮಾಡಬೇಕೆಂದು ಎಂದು ನಿರ್ಧಾರ ಆಯಿತು. ಅಕ್ರಮವಾಗಿ ಆಸ್ತಿ ಮಾಡಿದ್ದಾರೆ. ಈ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ತುಂಬಾ ದಿನಗಳಿಂದ ಕಾಯುತ್ತಿದ್ದವು. 2014ರಲ್ಲಿ ನೋಟಿಸ್ ನೀಡಿದ್ದೆವು. ಪೂರ್ಣ ಬಹುಮತದ ಟ್ರಸ್ಟ್ ಇದೀಗ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಮಠಕ್ಕೂ, ಸ್ವಾಮೀಜಿಗೂ ಇನ್ಮುಂದೆ ಯಾವುದೇ ರೀತಿಯ ಸಂಬಂಧ ಇಲ್ಲ ಅಂತಲೂ ಹೇಳಿದರು. ಇಷ್ಟು ದಿನ ರಾಜಕಾರಣಿಗಳನ್ನು ಪಕ್ಷದ ವಿರುದ್ಧ ಮಾತನಾಡಿದ್ದಾರೆ ಅಥವಾ ದ್ರೋಹ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಉಚ್ಛಾಟನೆ ಮಾಡಲಾಗುತ್ತಿತ್ತು. ಆದರೆ, ಇದೀಗ ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಇನ್ನಿತರೆ ಆರೋಪ ಹೊರಿಸಿ ಸ್ವಾಮೀಜಿಯನ್ನೇ ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೆ, ಅವರನ್ನು ಮಠದಿಂದ ದೂರ ಇರುವಂತೆಯೂ ಸಹ ಹೇಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications