ಯತ್ನಾಳ್ ಒಬ್ಬ ಹುಚ್ಚುನಾಯಿ, ಯಡಿಯೂರಪ್ಪ ಆನೆ ಇದ್ದಂಗೆ: ರೇಣುಕಾಚಾರ್ಯ ಹೀಗೆ ಹೇಳಿದ್ದೇಕೆ?-ಇಲ್ಲಿದೆ ಮಾಹಿತಿ
ದಾವಣಗೆರೆ, ಡಿಸೆಂಬರ್, 17: ಬಿಜೆಪಿ ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರೌದ್ರಾವತಾರ ತಾಳಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ಯತ್ನಾಳ್ ಹುಚ್ಚುನಾಯಿ ಎಂದು ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯತ್ನಾಳ್ ಬಗ್ಗೆ ಮಾತನಾಡಲು ಅಸಹ್ಯ, ನಾಚಿಕೆಯಾಗುತ್ತದೆ. ಅಸಂಬದ್ಧ, ಅಶ್ಲೀಲ ಪದ ಬಳಕೆ ಮಾಡುವುದು ಅವರ ವೃತ್ತಿ. ಹುಚ್ಚುನಾಯಿ ರೀತಿ ವರ್ತನೆ ಮಾಡುತ್ತಿದ್ದಾರೆ. ನಾಯಿ ಮೊದಲು ಮನೆಯಲ್ಲಿರುತ್ತೆ. ಹುಚ್ಚು ಹಿಡಿದಾಗ ಬೀದಿಗೆ ಬಂದು ಬೊಗಳುತ್ತೆ. ಹುಚ್ಚುನಾಯಿ ಬೊಗಳಿದರೆ ಆನೆ ತೂಕ ಕಡಿಮೆಯಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ನಾಯಿ ಬೊಗಳಿದರೆ ಸ್ವರ್ಗಲೋಕ ಹಾಳಾಗುವುದಿಲ್ಲ. ನನ್ನ ವಿರುದ್ಧ ಟೀಕೆ ಮಾಡಲು ನಾಯಿ ಹಾಗೂ ಹಂದಿಗಳನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಿಟ್ಟಿದ್ದಾರೆ ಎಂದು ಹೇಳಿರುವ ಯತ್ನಾಳ್ ಒಬ್ಬ ಹುಚ್ಚುನಾಯಿ. ನಾಯಿಗೆ ಇರುವ ನಿಯತ್ತು ಮನುಷ್ಯನಿಗಿಲ್ಲ. ಜೆಡಿಎಸ್‌ನಿಂದ ಬಿಜೆಪಿಗೆ ಕರೆದುಕೊಂಡು ಬಂದದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಕೇಂದ್ರ ಸಚಿವರನ್ನಾಗಿ ಮಾಡಿದ್ದು ಯಡಿಯೂರಪ್ಪ. ಆದ್ರೆ, ಯತ್ನಾಳ್‌ಗೆ ನಿಯತ್ತು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ, ಅಭಿವೃದ್ದಿ ಬಗ್ಗೆ ಬೆಳಕು ಚೆಲ್ಲುವಂತಹ ಕೆಲಸ ಮಾಡಲಿಲ್ಲ. ಮೆದುಳಿಗೂ ಹಾಗೂ ನಾಲಗೆಗೂ ಲಿಂಕ್ ಇಲ್ಲದಂತೆ ಮಾತನಾಡುತ್ತಿದ್ದಾರೆ. ವಿಜಯೇಂದ್ರರ ವಿರುದ್ಧ ಮಾತನಾಡಿದ್ದು ಬಿಟ್ಟರೆ ಬೇರೆ ಏನು ಮಾಡಲಿಲ್ಲ. ಇಷ್ಟು ದಿನ ಗೌರವ ಇತ್ತು. ಇನ್ಮುಂದೆ ಗೌರವ ಕೊಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದು ಯಡಿಯೂರಪ್ಪ ಅಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂತೋಷ್ ಜಿ ಅವರು. ವಿಜಯೇಂದ್ರರನ್ನು ಆಯ್ಕೆ ಮಾಡಿದವರನ್ನು ಟೀಕಿಸಿದರೆ ಪ್ರಧಾನಿ ಮೋದಿ ಅವರ ವಿರುದ್ಧ ಮಾತನಾಡಿದಂತೆ ಎಂದು ಗುಡುಗಿದರು.
ಯಡಿಯೂರಪ್ಪ ಅವರು ನಡೆದುಕೊಂಡು ಹೋದರೆ ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಅಲ್ಲಿನ ಮಣ್ಣು ತೆಗೆದುಕೊಂಡು ಹಣೆಗೆ ಹಚ್ಚಿಕೊಳ್ಳುತ್ತಿದ್ದರು. ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದಾರೆ. ಪಾದಯಾತ್ರೆ, ಹೋರಾಟದ ಮೂಲಕ ಪಕ್ಷ ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ ಎಂದರು.
ಇನ್ನು ಪಕ್ಷಕ್ಕೆ ಯತ್ನಾಳ್ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಹುಚ್ಚುನಾಯಿ ಬೊಗಳಿದ ಹಾಗೆ ಬೊಗಳುತ್ತೀಯಾ. ಹುಚ್ಚುನಾಯಿ ಬೊಗಳಿದರೆ ದೇವಲೋಕ ಹಾಳಾಗದು. ಇನ್ಮುಂದೆ ಮಾತನಾಡಿದರೆ ಸಹಿಸಲ್ಲ. ಗೌರವ ಕೊಡಲ್ಲ. ನಾಯಿಗೆ ಇರುವ ನಿಯತ್ತು ಐತಾ? ನಾವು ನಾಯಿ ಮರಿಗಳೇ. ನಮ್ಮನ್ನು ಬೊಗಳಲು ಬಿಟ್ಟಿಲ್ಲ. ಪಕ್ಷ ಸಂಘಟನೆಗೆ ಬಿಟ್ಟಿದ್ದಾರೆ ಎಂದು ಹೇಳಿದರು.

ರಾಜಕಾರಣದಲ್ಲಿ ಯಡಿಯೂರಪ್ಪ ಅವರು ಎಂದಿಗೂ ಕೀಳು ಭಾಷೆ ಬಳಸಿಲ್ಲ, ಯಾರನ್ನೂ ಎತ್ತಿ ಕಟ್ಟುವ ಕೆಲಸ ಮಾಡಲ್ಲ. ಸೋಮಣ್ಣ ಅವರನ್ನು ಸೋಲಿಸಲು ಯಡಿಯೂರಪ್ಪ, ವಿಜಯೇಂದ್ರ ಕಾರಣರಲ್ಲ. ಶಿಕಾರಿಪುರದಲ್ಲಿ ವಿಜಯೇಂದ್ರ ಸೋಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದವರು ನಿಮ್ಮಂಥವರು. ಕುತಂತ್ರ ಮಾಡಿದರೂ ವಿಜಯೇಂದ್ರ ಅವರು ಗೆದ್ದರು. ಎಲ್ಲಾ ನಾಯಕರು, ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಗೆಲ್ಲಬೇಕಿದೆ ಎಂಬ ನಿರ್ಧಾರ ಮಾಡಿ ಹೋರಾಡುತ್ತಿದ್ದಾರೆ ಎಂದರು.
ಪಕ್ಷಕ್ಕೆ ಹಿನ್ನೆಡೆ ತರುವ ಸಲುವಾಗಿ ಈ ರೀತಿಯಾಗಿ ಯತ್ನಾಳ್ ಮಾತನಾಡುತ್ತಿದ್ದಾರೆ. ಎಷ್ಟು ದಿನಗಳವರೆಗೆ ಈ ರೀತಿ ಮಾತನಾಡುತ್ತಾರೋ ಅಲ್ಲಿಯವರೆಗೆ ಪಕ್ಷಕ್ಕೆ ಹಾನಿಯಾಗಲಿದೆ. ವರಿಷ್ಠರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸಿ.ಸಿ.ಪಾಟೀಲ್, ಶಂಕರ್ ಮುನೇನಕೊಪ್ಪ ಹೇಳಿಕೆ ಹತಾಶ ಮನೋಭಾವನೆಯಿಂದ ಕೂಡಿದೆ. ರಾಜ್ಯಾಧ್ಯಕ್ಷ ಇಲ್ಲವೇ ವಿಪಕ್ಷ ನಾಯಕನಾಗಬೇಕಿತ್ತು ಎಂಬ ಆಸೆ ಯತ್ನಾಳ್‌ಗಿತ್ತು. ಅದೂ ಆಗಲಿಲ್ಲ ಎಂಬ ಕಾರಣಕ್ಕೆ ಈಗ ಬೀದಿಯಲ್ಲಿ ಬೊಗಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಅನುಭವದ ಆಧಾರದ ಮೇಲೆ ರಾಜಕಾರಣ ಮಾಡಬೇಕು. ಎಲುಬಿಲ್ಲದ ನಾಲಗೆಯ ರೀತಿ ಮಾತನಾಡಿದರೆ ಜನರೇ ತಕ್ಕ ಉತ್ತರ ಕೊಡುತ್ತಾರೆ. ಪ್ರತಿನಿತ್ಯ ವಿಜಯೇಂದ್ರ, ಯಡಿಯೂರಪ್ಪರ ವಿರುದ್ಧ ಮಾತನಾಡಲು, ಬೊಗಳಲು ಯಾರು ಬಿಟ್ಟಿದ್ದಾರೆ ಎಂದು ಏಕವಚನಕದಲ್ಲಿಯೇ ವಾಗ್ದಾಳಿ ನಡೆಸಿದರು. ನಾವೇನಾದರೂ ಮಾತನಾಡಿದರೆ ಯಡಿಯೂರಪ್ಪ ಅವರು ಕರೆದು ನಮಗೆ ಬೈಯ್ಯುತ್ತಾರೆ. ನೀವು ಮಾತನಾಡಬೇಡಿ ಎಂದು ಹೇಳುತ್ತಾರೆ. ಸೋಮಣ್ಣ ಸೋಲಿಗೆ ಕಾರಣ ಅವರಲ್ಲ. ಇನ್ನು ಮುಂದಾದರೂ ಯಡಿಯೂರಪ್ಪ, ವಿಜಯೇಂದ್ರರ ವಿರುದ್ಧ ಮಾತನಾಡಬಾರದು. ಇದೇ ಧೋರಣೆ ಮುಂದುವರೆಸಿದರೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications